ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ದರ್ಶನ್‌ಗೆ ಆತಿಥ್ಯ ನೀಡಿದ್ದು ಜೈಲು ಸಿಬ್ಬಂದಿ?

Published : 9 ಸೆಪ್ಟೆಂಬರ್ 2024, 0:59 IST
Last Updated : 9 ಸೆಪ್ಟೆಂಬರ್ 2024, 0:59 IST
ಫಾಲೋ ಮಾಡಿ
Comments

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಹಾಗೂ ಸಹಚರರಿಗೆ ವಿಶೇಷ ಆತಿಥ್ಯ ನೀಡಿರುವುದು ಜೈಲು ಸಿಬ್ಬಂದಿ ಎಂಬ ಮಾಹಿತಿ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ. 

ಸಿಸಿಬಿ ಜಂಟಿ ಪೊಲೀಸ್‌ ಕಮಿಷನರ್ ಡಾ.ಚಂದ್ರಗುಪ್ತ ನೇತೃತ್ವದಲ್ಲಿ ಪ್ರಕರಣದ ತನಿಖೆ ಚುರುಕುಗೊಳಿಸಿರುವ ತನಿಖಾ ತಂಡ, ಜೈಲಿನ 20 ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ, ಹೇಳಿಕೆ ದಾಖಲು ಮಾಡಿಕೊಂಡಿದೆ.

ಜೈಲಿನೊಳಗೆ ವಿಶೇಷ ಆತಿಥ್ಯ ಪಡೆದು ಕುರ್ಚಿಯಲ್ಲಿ ಕುಳಿತು ಸಿಗರೇಟ್‌ ಸೇದುತ್ತಾ ‘ರೌಂಡ್‌ ಟೇಬಲ್‌ ಪಾರ್ಟಿ’ ನಡೆಸಿದ್ದ ದರ್ಶನ್‌, ವಿಲ್ಸನ್‌ ಗಾರ್ಡನ್‌ ನಾಗ, ಕುಳ್ಳ ಸೀನ ಹಾಗೂ ದರ್ಶನ್‌ ವ್ಯವಸ್ಥಾಪಕ ನಾಗರಾಜ್‌ ಅವರನ್ನು ವಿಚಾರಣೆಗೆ ಒಳಪಡಿಸಿ, ಹೇಳಿಕೆಯನ್ನು ಪಡೆಯಲಾಗಿತ್ತು. ಆರೋಪಿಗಳಿಗೆ ಟೇಬಲ್, ಸಿಗರೇಟು, ಕಾಫಿ ಮಗ್ ನೀಡಿದ್ದು ಜೈಲು ಸಿಬ್ಬಂದಿ ಎಂಬುದು ಕಾರಾಗೃಹದ ಸಿಬ್ಬಂದಿಯ ವಿಚಾರಣೆ ಬಳಿಕ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜೈಲಿನಲ್ಲಿ ದರ್ಶನ್‌ ವಿಡಿಯೊ ಕರೆ ಮಾಡಿ ಮಾತನಾಡಿರುವುದು ಹಾಗೂ ಕೈದಿ ವೇಲು ಎಂಬಾತ ವಿಶೇಷ ಆತಿಥ್ಯದ ಫೋಟೊ ತೆಗೆದು ಪತ್ನಿಗೆ ಕಳುಹಿಸಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.

ಸಿ.ಸಿ.ಟಿ.ವಿ ಕ್ಯಾಮೆರಾಗಳ ಕಾರ್ಯಕ್ಷಮತೆ ಪರಿಶೀಲಿಸಿದ ಪೊಲೀಸರು ಕೆಲವು ಡಿವಿಆರ್‌ಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಜೈಲಿನ ಬ್ಯಾರಕ್‌ ಎದುರು ದರ್ಶನ್‌ ಮತ್ತು ಸಹಚರರು ಹರಟೆ ಹೊಡೆಯುತ್ತಿದ್ದ ಫೋಟೊವೊಂದು ಬಹಿರಂಗವಾಗಿತ್ತು. ಕೈದಿಗಳಿಗೆ ಜೈಲಿನೊಳಗೆ ವಿಲಾಸಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದ ಜೈಲು ಮುಖ್ಯ ಅಧೀಕ್ಷಕ ವಿ.ಶೇಷುಮೂರ್ತಿ ಸೇರಿ ಒಂಬತ್ತು ಮಂದಿ ಅಧಿಕಾರಿಗಳು, ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಮೂರು ಎಫ್‌ಐಆರ್‌ ದಾಖಲಿಸಿ, ಐಪಿಎಸ್‌ ಅಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕವಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT