ಮಂಗಳವಾರ, ಏಪ್ರಿಲ್ 13, 2021
31 °C

ಐತಿಹಾಸಿಕ ರಸ್ತೆಗಳಿಗೆ ಮರು ನಾಮಕರಣ ಸರಿಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶತಮಾನಗಳಿಂದಲೂ ಕರೆಯುತ್ತ ಬಂದಿರುವ ರಸ್ತೆಗಳ ಐತಿಹಾಸಿಕ ಹೆಸರುಗಳನ್ನು ಏಕಾಏಕಿ ಬದಲಾಯಿಸಲಾಗುತ್ತಿದೆ. ಹಾಗಾದರೆ ಸಾರ್ವಜನಿಕರ ಭಾವನೆಗಳಿಗೆ ಬೆಲೆ ಇಲ್ಲವೇ? ಎಂಬ ಚರ್ಚೆ ಈಗ ನಗರದಲ್ಲಿ ಹುಟ್ಟಿಕೊಂಡಿದೆ.

ಹೆಸರು ಬದಲಿಸಿದಾಕ್ಷಣ ಜನರು ಹಳೆಯ ಹೆಸರನ್ನು ಮರೆಯುತ್ತಿಲ್ಲ. ಫ್ರೇಸರ್‌ ಟೌನ್‌ ಎಂದೇ ಹೆಸರುವಾಸಿಯಾಗಿರುವ ಪ್ರದೇಶಕ್ಕೆ ಪುಲಿಕೇಶಿನಗರ ಎಂದು ಕರೆಯಲಾಯಿತು. ಆದರೆ ಜನರು ಇಂದಿಗೂ ಇದನ್ನು ಫ್ರೇಸರ್ ಟೌನ್‌ ಎಂದೇ ಕರೆಯುತ್ತಾರೆ. ಈ ಹೆಸರಿನ ಮೇಲಿರುವ ಪ್ರೀತಿ ಮಾತ್ರ ಬದಲಾಗಿಲ್ಲ. ರಿಚ್‌ಮಂಡ್‌ ಟೌನ್‌ಗೆ ಸರ್‌ ಮಿರ್ಜಾ ಇಸ್ಮಾಯಿಲ್‌ ನಗರ ಎಂದು ಹೆಸರಿಡಲಾಗಿದೆ. ಆದರೆ ಜನರು ಮೊದಲಿನ ಹೆಸರಿಗೇ ಬದ್ಧರಾಗಿದ್ದಾರೆ.

ಇತಿಹಾಸ ಪ್ರಸಿದ್ಧವಾಗಿರುವ ಬ್ರಿಗೇಡ್‌ ರಸ್ತೆಗೆ ಜಾರ್ಜ್‌ ಫರ್ನಾಂಡಿಸ್‌ ಹೆಸರಿಡಲು ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ಹಿರಿಯ ರಾಜಕಾರಣಿಯ ಬಗ್ಗೆ ಗೌರವವಿದೆ. ಆದರೆ ಈ ರೀತಿ ಎಲ್ಲಾ ನಗರ, ರಸ್ತೆಗಳ ಹೆಸರುಗಳನ್ನು ಬದಲಿಸಿ ವ್ಯಕ್ತಿ ನಾಮಕರಣ ಮಾಡಿದರೆ ಇತಿಹಾಸದ ನೆನಪು ಮಾಸಿಹೋಗುವುದಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.

ಕಾಂಗ್ರೆಸ್‌ ಕಾರ್ಪೊರೇಟರ್‌ಗಳು ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣಕ್ಕೆ ಸಿ.ಕೆ.ಜಾಫರ್‌ ಶರೀಫ್‌ ಹೆಸರಿಡುವಂತೆ ಒತ್ತಾಯಿಸುತ್ತಿದ್ದಾರೆ. ಕೇಂದ್ರದಲ್ಲಿ ಶರೀಫ್‌ ಅವರು ರೈಲ್ವೆ ಮಂತ್ರಿಯಾಗಿದ್ದರು. ಮೇಯರ್‌ ಸಂಪತ್‌ ರಾಜ್‌ ಅವರು ರಾಜರಾಜೇಶ್ವರಿ ನಗರಕ್ಕೆ ಡಿ.ಕೆ.ಶಿವಕುಮಾರ್‌ ಅವರ ತಂದೆ ದೊಡ್ಡ ಆಲದಹಳ್ಳಿ ಕೆಂಪೇಗೌಡ ಅವರ ಹೆಸರಿಡುವಂತೆ ಸಲಹೆ ನೀಡಿ ಸುದ್ದಿಯಾಗಿದ್ದರು.

‘ನಗರಕ್ಕೆ ಹೊಂದಿಕೊಳ್ಳದ ಹೆಸರಾಗಿದ್ದರೆ ಬದಲಾಯಿಸುವುದರಲ್ಲಿ ತಪ್ಪಿಲ್ಲ’ ಎಂದು ಶಾಸಕಿ ಸೌಮ್ಯಾರೆಡ್ಡಿ ಹೇಳಿದ್ದಾರೆ.

‘ಹೆಸರು ಬದಲಿಸುವುದು ರಾಜಕೀಯವಾಗಿದೆ. ಐತಿಹಾಸಿಕ ಹೆಸರನ್ನು ಬದಲಿಸಿ ತಮ್ಮ ಪಕ್ಷ  ಅಥವಾ ಕುಟುಂಬದವರ ಹೆಸರು ಇಡಲು ಒತ್ತಾಯಿಸಲಾಗುತ್ತಿದೆ. ಈ ರೀತಿಯ ವ್ಯಕ್ತಿ ನಾಮಕರಣಕ್ಕೆ ನನ್ನ ವಿರೋಧವಿದೆ’ ಎಂದು ಯುವ ರಾಜಕಾರಣಿಯೊಬ್ಬರು ಅಭಿಪ್ರಾಯಪಟ್ಟರು.


ಜಯಶ್ರೀ ಕಾಸರವಳ್ಳಿ

ಅಸ್ತಿತ್ವ ಕಳೆದುಕೊಳ್ಳಲಿದೆ

ಬ್ರಿಟಿಷರ ಕಾಲದಲ್ಲಿ ಬ್ರಿಗೇಡ್‌ ರಸ್ತೆ ಎಂದು ಕರೆಯಲಾಗಿದೆ. ಈಗ ಆ ರಸ್ತೆಗೆ ಯಾವುದೇ ಹೆಸರಿಟ್ಟರೂ ಅದು ತನ್ನ ಅಸ್ತಿತ್ವ

ಕಳೆದುಕೊಳ್ಳಲಿದೆ. ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದಾಗ ಅಲ್ಲಿದ್ದ ಬೇರೆ ಭಾಷೆಯ ಹೆಸರುಗಳನ್ನು ಬದಲಿಸಿ ತಮಿಳಿನ ಹೆಸರು ಇಡಲಾಯಿತು. ಅಲ್ಲಿ ಇದ್ದಿದ್ದು ಒಂದೇ ಉದ್ದೇಶ. ತಮಿಳು ಬೆಳೆಯಬೇಕು. ಆದರೆ ಕರ್ನಾಟಕದಲ್ಲಿ ಹೆಸರು ಬದಲಾಯಿಸುವುದಕ್ಕೆ ಯಾವುದೇ ಒಂದು ನಿರ್ದಿಷ್ಟ ಕಾರಣ ಇದ್ದಂತಿಲ್ಲ.  ಚಿಕ್ಕವಯಸ್ಸಿನಿಂದಲೂ ಗಾಂಧಿ ಬಜಾರ್‌, ಬಸವನಗುಡಿ ರಸ್ತೆಯೊಡನೆ ನನಗೆ ನನ್ನದೇ ಆದ ಸಾಂಸ್ಕೃತಿಕ ಅಭಿವ್ಯಕ್ತಿ ಇದೆ. ಈಗ ಅದನ್ನು ಬದಲಿಸಲು ಯಾರಾದರೂ ಬಂದರೆ ಖಂಡಿತಾ ಮನಸ್ಸಿಗೆ ನೋವಾಗುತ್ತದೆ. ಅದೇ ರೀತಿ ಬ್ರಿಗೇಡ್‌ ರಸ್ತೆ ಎಂದಾಕ್ಷಣ ಕಣ್ಣಿಗೆ ಕಟ್ಟುವ ಆ ಅಭಿವ್ಯಕ್ತಿ, ಗುರುತಿಸುವಿಕೆಯನ್ನೇ ಆ ರಸ್ತೆ ಕಳೆದುಕೊಳ್ಳಲಿದೆ.

–ಜಯಶ್ರೀ ಕಾಸರವಳ್ಳಿ, ಲೇಖಕಿ

ಹೊಸ ರಸ್ತೆಗಳಿಗೆ ಇಡಲಿ

ಎಷ್ಟೋ ಕಡೆ ಇನ್ನೂ ಸರಿಯಾಗಿ ರಸ್ತೆಗಳಿಲ್ಲ. ಅಂತಹ ಕಡೆ ರಸ್ತೆ ನಿರ್ಮಿಸಿ ಅಲ್ಲಿಗೆ ಹೆಸರು ಇಡಲಿ. ಅದು ಬಿಟ್ಟು ಐತಿಹಾಸಿಕ ರಸ್ತೆಗಳ ಹೆಸರು ಬದಲಿಸಿದರೆ ಜನರು ಸುಮ್ಮನೆ ಇರೋದಿಲ್ಲ. ಮೊದಲು ಚರ್ಚ್‌ ಸ್ಟ್ರೀಟ್‌ಗೆ ಹೋದರೆ ಅಲ್ಲಿ ಚರ್ಚ್ ಕಾಣುತ್ತಿತ್ತು. ಅದಕ್ಕೆ ಆ ಹೆಸರು ಇಟ್ಟರು. ಈಗ ಅಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ಆದ ಮೇಲೆ ಚರ್ಚ್‌ ಕಾಣುತ್ತಿಲ್ಲ. ಎಲ್ಲಾ ಹೆಸರುಗಳಿಗೂ ಅದರದ್ದೇ ಆದ ಹಿನ್ನೆಲೆ, ಇತಿಹಾಸ ಇದೆ. ಅದನ್ನು ಬದಲಿಸಿದರೆ ಅಸ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ.

–ಬಿ.ಎಂ.ಗಿರಿರಾಜ್‌, ಸಿನಿಮಾ ನಿರ್ದೇಶಕ

ಮತ ರಾಜಕಾರಣ ಬೇಡ

ರಸ್ತೆಗೆ ತಮಗೆ ಬೇಕಾದವರ ಹೆಸರಿಟ್ಟು ಮತ ಕೇಳುವ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. ಚಾಮರಾಜಪೇಟೆಗೆ ಟಿಪ್ಪೂ ಸುಲ್ತಾನ್ ಹೆಸರಿಡಿ ಎಂದು ಹೇಳುತ್ತಿದ್ದಾರೆ. ನಿಜವಾಗಿ ಅರ್ಹತೆ ಇರುವ ಮಹಾತ್ಮರ ಹೆಸರುಗಳನ್ನು ರಸ್ತೆಗೆ ಇಡುವುದು ಬೇಡ. ಜನರಿಗೆ ಇಷ್ಟವಾಗುವ ಹೆಸರಿನಿಂದ ಕರೆದುಕೊಳ್ಳುತ್ತಾರೆ. ಎಲ್ಲಿ ಬೇಕಲ್ಲಿ ಮೂರ್ತಿಗಳನ್ನು ಇಡುವುದು, ಸ್ಮಾರಕ ನಿರ್ಮಿಸುವುದು..ಯಾಕೆ ಬೇಕು ಇವೆಲ್ಲಾ. ಇದರಿಂದ ಜನರ ಸಮಸ್ಯೆ ನೀಗುತ್ತದೆಯೇ?

–ಸಾಯಿದತ್, ಸಾಮಾಜಿಕ ಕಾರ್ಯಕರ್ತ

ಸ್ವೀಕೃತಗೊಂಡ ಹೆಸರುಗಳು

* ಸೌತ್‌ ಪೆರೇಡ್ ರಸ್ತೆ–ಎಂ.ಜಿ.ರಸ್ತೆ

* ದೊಡ್ಡಪೇಟೆ–ಅವಿನ್ಯೂ ರಸ್ತೆ

* ಕ್ಯಾವೆಲ್ರಿ ರಸ್ತೆ–ಕಾಮರಾಜ ರಸ್ತೆ

* ಗ್ರಾಂಟ್‌ ರಸ್ತೆ–ವಿಠ್ಠಲ್‌ ಮಲ್ಯ ರಸ್ತೆ

ಬದಲಾದರೂ ಸ್ವೀಕೃತವಾಗದ ರಸ್ತೆಗಳು

* ಫ್ರೇಜರ್ ಟೌನ್‌–ಪುಲಿಕೇಶಿನಗರ

* ರಿಚ್‌ಮಂಡ್‌ ಟೌನ್‌–ಸರ್‌ ಮಿರ್ಜಾ ಇಸ್ಮಾಯಿಲ್‌ ನಗರ

* ರೆಸಿಡೆನ್ಸಿ ರಸ್ತೆ–ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ರಸ್ತೆ

* ಮಿಷನ್‌ ರಸ್ತೆ–ಪಿ.ಕಾಳಿಂಗ ರಾವ್‌ ರಸ್ತೆ

* ಆಸ್ಟಿನ್‌ ಟೌನ್‌–ಎಫ್‌.ಕಿಟಲ್‌ ನಗರ

* ಬೆನ್ಸನ್‌ ಟೌನ್‌–ಕದಂಬ ನಗರ

* ಡಬಲ್‌ ರೋಡ್‌–ಕೆಂಗಲ್‌ ಹನುಮಂತಯ್ಯ ರಸ್ತೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು