ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈಗಾರಿಕೆಗಳ ಸಮಸ್ಯೆಗಳ ಪರಿಹಾರಕ್ಕೆ ಅದಾಲತ್’

ಅರಣ್ಯ ಸಚಿವ ಆನಂದ್ ಸಿಂಗ್ ಭರವಸೆ * ಸಣ್ಣ ಕೈಗಾರಿಕೆಗಳಿಗೆ ಸಮ್ಮತಿ ಪತ್ರ ವಿತರಣೆ
Last Updated 17 ಸೆಪ್ಟೆಂಬರ್ 2020, 3:51 IST
ಅಕ್ಷರ ಗಾತ್ರ

ಬೆಂಗಳೂರು: ‘ಕೈಗಾರಿಕೆಗಳ ಸಮಸ್ಯೆಗಳನ್ನು ಪರಿಹರಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ವತಿಯಿಂದ ಜಿಲ್ಲಾ ಮಟ್ಟದಲ್ಲಿಯೇ ಅದಾಲತ್ ನಡೆಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಭರವಸೆ ನೀಡಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು (ಕಾಸಿಯಾ) ಕೆೆಎಸ್‌ಪಿಸಿಬಿ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಸಣ್ಣ ಕೈಗಾರಿಗೆಳಿಗೆ ಸಮ್ಮತಿ ಪತ್ರ ವಿತರಣೆ ಮೇಳ’ಕ್ಕೆ ಚಾಲನೆ ನೀಡಿ, ಮಾತನಾಡಿದರು.

‘ಸಣ್ಣ ಕೈಗಾರಿಕೆಗಳ ಮುಖ್ಯಸ್ಥರಿಗೆ ಅಧಿಕಾರಿಗಳು ಹಿಂಸೆ ನೀಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಸಮ್ಮತಿ ಪತ್ರ ಪಡೆದುಕೊಳ್ಳದ ಕೈಗಾರಿಕೆಗಳು ಹಲವು ಸಮಸ್ಯೆಗಳನ್ನು ಎದುರಿಸುವ ಜತೆಗೆ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿವೆ. ಹಾಗಾಗಿ ಎಲ್ಲ ಸಣ್ಣ ಕೈಗಾರಿಕೆಗಳು ಸಮ್ಮತಿ ಪತ್ರಗಳನ್ನು ಪಡೆದುಕೊಳ್ಳಬೇಕು. ಸಣ್ಣ ಕೈಗಾರಿಕೆಗಳಿಂದ 30 ಲಕ್ಷ ಮಂದಿ ಉದ್ಯೋಗ ಪಡೆದಿದ್ದು, ಈ ವಲಯವು ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದರು.

‘ರಾಜ್ಯದಲ್ಲಿ 9 ಮೃಗಾಲಯಗಳಿವೆ. ಸರ್ಕಾರವು ಈ ಮೃಗಾಲಯಗಳ ನಿರ್ವಹಣೆಗೆ ಪ್ರತ್ಯೇಕವಾಗಿ ಅನುದಾನ ನೀಡುತ್ತಿಲ್ಲ. ಕೋವಿಡ್‌ನಿಂದಾಗಿ ಅಲ್ಲಿಗೆ ಪ್ರವಾಸಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಇದರಿಂದಾಗಿ ಟಿಕೆಟ್‌ ಶುಲ್ಕದಿಂದ ಬರುತ್ತಿದ್ದ ಆದಾಯ ಕೂಡ ಗಣನೀಯವಾಗಿ ಇಳಿಕೆಯಾಗಿದೆ. ಹಾಗಾಗಿ ಪ್ರಾಣಿಗಳಿಗೆ ಆಹಾರ ಒದಗಿಲು ಹಾಗೂ ಮೃಗಾಲಯಗಳ ನಿರ್ವಹಣೆಗೆ ಕೈಗಾರಿಕೋದ್ಯಮಿಗಳು ಕೈಲಾದಷ್ಟು ಹಣವನ್ನು ಆರ್‌ಟಿಜಿಎಸ್ ಮೂಲಕ ನೀಡಿ, ಪ್ರಾಣಿ ಸಂಕುಲದ ಉಳಿವಿಗೆ ಕೈಜೋಡಿಸಬೇಕು. ಪ್ರಾಣಿಗಳನ್ನು ದತ್ತು ಪಡೆಯುವ ಅವಕಾಶ ಕೂಡ ಇದೆ’ ಎಂದು ತಿಳಿಸಿದರು.

ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು, ‘ಸಣ್ಣ ಕೈಗಾರಿಗೆಳು ಸಮ್ಮತಿ ಪತ್ರ ಪಡೆಯಲು ಇದ್ದ ಅಡೆತಡೆಗಳನ್ನು ನಿವಾರಿಸಿ, ಅರ್ಜಿಯನ್ನು ಸರಳೀಕರಣ ಮಾಡಲಾಗಿದೆ. ಸಾವಿರಾರು ಕೈಗಾರಿಕೆಗಳು ನೋಂದಣಿ ಮಾಡಿಸಿಕೊಂಡಿಲ್ಲ. ಡಿ.20ರವರೆಗೂ ಕಾಸಿಯಾ ಕೇಂದ್ರ ಕಚೇರಿ ಹಾಗೂ ಪೀಣ್ಯದ ಕೈಗಾರಿಕಾ ಪ್ರದೇಶದಲ್ಲಿ ಸಮ್ಮತಿ ಪತ್ರಗಳನ್ನು ವಿತರಿಸಲಾಗುತ್ತದೆ. ಸಣ್ಣ ಕೈಗಾರಿಕೆಗಳು ಇದರ ಲಾಭ ಪಡೆದುಕೊಳ್ಳಬೇಕು. ಇದರಿಂದ ಮಂಡಳಿಗೆ ಆದಾಯ ಕೂಡ ಬರಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT