ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಸಿಗಲಿಲ್ಲ ನಿರ್ಗತಿಕರಿಗೆ ಸೂರು

ಮಾರ್ಚ್‌ನಲ್ಲೇ ಮುಗಿದು ಹೋಗಿದೆ ಗಡುವು, ಆಶ್ರಯ ಕೇಂದ್ರ ತೆರೆಯಲು ಕಟ್ಟಡಗಳ ಅಭಾವವೇ ಅಡ್ಡಿ
Last Updated 25 ಏಪ್ರಿಲ್ 2019, 20:29 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ಬದಿಯಲ್ಲೇ ಊಟ ಮಾಡಿಕೊಂಡು, ಬಿಸಿಲು, ಮಳೆ, ಗಾಳಿ, ಚಳಿಯನ್ನೂ ಲೆಕ್ಕಿಸದೆ ಬಸ್‌ ನಿಲ್ದಾಣ, ಸುರಂಗ ಮಾರ್ಗ, ಪಾದಚಾರಿ ಮಾರ್ಗಗಳನ್ನೇ ಆಶ್ರಯ ತಾಣವನ್ನಾಗಿ ಬಳಸಿ ಬದುಕು ಸಾಗಿಸುತ್ತಿರುವ ಸಾವಿರಾರು ರಾತ್ರಿ ನಿರ್ಗತಿಕರಿಗೆ ಶಾಶ್ವತ ಸೂರು ಕಲ್ಪಿಸಲು ಬಿಬಿಎಂಪಿ ಹಾಕಿಕೊಂಡ ಯೋಜನೆ ಮತ್ತೆ ಮುಂದಕ್ಕೆ ಹೋಗಿದೆ.

ನಿರ್ಗತಿಕರಿಗಾಗಿ 20 ಆಶ್ರಯ ಕೇಂದ್ರಗಳನ್ನು ತೆರೆಯಲು ಯೋಜನೆ ಸಿದ್ಧಪಡಿಸಿದ್ದ ಪಾಲಿಕೆ, ಮಾರ್ಚ್‌ ಅಂತ್ಯದೊಳಗೆ ಅಷ್ಟು ಆಶ್ರಯ ಕೇಂದ್ರಗಳನ್ನು ತೆರೆಯಲು ನಗರದಲ್ಲಿ ಕಟ್ಟಡಗಳನ್ನು ಗುರುತಿಸುವುದಾಗಿ ತಿಳಿಸಿತ್ತು. ಸದ್ಯಕ್ಕೆ ಅದನ್ನು ಮೇ ತಿಂಗಳಿಗೆ ಮುಂದೂಡಿದೆ. ಅಲ್ಲಿಯವರೆಗೂ ನಿರಾಶ್ರಿತರು ಬೀದಿಯಲ್ಲೇ ವಾಸ್ತವ್ಯ ಹೂಡಬೇಕಿದೆ.

‘ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದು ನಿರಾಶ್ರಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದೆವು. ಆದರೆ ಖಾಸಗಿಯವರಿಂದ ಕಟ್ಟಡಗಳು ಬಾಡಿಗೆಗೆ ಸಿಗಲಿಲ್ಲ. ಬಳಿಕ ಪಾಲಿಕೆಯ ಖಾಲಿ ಕಟ್ಟಡಗಳನ್ನೇ ಗುರುತಿಸಿ ಮೂಲ ಸೌಕರ್ಯಗಳನ್ನು ಒದಗಿಸುವ ನಿರ್ಧಾರ ಕೈಗೊಂಡೆವು. ಆ ನಿಟ್ಟಿನಲ್ಲಿ ಪಾಲಿಕೆ ಹಾಗೂ ಸ್ವಯಂಸೇವಾ ಸಂಸ್ಥೆಗಳಿಗೆ ಸೇರಿದ 40 ಖಾಲಿ ಕಟ್ಟಡಗಳನ್ನು ಗುರುತಿಸಿದ್ದೇವೆ. ಅಲ್ಲಿ ಆಶ್ರಯ ಕೇಂದ್ರಗಳ ತೆರೆಯುವ ಕಾರ್ಯ ಮೇನಲ್ಲಿ ಪೂರ್ಣಗೊಳ್ಳಲಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಗುರುತಿಸಿರುವ ಕಟ್ಟಡಗಳನ್ನು ವಶಕ್ಕೆ ಪಡೆದು ಕಟ್ಟಡಗಳನ್ನು ನವೀಕರಣ ಮಾಡಬೇಕು. ಶೌಚಾಲಯ, ನೀರು, ವಿದ್ಯುತ್‌ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ಆಗಬೇಕು. ನಿಗದಿತ ಸಮಯದೊಳಗೆ ಕೆಲಸವಾಗಲಿಲ್ಲ. ಈಗ ಮೇ ತಿಂಗಳ ಒಳಗೆ ಪೂರ್ಣಗೊಳಿಸುತ್ತೇವೆ.ಲೋಕಸಭಾ ಚುನಾವಣಾ ಕಾರ್ಯಗಳಲ್ಲಿ ನಿರತರಾಗಿದ್ದ ಕಾರಣ ಈ ಕಾರ್ಯವನ್ನು ಪೂರ್ಣಗೊಳಿಸಲು ಸಮಯಾವಕಾಶ ಆಗಿರಲಿಲ್ಲ’ ಎಂದು ಅವರು ವಿವರಿಸಿದರು.

‘ಪಾಲಿಕೆ ಜತೆ ಜಂಟಿಯಾಗಿ ಜಾಗ ಗುರುತಿಸಿದ ಬಳಿಕ ಬಿಬಿಎಂಪಿ ಕಲ್ಯಾಣಾಧಿಕಾರಿಗಳು ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೈಗೆ ಸಿಗಲಿಲ್ಲ. ಈಗ ಚುನಾವಣೆ ಮುಗಿದಿದೆ. ಮುಂದಿನ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ’ ಎಂದು ಇಂಪ್ಯಾಕ್ಟ್‌ ಇಂಡಿಯಾ ಸಂಸ್ಥಾಪಕ ಉದಯ್‌ ಕುಮಾರ್ ಹೇಳಿದರು.

‘ರಾತ್ರಿ ನಿರ್ವಸತಿಗರಿಗೆ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಿ ಸೂರಿನ ವ್ಯವಸ್ಥೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ 2010ರಲ್ಲಿ ಎಲ್ಲ ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ. ಆದೇಶದನ್ವಯ 1 ಲಕ್ಷ ಜನ ವಾಸಿಸುವ ಪ್ರದೇಶಕ್ಕೆ ಒಂದು ತಂಗುದಾಣ ನಿರ್ಮಿಸಬೇಕು.ಬೆಂಗಳೂರಿನಲ್ಲಿ 1.20 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಅದರಂತೆ ಬೆಂಗಳೂರಿಗೆ 120 ಆಶ್ರಯ ಕೇಂದ್ರಗಳ ಅವಶ್ಯವಿದೆ. ಸದ್ಯಕ್ಕೆ 30 ರಿಂದ 40 ಆಶ್ರಯ ಕೇಂದ್ರಗಳನ್ನಾದರೂ ತೆರೆಯಬೇಕು’ ಎಂದು ಒತ್ತಾಯಿಸಿದರು.

ಬಿಬಿಎಂಪಿಯು 35 ಸ್ವಯಂ ಸೇವಾಸಂಸ್ಥೆಗಳ ಜೊತೆಗೂಡಿ ಕಳೆದ ಡಿಸೆಂಬರ್‌ನಲ್ಲಿ ನಗರದ 8 ವಲಯಗಳಲ್ಲಿ ನಿರಾಶ್ರಿತರ ಸಮೀಕ್ಷೆಯನ್ನು ಮಾಡಿತ್ತು.

ದೆಹಲಿ ಮಾದರಿ ಅಳವಡಿಕೆ
‘ನವದೆಹಲಿಯಲ್ಲಿ ನಗರ ನಿರಾಶ್ರಿತರಿಗೆ ಪ್ರತ್ಯೇಕವಾಗಿ ಮಂಡಳಿ ರಚಿಸಲಾಗಿದೆ. ಆ ಮಂಡಳಿ ಈಗಾಗಲೇ 200 ಆಶ್ರಯ ಕೇಂದ್ರಗಳನ್ನು ನಿರ್ಮಿಸಿದೆ. ಪುರುಷರು, ಮಹಿಳೆಯರಿಗೆ ಮತ್ತು ಆನಾರೋಗ್ಯದಿಂದ ಬಳಲುತ್ತಿರುವವರಿಗೆ ಪ್ರತ್ಯೇಕ ಕೇಂದ್ರಗಳನ್ನು ಕೊಟ್ಟಿದೆ. ಅದೇ ವ್ಯವಸ್ಥೆ ಇಲ್ಲಿಯೂ ಜಾರಿಯಾಗಲು ಮಂಡಳಿ ಸ್ಥಾಪನೆ ಅವಶ್ಯಕ’ ಎಂದು ಉದಯ್ ಒತ್ತಾಯಿಸಿದರು.

‘ನವದೆಹಲಿ ನಗರ ವಸತಿ ಅಭಿವೃದ್ಧಿ ಮಂಡಳಿ (ಡಿಯುಎಸ್‌ಐಬಿ) ನಡೆಸುತ್ತಿರುವ ಆಶ್ರಯ ಕೇಂದ್ರಗಳಿಗೆ ಬಿಬಿಎಂಪಿ ಕಲ್ಯಾಣ ಅಧಿಕಾರಿಗಳ ತಂಡದೊಂದಿಗೆ ಜನವರಿಯಲ್ಲಿ ಭೇಟಿ ನೀಡಿ ಅಲ್ಲಿನ ಆಶ್ರಯ ಕೇಂದ್ರಗಳ ನಿರ್ವಹಣೆ ಕುರಿತು ಅಧ್ಯಯನ ನಡೆಸಿದ್ದವು. ಅಲ್ಲಿ ನಿರಾಶ್ರಿತರಿಗೆ ವಸತಿ ವ್ಯವಸ್ಥೆಯ ಜೊತೆಗೆ ಹೊದಿಕೆ, ಹಾಸಿಗೆ ಮತ್ತು ಸ್ನಾನಕ್ಕೆ ಬಿಸಿ ನೀರು ಒದಗಿಸಲಾಗುತ್ತಿದೆ’ ಎಂದು ಅವರು ಹೇಳಿದರು.

‘ಅಗತ್ಯ ಎನಿಸಿದರೆ ಪ್ರಸ್ತಾವ ಸಲ್ಲಿಕೆ’
‘ಆಶ್ರಯ ಕೇಂದ್ರಗಳ ನಿರ್ವಹಣೆಗೆ ನಮ್ಮ ಬಳಿ ಸಾಕಷ್ಟು ಹಣ ಇದೆ. ಅಗತ್ಯ ಎನಿಸಿದರೆ ಪ್ರಸ್ತಾವ ಸಲ್ಲಿಸುತ್ತೇವೆ’ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ. ‘ಪಾಲಿಕೆ ಬಳಿ ನಿರಾಶ್ರಿತರ ಕೇಂದ್ರಗಳ ನಿರ್ವಹಣೆಗೆ ಹಣಕಾಸಿನ ಕೊರತೆ ಇದೆ’ ಎಂದು ಸ್ವಯಂಸೇವಾ ಸಂಸ್ಥೆಗಳು ಆರೋಪಿಸಿದ್ದವು.

ನಿರಾಶ್ರಿತರ ಕೇಂದ್ರಗಳನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಮಾತ್ರ ಆಯಾ ಸ್ಥಳೀಯ ಸರ್ಕಾರಗಳ (ಬಿಬಿಎಂಪಿ ಸೇರಿ) ಮೇಲಿದೆ. ಕೇಂದ್ರದ ನ್ಯಾಷನಲ್ ಅರ್ಬನ್‌ ಲೈವ್ಲಿವುಡ್‌ ಮಿಷನ್‌ (ಎನ್‌ಯುಎಲ್‌ಎಂ) ಸಂಸ್ಥೆಯು ನಿರಾಶ್ರಿತರ ಕೇಂದ್ರಗಳ ನಿರ್ವಹಣೆಗೆ ಹಣಕಾಸು ನೆರವು ನೀಡಲಿದೆ. ರಾಜ್ಯದ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ₹ 80 ಕೋಟಿ ಮೀಸಲಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT