ಗುರುವಾರ , ಜುಲೈ 29, 2021
25 °C

ರೇವಾ ವಿ.ವಿ: ನೂತನ ಕೋರ್ಸ್‌ಗಳ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ಕೋವಿಡ್ ಸಾಂಕ್ರಾಮಿಕ ರೋಗದಿಂದ ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳನ್ನು ದತ್ತು ಪಡೆದು, ಉಚಿತವಾಗಿ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಹೇಳಿದರು.

ಪ್ರಸಕ್ತ ಶೈಕ್ಷಣಿಕ ವರ್ಷದ ನೂತನ ಕೋರ್ಸ್‌ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ’ಕೆಲವು ಕುಟುಂಬಗಳಲ್ಲಿ ದುಡಿಯುತ್ತಿದ್ದ ಒಬ್ಬರೇ ಪೋಷಕರು ಉದ್ಯೋಗ ಕಳೆದುಕೊಂಡು ಶುಲ್ಕ ಭರಿಸಲು ಸಾಧ್ಯವಾಗದ ಪರಿಸ್ಥಿತಿಯಿದ್ದರೆ ಅಂತಹ ವಿದ್ಯಾರ್ಥಿಗಳಿಗೂ ಅತಿ ಕಡಿಮೆ ವೆಚ್ಛದಲ್ಲಿ ಶಿಕ್ಷಣ ನೀಡಲಾಗುವುದು‘ ಎಂದರು.

ವಿಶ್ವವಿದ್ಯಾಲಯದಲ್ಲಿ ಡಿಜಿಟಲೀಕರಣದ ಸೌಲಭ್ಯ ಅಳವಡಿಸಿಕೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಆನ್‌ಲೈನ್ ತರಬೇತಿ ನೀಡಲಾಗಿದ್ದು, ಇತ್ತೀಚೆಗೆ ನಡೆದ ಆನ್‌ಲೈನ್ ನೇಮಕಾತಿಯಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಶೇ 100ರಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ರೊಬೊಟಿಕ್ಸ್, ಆಟೋಮೋಷನ್ ಸೇರಿದಂತೆ 24 ನೂತನ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಪ್ರಸ್ತುತ ಆರೋಗ್ಯ ಮುಖ್ಯವಾಗಿರುವುದರಿಂದ ಈ ಸಲ ಆರೋಗ್ಯ ಹಾಗೂ ಕೃಷಿ ಮತ್ತು ರಕ್ಷಣೆಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ 10 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲಾಗಿತ್ತು. ಕೋವಿಡ್ ಪರಿಸ್ಥಿತಿಯಿದ್ದರೂ ಸಹ ‘ಇ ವಿಷಯ’ ಘೋಷಿಸುವ ಉಪಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಾಲೆಗಳಲ್ಲಿ 12 ಪ್ರಮಾಣೀಕೃತ ಕೋರ್ಸ್‌ಗಳನ್ನು ಒಳಗೊಂಡಂತೆ 15 ಗಂಟೆಗಳಲ್ಲಿ ತಂತ್ರಜ್ಞಾನ, ಸಾಮಾನ್ಯಜ್ಞಾನ, ವಿಜ್ಞಾನ ಮತ್ತು ಮಾನವಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳನ್ನು ಕಲಿಸಲಾಗುತ್ತಿದೆ. ಕೆಲವು ಶಾಲೆಗಳಲ್ಲಿ ಶೌಚಾಲಯ, ಕಾಂಪೌಂಡ್ ಮತ್ತಿತರ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದರು.

ಕುಲಪತಿ ಡಾ.ಎಂ.ಧನಂಜಯ, ಕುಲಸಚಿವ ಎನ್.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು