ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಚೇತರಿಸಿಕೊಂಡವರಿಗೆ ಪುನರ್ವಸತಿ ಕೇಂದ್ರ

Last Updated 12 ಸೆಪ್ಟೆಂಬರ್ 2020, 18:57 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಕಾಯಿಲೆಯಿಂದ ಚೇತರಿಸಿಕೊಂಡವರ ಆರೋಗ್ಯದ ಮೇಲೆ ಸೋಂಕು ಯಾವ ರೀತಿ ಪರಿಣಾಮ ಬೀರಲಿದೆ ಹಾಗೂ ಸೋಂಕು ಮರುಕಳಿಸಲು ಏನು ಕಾರಣ ಎಂಬುದನ್ನು ತಿಳಿಯಲು ಶೀಘ್ರದಲ್ಲಿಯೇವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಕೋವಿಡ್ ಪುನರ್ವಸತಿ ಕೇಂದ್ರ ಪ್ರಾರಂಭವಾಗಲಿದೆ.

ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಕೋವಿಡ್‌ ಸೋಂಕು ಹೆಚ್ಚಿನ ಅಪಾಯ ಎನ್ನುವುದು ವೈದ್ಯಕೀಯ ಸಂಶೋಧನೆಗಳಿಂದ ದೃಢಪಟ್ಟಿದೆ. ಕಾಯಿಲೆ ಇರುವವರು ಸೋಂಕಿನಿಂದ ಚೇತರಿಸಿಕೊಂಡ ಬಳಿಕವೂ ಅವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳು ಬೀರುವ ಸಾಧ್ಯತೆಗಳಿರುತ್ತವೆ. ಕೆಲವರಿಗೆ ಸೋಂಕು ಮರುಕಳಿಸಬಹುದು ಎಂದು ವೈದ್ಯಕೀಯ ತಜ್ಞರು ಸಂದೇಹ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದ 28 ವರ್ಷದ ಮಹಿಳೆಯಲ್ಲಿ ಇತ್ತೀಚೆಗೆ ಮತ್ತೆ ಸೋಂಕು ಕಾಣಿಸಿಕೊಂಡಿತ್ತು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಅಧಿಕಾರಿಗಳ ಜತೆಗೆ ಸಭೆ ನಡೆಸಿ, ಸೋಂಕು ಮರುಕಳಿಸಲು ನಿಖರ ಕಾರಣ ಹಾಗೂ ಅಂತಹವರಿಗೆ ನೀಡುವ ಚಿಕಿತ್ಸಾ ವಿಧಾನವನ್ನು ಅಧ್ಯಯನ ಮಾಡಬೇಕು ಎಂದು ಸೂಚಿಸಿದ್ದರು.

ಪ್ರಭಾವದ ಬಗ್ಗೆ ಅಧ್ಯಯನ:‘ಪುನರ್ವಸತಿ ಕೇಂದ್ರಗಳನ್ನು‍ಪ್ರಾರಂಭಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 4 ಸಾವಿರಕ್ಕೂ ಅಧಿಕ ಸೋಂಕಿತರು ಚಿಕಿತ್ಸೆ ಪಡೆದುಕೊಂಡು, ಮನೆಗೆ ತೆರಳಿದ್ದಾರೆ.ಅವರ ವಿಳಾಸ ಹಾಗೂ ಸಂಪರ್ಕ ಸಂಖ್ಯೆಯಿದೆ. ಅವರನ್ನು ದೂರವಾಣಿ ಮೂಲಕ ಸಂಪ‍ರ್ಕಿಸಿ, ಆರೋಗ್ಯ ವಿಚಾರಿಸಲಾಗುತ್ತದೆ. ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದಲ್ಲಿ ಕೇಂದ್ರಕ್ಕೆ ಕರೆಸಿ, ತಪಾಸಣೆ ನಡೆಸಲಾಗುತ್ತದೆ. ಈ ಮೂಲಕ ಸೋಂಕು ವ್ಯಕ್ತಿಯ ದೇಹದ ಮೇಲೆ ಯಾವರೀತಿ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಸೋಂಕು ವ್ಯಕ್ತಿಯಶ್ವಾಸಕೋಶದ ಮೇಲೆ ದಾಳಿ ನಡೆಸಲಿದೆ. ಹೀಗಾಗಿ ರೋಗಿ ಗುಣಮುಖವಾದ ಬಳಿಕವೂ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತವೆ. ಎಷ್ಟು ಕಾಲದ ವರೆಗೆ ಸೋಂಕು ವ್ಯಕ್ತಿಯ ದೇಹದ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಕೂಡ ತಿಳಿಯಬೇಕಿದೆ. ಇದಕ್ಕಾಗಿ ಪ್ರಯೋಗಾಲಯ ಪರೀಕ್ಷೆ ಮೂಲಕ ಸೋಂಕಿತರ ಶ್ವಾಸಕೋಶದ ಕಾರ್ಯ ವಿಧಾನದ ಬಗ್ಗೆ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ವಿವಿಧ ಅಂಗಗಳಿಗೆ ಸೋಂಕು ಹಾನಿ ಮಾಡಿದೆಯೇ ಎಂದು ಕೂಡ ತಿಳಿಯಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT