ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ಉದ್ಘಾಟನೆ: ಮಹೇಶ್ ಜೋಶಿ ಭಿತ್ತಿಪತ್ರಕ್ಕೆ ಆಕ್ಷೇಪ

Published 23 ಜನವರಿ 2024, 15:54 IST
Last Updated 23 ಜನವರಿ 2024, 15:54 IST
ಅಕ್ಷರ ಗಾತ್ರ

ಬೆಂಗಳೂರು: ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಅವರು, ಅಭಿನಂದನೆ ಸಲ್ಲಿಸಿ ಹಂಚಿಕೊಂಡಿದ್ದ ಭಿತ್ತಿಪತ್ರಕ್ಕೆ ಸಾಹಿತಿಗಳೂ ಸೇರಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಿತ್ತಿಪತ್ರದಲ್ಲಿ ಕಸಾಪ ಲಾಂಛನ ಬಳಸಿಕೊಂಡಿರುವುದಕ್ಕೆ ಕವಿಗಳಾದ ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಎಲ್.ಎನ್. ಮುಕುಂದರಾಜ್, ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಲೇಖಕರಾದ ಕಾ.ತ. ಚಿಕ್ಕಣ್ಣ, ಆರ್‌.ಜಿ.ಹಳ್ಳಿ ನಾಗರಾಜ್‌, ಪ್ರಕಾಶಕ ನಿಡಸಾಲೆ ಪುಟ್ಟಸ್ವಾಮಯ್ಯ ಹಾಗೂ ವಿಮರ್ಶಕ ದಂಡಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮಹೇಶ ಜೋಶಿ ಅವರು ಅಭಿನಂದನೆ ಸಲ್ಲಿಸಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಕನ್ನಡ ಸಾಹಿತ್ಯ ಪರಿಷತ್ತಿನ ಲಾಂಛನವನ್ನು ಬಳಸಿಕೊಂಡು, ಪರಿಷತ್ತಿನ ಸ್ವಾಯತ್ತತೆಗೆ ಕುಂದು ತರುವ ರೀತಿಯಲ್ಲಿ ಚಿತ್ರಾಭಿನಂದನೆ ಸಲ್ಲಿಸಿರುವುದು ಕಸಾಪ ಅಧ್ಯಕ್ಷತೆಗೆ ತಕ್ಕ ನಡವಳಿಕೆಯಲ್ಲ. ಕನ್ನಡ ಕವಿಗಳು ಚಿತ್ರಿಸಿರುವ ಶ್ರೀರಾಮಚಂದ್ರ ಬೇರೆ, ಈ ದ್ವೇಷ ರಾಜಕಾರಣದ ಶ್ರೀರಾಮನ ಬಳಕೆಯೇ ಬೇರೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಗಾಂಧೀಜಿ, ಲೋಹಿಯಾ ಅವರ ಶ್ರೀರಾಮನನ್ನು ಕನ್ನಡ ಕವಿಗಳು ಚಿತ್ರಿಸಿದ್ದಾರೆ. ಗೋಪಾಲಕೃಷ್ಣ ಅಡಿಗರು ಹೇಳುವಂತೆ ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತಿತೇನು ಪುರುಷೋತ್ತಮನ ಆ ಅಂಥ ರೂಪು ರೇಖೆ?’ ಈ ಬಗೆಯಲ್ಲಿ ಲೋಕೋತ್ತರ ವ್ಯಕ್ತಿತ್ವ ಸಂಪನ್ನ ಪುರುಷೋತ್ತಮ ಶ್ರೀರಾಮ. ಬಿಜೆಪಿ ಅವರ ರಾಜಕಾರಣದ ಶ್ರೀರಾಮ ದ್ವೇಷ ಬಿತ್ತುವ ರಾಜಕಾರಣದಲ್ಲಿ ಹುಟ್ಟಿದವನಾಗಿದ್ದಾನೆ. ಕಸಾಪ ಅಧ್ಯಕ್ಷರು ಈ ಸೂಕ್ಷ್ಮಗಳನ್ನು ಅರಿತು, ಸಮಾಹಿತ ನಡೆಯ ಮುಖೇನ ಕನ್ನಡ ಪ್ರಜ್ಞೆಯನ್ನು ಮುನ್ನಡೆಸುವ ಹೊಣೆಗಾರಿಕೆಯಿಂದ ನಡೆದುಕೊಳ್ಳ ಬೇಕಾಗುತ್ತದೆ. ಪಕ್ಷ ರಾಜಕಾರಣಿಯಂತೆ ವರ್ತಿಸುವುದು ಅಧ್ಯಕ್ಷತೆಯ ಘನತೆಗೆ ಕುಂದುಂಟು ಮಾಡುತ್ತದೆ’ ಎಂದು ತಿಳಿಸಿದ್ದಾರೆ. 

ಮಹೇಶ ಜೋಶಿ ಅವರು ತಮ್ಮ ಭಿತ್ತಿಪತ್ರದಲ್ಲಿ ಕನ್ನಡ ಸಾಹಿತ್ಯ ಲೋಕವು ಹಳಗನ್ನಡ ಕಾವ್ಯ ಹಾಗೂ ಗದ್ಯಾನುವಾದದ ಮೂಲಕ ರಾಮಾಯಣ ಕೃತಿಗಳ ಕೊಡುಗೆ ಬಗ್ಗೆ ಉಲ್ಲೇಖಿಸಿದ್ದರು. ‘ಶ್ರೀರಾಮನ ಉದಾತ್ತ ಮೌಲ್ಯಗಳು, ಸಾಮಾಜಿಕ ನಿಲುವುಗಳು, ತಾತ್ವಿಕ ವಿಚಾರಗಳು ವಿಶ್ವದಾದ್ಯಂತ ಪಸರಿಸಲಿ. ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಭಾರತದ ಶ್ರೇಷ್ಠತೆಯ ಸಂಕೇತ’ ಎಂದು ಹೇಳಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT