ಮಂಗಳವಾರ, ಮೇ 18, 2021
30 °C

ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಣೆ: ಫುಟ್‌ಪಾತ್‌ನಲ್ಲಿ ಕಳೆದ ಕೋವಿಡ್ ರೋಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಯಾಲಿಸಿಸ್‌ಗೆ ಬಂದ‌‌ ಮಹಿಳೆಗೆ ಕೊರೊನಾ ಸೋಂಕು ತಗುಲಿದ ಕಾರಣ ನಗರದ ಮಲ್ಯ ಆಸ್ಪತ್ರೆ ಚಿಕಿತ್ಸೆ ನೀಡಲು ನಿರಾಕರಿಸಿದೆ. ನಡೆಯಲು ಆಗದ ಮಹಿಳೆ ಸುಮಾರು ಎಂಟು ತಾಸು ಫುಟ್‌ಪಾತ್‌ನಲ್ಲೇ ಸಮಯ ಕಳೆದಿದ್ದಾರೆ.

ಬಸವನಗುಡಿ ನಿವಾಸಿಯಾಗಿರುವ 58 ವರ್ಷದ ಮಹಿಳೆಯೊಬ್ಬರು ಸೋಮವಾರ ಮಧ್ಯಾಹ್ನ ಮಲ್ಯ ಆಸ್ಪತ್ರೆಗೆ ಡಯಾಲಿಸಿಸ್‌ಗೆ ಬಂದಿದ್ದಾರೆ. ವಾರಕ್ಕೆ ಒಮ್ಮೆ ಅವರು ಇದೇ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಆದರೆ, ಸೋಮವಾರ ಅವರಿಗೆ ಕೋವಿಡ್ ಪರೀಕ್ಷೆ ಮಾಡಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.

‘ನಮ್ಮದು ಕೋವಿಡ್‌ಗೆ ಮೀಸಲಾಗಿರುವ ಆಸ್ಪತ್ರೆಯ ಅಲ್ಲ. ಕೋವಿಡ್ ರೋಗಿಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು‌ ಮಲ್ಯ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.

ಕಾಲಿಗೆ ಏಟಾಗಿ ನಡೆಯಲು ಸಾಧ್ಯವಾಗದ ಕಾರಣ ಮಹಿಳೆ ಆಸ್ಪತ್ರೆಯ ಆವರಣದಲ್ಲಿಯೇ ಮಲಗಿದ್ದಾರೆ. ಈ‌ ಮಹಿಳೆ ಮಾಜಿ ಶಾಸಕ ಮತ್ತು ಮಾಜಿ ಮೇಯರ್ ಚಂದ್ರಶೇಖರ್ ಅವರ ತಂಗಿ.

‘ನನ್ನ ತಂಗಿ ಒಬ್ಬರೇ ಆಸ್ಪತ್ರೆಗೆ ಹೋಗಿದ್ದರು. ಅವರಿಗೆ ಕೋವಿಡ್ ಇರುವುದು ಗೊತ್ತಿರಲಿಲ್ಲ. ತಿಳಿದ ನಂತರ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರೂ ಸಕಾಲಕ್ಕೆ ಸ್ಪಂದಿಸಿಲ್ಲ. 108ಗೆ ಸೋಮವಾರ ಕರೆ ಮಾಡಿದರೆ ಮಂಗಳವಾರ ಬೆಳಿಗ್ಗೆ ಆಂಬುಲೆನ್ಸ್ ಬಂದಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮಲ್ಯ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲಿಯೇ ಸೋಮವಾರ ರಾತ್ರಿ ರಂಗಾದೊರೈ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಿಕೊಳ್ಳಲಾಗಿದೆ. ಈಗ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

‘ನನಗೂ ವಯಸ್ಸಾಗಿದೆ. ತಂಗಿಯ ಜೊತೆಗೆ ಹೋಗಲು ಸಾಧ್ಯವಾಗಲಿಲ್ಲ.‌ ಆದರೆ, ಸಕಾಲಕ್ಕೆ ಚಿಕಿತ್ಸೆ ನೀಡದೆ ಮಲ್ಯ ಆಸ್ಪತ್ರೆಯ ವೈದ್ಯರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ’ ಎಂದು ಚಂದ್ರಶೇಖರ್ ದೂರಿದರು.

‘ಯಾವುದೇ ಆಸ್ಪತ್ರೆ ಆದರೂ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ. ರೋಗಿಗಳನ್ನು ಮೊದಲು ದಾಖಲಿಸಿಕೊಳ್ಳಬೇಕು. ಸಹಾಯವಾಣಿ, ಆಂಬುಲೆನ್ಸ್ ಸಿಬ್ಬಂದಿಯೂ ತಕ್ಷಣಕ್ಕೆ ಕಾರ್ಯಪ್ರವೃತ್ತರಾಗಬೇಕು. ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.

ಇದನ್ನೂ ಓದಿ... ಕೋವಿಡ್‌ ನಿಯಂತ್ರಣ | ಲಾಕ್‌ಡೌನ್‌ ಹೊರತುಪಡಿಸಿ ಹೆಚ್ಚಿನ ಬಿಗಿ ಕ್ರಮ: ಯಡಿಯೂರಪ್ಪ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು