ಬುಧವಾರ, ನವೆಂಬರ್ 25, 2020
20 °C
ಪರಿಷ್ಕೃತ ನಗರ ಮಹಾ ಯೋಜನೆ 2031 * ಈ ಹಿಂದೆ ರೂಪಿಸಿದ್ದ ಕರಡು ನಿಯಮಗಳಿಗೆ ಎಳ್ಳುನೀರು

ಪರಿಷ್ಕೃತ ನಗರ ಮಹಾ ಯೋಜನೆ 2031ಗೆ ಎಳ್ಳುನೀರು: ಹೊಸ ಕರಡು ರೂಪಿಸಲು ಸಿದ್ಧತೆ ಆರಂಭ

ಪ್ರವೀಣ್‌ ಕುಮಾರ್‌ ಪಿ.ವಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ರೂಪಿಸಿರುವ ‘ಪರಿಷ್ಕೃತ ನಗರ ಮಹಾಯೋಜನೆ 2031’ಕ್ಕೆ (ಆರ್‌ಎಂಪಿ–2031) ಎಳ್ಳುನೀರು ಬಿಡಲಾಗಿದೆ. ಸಂಚಾರ ಆಧರಿತ ಅಭಿವೃದ್ಧಿ (ಟಿಒಡಿ) ಪರಿಕಲ್ಪನೆ ಇಟ್ಟುಕೊಂಡು ಹೊಸತಾಗಿ ನಗರ ಮಹಾಯೋಜನೆ ರೂಪಿಸಲು ಬಿಡಿಎ ಸಿದ್ಧತೆ ಆರಂಭಿಸಿದೆ.

2015ರ ನಗರ ಮಹಾಯೋಜನೆಯನ್ನು ಪರಿಷ್ಕರಿಸುವ ಇಚ್ಛೆಯನ್ನು ಬಿಡಿಎ ನ.5ರಂದು (ಗುರುವಾರ)  ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಅದರಲ್ಲಿರುವ ಒಕ್ಕಣೆ ಪ್ರಕಾರ, ಆರ್‌ಎಂಪಿ 2031ಕ್ಕೆ ಸರ್ಕಾರ 2017ರ ನ.22ರಂದು ನೀಡಿದ್ದ ತಾತ್ಕಾಲಿಕ ಅನುಮೋದನೆಯನ್ನು 2020ರ ಜೂನ್‌ 22ರಂದು ಹಿಂಪಡೆಯಲಾಗಿದೆ. ಕೆಲವು ಬದಲಾವಣೆಗಳನ್ನು ಅಳವಡಿಸಿಕೊಂಡು ಹೊಸದಾಗಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಈ ಕುರಿತು ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟವಾದ ಎರಡು ತಿಂಗಳುಗಳ ಒಳಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಬಿಡಿಎ ಕೇಂದ್ರ ಕಚೇರಿಯ ನಗರ ಯೋಜನಾ ವಿಭಾಗಕ್ಕೆ ಸಲ್ಲಿಸಬಹುದು ಅಥವಾ ಇ–ಮೇಲ್‌ (bdarmp2031@gmail.com) ಮೂಲಕ ಸಲಹೆ ನೀಡಬಹುದು.  

ಈ ಕುರಿತು ಪ್ರತಿಕ್ರಿಯಿಸಿದ ಬಿಡಿಎ ಆಯುಕ್ತ ಎಚ್‌.ಮಹದೇವ್‌, ‘ಸಂಚಾರ ಆಧಾರಿತ ಅಭಿವೃದ್ಧಿ ಪರಿಕಲ್ಪನೆಯಡಿಯಲ್ಲಿ ಹೊಸತಾಗಿ ನಗರ ಮಹಾಯೋಜನೆಯ ಕರಡು ನಿಯಮಗಳನ್ನು ರೂಪಿಸಲಾಗುತ್ತದೆ. ಇದಕ್ಕಾಗಿ ಏಜೆನ್ಸಿಯನ್ನು ಆಯ್ಕೆ ಮಾಡಲು ಶೀಘ್ರವೇ ಟೆಂಡರ್‌ ಆಹ್ವಾನಿಸಲಿದ್ದೇವೆ’ ಎಂದರು. 

ಮೋಟಾರು ಆಧರಿತ ಸಾರಿಗೆಯಲ್ಲಿ ಸಮೂಹ ಸಾರಿಗೆ ವ್ಯವಸ್ಥೆಯ (ರೈಲು, ಮೆಟ್ರೊ, ಕ್ಷಿಪ್ರ ಬಸ್‌ ಸಾರಿಗೆ ಇತ್ಯಾದಿ) ಪಾಲನ್ನು ಶೇ 70ರಷ್ಟಕ್ಕೆ ಹೆಚ್ಚಿಸುವುದು ಹಾಗೂ ತೀವ್ರ ದಟ್ಟಣೆಯ ಸಂಚಾರ ವಲಯಗಳಲ್ಲಿನ ಶೇ 60ರಷ್ಟು ಜನರಾದರೂ ಸಮೂಹ ಸಾರಿಗೆಯನ್ನು ನೆಚ್ಚಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಸರ್ಕಾರ 2019ರಲ್ಲಿ ಟಿಒಡಿ ನೀತಿಯನ್ನು ರೂಪಿಸಿದೆ. ಅದರ ಪ್ರಕಾರ, 2031ರ ಆರ್‌ಎಂಪಿಯ ಹೊಸ ಕರಡು ನಿಯಮಗಳು ರೂಪುಗೊಳ್ಳಲಿವೆ.

ಮೂರು ವರ್ಷಗಳ ಕಸರತ್ತು ವ್ಯರ್ಥ: ಹಿಂದೆ ರೂಪಿಸಿರುವ ಆರ್‌ಎಂಪಿ 2031ರ ಕರಡನ್ನು ಈಗಿನ ಸರ್ಕಾರವು ರದ್ದುಪಡಿಸಿರುವುದರಿಂದ ಈ ಕರಡು ರೂಪಿಸಲು ಮೂರು ವರ್ಷಗಳ ಕಾಲ ಬಿಡಿಎ ನಡೆಸಿದ ಕಸರತ್ತು ವ್ಯರ್ಥವಾದಂತಾಗಿದೆ. 2016ರ ಡಿಸೆಂಬರ್‌ನಲ್ಲೇ ಆರ್‌ಎಂಪಿ 2031ರ ಕರಡು ರೂಪಿಸುವ ಪ್ರಕ್ರಿಯೆ ಆರಂಭಿಸಿ ಪ್ರಾಧಿಕಾರವು 2017ರ ನ. 25ರಂದು ಯೋಜನೆಯ ಕರಡನ್ನು ವೆಬ್‌ಸೈಟ್‌ನಲ್ಲಿ (www.bdabangalore.org) ಪ್ರಕಟಿಸಿತ್ತು. ಇದಕ್ಕೆ  ಸಾರ್ವಜನಿಕರಿಂದ 13,046 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಇವುಗಳ ಪರಿಶೀಲಿಸಿದ ಬಳಿಕ ಕರಡನ್ನು ಅಂತಿಮಗೊಳಿಸಿ ಬಿಡಿಎ ಬೆಂಗಳೂರು ಮಹಾನಗರ ಯೋಜನಾ ಪ್ರಾಧಿಕಾರದ ಮೂಲಕ 2019ರ ಜ.17ರಂದು ಸರ್ಕಾರಕ್ಕೆ ಸಲ್ಲಿಸಿತ್ತು. ಸಾವಿರಾರು ಮಂದಿಯ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

‘ಸಂಪೂರ್ಣ ಹೊಸತಾಗಿ ವಲಯ ನಿಬಂಧನೆ ನಿಯಮಗಳನ್ನು ರೂಪಿಸಲಾಗುತ್ತಿದೆ. ಈ ಹಿಂದೆ ಆಕ್ಷೇಪಣೆ ಸಲ್ಲಿಸಿದ್ದು ಅನೂರ್ಜಿತಗೊಳ್ಳುತ್ತದೆ. ಹೊಸ ನಿಯಮಗಳು ರೂಪುಗೊಂಡ ಬಳಿಕ ಅದಕ್ಕೆ ಅನುಗುಣವಾಗಿ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಬೇಕಾಗುತ್ತದೆ’ ಎಂದು ಮಹದೇವ್‌ ಸ್ಪಷ್ಟಪಡಿಸಿದರು.

ಎಫ್‌ಎಆರ್‌ ಪ್ರಮಾಣ 5ಕ್ಕೆ ಹೆಚ್ಚಳ?

ಪ್ರಮುಖ ಸಾರಿಗೆ ತಾಣಗಳನ್ನು ಕೇಂದ್ರೀಕರಿಸಿದ ಅಭಿವೃದ್ಧಿಗೆ ಆದ್ಯತೆ ನೀಡುವ ಟಿಒಡಿ ನೀತಿಯಲ್ಲಿ ಪ್ರಮುಖ ಸಾರಿಗೆ ತಾಣಗಳ (ಮೆಟ್ರೊ ಮಾರ್ಗ) ಆಸುಪಾಸಿನಲ್ಲಿ ಫ್ಲೋರ್‌ ಏರಿಯಾ ಇಂಡೆಕ್ಸ್‌ (ಎಫ್‌ಎಆರ್‌) ಪ್ರಮಾಣವನ್ನು 5ರವರೆಗೆ ಹೆಚ್ಚಿಸುವ ಪ್ರಸ್ತಾವ ಇತ್ತು. ಹಾಗಾಗಿ ಹೊಸ ಆರ್‌ಎಂಪಿ ಟಿಒಡಿ ನೀತಿ ಆಧರಿತವಾಗಿರುವುದರಿಂದ ನಗರದ ಕೆಲವು ಪ್ರದೇಶಗಳಲ್ಲಿ ಎಫ್‌ಎಆರ್‌ ಪ್ರಮಾಣ ಹೆಚ್ಚಿಸುವುದು ನಿಚ್ಚಳ. ‘ಅವಶ್ಯಕತೆ ನೋಡಿಕೊಂಡು ಎಫ್‌ಎಆರ್‌ ಹೆಚ್ಚು ಮಾಡುವ ಅಥವಾ ಕಡಿಮೆಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಬಿಡಿಎ ಆಯುಕ್ತರು ತಿಳಿಸಿದರು. 2015ರ ನಗರ ಮಹಾಯೋಜನೆ ಪ್ರಕಾರ ನಗರದಲ್ಲಿ ಗರಿಷ್ಠ 3.25ರಷ್ಟು ಎಫ್‌ಎಆರ್‌ಗೆ ಮಾತ್ರ ಅವಕಾಶವಿದೆ. 2031ರ ನಗರ ಮಹಾ ಯೋಜನೆಯ ಈ ಹಿಂದಿನ ಕರಡಿನಲ್ಲಿ ಮೆಟ್ರೊ ನಿಲ್ದಾಣಗಳ ಬಳಿ ಗರಿಷ್ಠ 4 ಎಫ್‌ಎಆರ್‌ವರೆಗೆ ಅವಕಾಶ ಕಲ್ಪಿಸುವ ಪ್ರಸ್ತಾಪವಿತ್ತು.

ಟಿಒಡಿ ನೀತಿ ಪ್ರಕಾರ ಎಫ್‌ಎಆರ್‌ ಪ್ರಮಾಣ

ವಸತಿ ಕಟ್ಟಡಗಳಿಗೆ ನಿವೇಶನದ ವಿಸ್ತೀರ್ಣ (ಚ.ಮೀ.); ರಸ್ತೆ ಅಗಲ (ಮೀ); ಈಗಿನ ಗರಿಷ್ಠ ಎಫ್‌ಎಆರ್‌ ಟಿಒಡಿ ಪ್ರಕಾರ ಎಫ್‌ಎಆರ್‌ (ತೀವ್ರ ದಟ್ಟಣೆ– ಸಾಧಾರಣ ದಟ್ಟಣೆ)

360 ವರೆಗೆ; 12 ಮೀ ವರೆಗೆ; 1.75; 2

360–1000; 12–18; 2.25; 3

1000–2000; 18–24; 2.50; 4;3.25

2000–4000; 24–30; 3.00; 4.50; 3.75

4000–20,000; 30ಕ್ಕಿಂತ ಹೆಚ್ಚು; 3.25; 5.00; 4.25

 

12,000 ಚ.ಮೀ.ವರೆಗಿನ ವಾಣಿಜ್ಯ ಕಟ್ಟಡಗಳಿಗೆ

ರಸ್ತೆ ಅಗಲ (ಮೀ); ಈಗಿನ ಗರಿಷ್ಠ ಎಫ್‌ಎಆರ್‌; ಟಿಒಡಿ ಪ್ರಕಾರ ಎಫ್‌ಎಆರ್‌ (ತೀವ್ರ ದಟ್ಟಣೆ– ಸಾಧಾರಣ ದಟ್ಟಣೆ)

9ಕ್ಕಿಂತ ಕಡಿಮೆ; 1.50; 2.00

9–12; 1.75; 2.50

12–18; 2.25; 3.00

18–24; 2.50; 4.00; 3.50

30ಕ್ಕಿಂತ ಹೆಚ್ಚು; 3.25; 5.00; 4.25

ಆರ್‌ಎಂಪಿ 2031– ಸಿದ್ಧತೆಯ ಹಾದಿ 

* 2016ರ ಡಿಸೆಂಬರ್‌ 16: ಬೆಂಗಳೂರು ನಗರ ಯೋಜನೆ ಸಮಿತಿ (ಬಿಎಂಪಿಸಿ) ಸಮ್ಮುಖದಲ್ಲಿ ಪರಿಷ್ಕೃತ ನಗರ ಮಹಾಯೋಜನೆ (ಸಿಡಿಪಿ) 2031ರ ಪರಿಷ್ಕರಣೆಯ ಪೂರ್ವತಯಾರಿಯ ಪ್ರಾತ್ಯಕ್ಷಿಕೆ ನೀಡಿದ ಬಿಡಿಎ. ಕರಡು ಸಿದ್ಧಪಡಿಸುವ ಪ್ರಕ್ರಿಯೆಯನ್ನು 2017ರ ಜುಲೈ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸೂಚನೆ.

* 2016 ಡಿಸೆಂಬರ್‌30: ನಗರದ ಚಿತ್ರಣ 2031ರ ವೇಳೆಗೆ ನಗರದ ಸನ್ನಿವೇಶಗಳು ಹೇಗಿರುತ್ತವೆ? ನಗರದ ಅಭಿವೃದ್ಧಿಗೆ ಏನೆಲ್ಲ ಆಯ್ಕೆಗಳಿವೆ, ಏನೆಲ್ಲ ಸಿದ್ಧತೆ ಅಗತ್ಯ ಎಂಬ ವಿವರ ಬಿಡಿಎ ವೆಬ್‌ಸೈಟ್‌ನಲ್ಲಿ (http://bdabangalore.org) ಪ್ರಕಟ. ಸಾರ್ವಜನಿಕರಿಂದ ಸಲಹೆ ಆಹ್ವಾನ

* ಸಾರ್ವಜನಿಕ ಸಲಹೆ ಆಹ್ವಾನಿಸಲು 2017 ಜನವರಿಯಿಂದ 12ರಿಂದ 27ರವರೆಗೆ ಬಿಬಿಎಂಪಿಯ ಎಂಟು ವಲಯಗಳಲ್ಲಿ ಸಭೆ. ಸಭೆಗಳಲ್ಲಿ 487 ಹಾಗೂ ಇ– ಮೇಲ್ ಮೂಲಕ 22 ಸಲಹೆ ಸ್ವೀಕಾರ

* 2017 ಜೂನ್‌ 9: ಪ್ರಾಧಿಕಾರದಲ್ಲಿ ಸಭೆಯಲ್ಲಿ ಯೋಜನೆಯ ಕರಡು ಮಂಡನೆ * 2017ರ ನವೆಂಬರ್‌ 25: ಯೋಜನೆಯ ಕರಡು ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟ

* 2018 ಜ. 23: ಆಕ್ಷೇಪಣೆ ಸಲ್ಲಿಕೆ ಅವಧಿ ಮುಕ್ತಾಯ; 13,046 ಆಕ್ಷೇಪಣೆಗಳು ಸಲ್ಲಿಕೆ * 2018 ಫೆ 12: ಆರ್‌ಎಂಪಿ 2031 ಕುರಿತು ಸಿಟಿಜನ್ಸ್‌ ಆ್ಯಕ್ಷನ್‌ ಫೋರಂ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ. ಆಕ್ಷೇಪಣೆಗಳನ್ನು ಸರಿಯಾಗಿ ವಿಲೇ ಮಾಡುವಂತೆ ಬಳಿಕ ಹೈಕೋರ್ಟ್‌ ಸೂಚನೆ

* 2018 ಮಾರ್ಚ್‌: ಆಕ್ಷೇಪಣೆ ಮರುಪರಿಶೀಲನೆಗೆ ಬಿ.ಎಸ್‌.ಪಾಟೀಲ ನೇತೃತ್ವದಲ್ಲಿ ಸಮಿತಿ ರಚನೆ. ಹೊಸ ಸರ್ಕಾರ ಬಂದ ಬಳಿಕ ಸಮಿತಿ ರದ್ದು

* 2019 ಜ.17: ಬಿಡಿಎಯಿಂದ ಸರ್ಕಾರಕ್ಕೆ ಆರ್‌ಎಂಪಿ 2031 ಸಲ್ಲಿಕೆ

* 2020 ಜೂನ್‌22: ಆರ್‌ಎಂಪಿ 2031 ರಚಿಸಲು ನೀಡಿದ್ದ ಅನುಮೋದನೆ ಹಿಂಪಡೆದ ಸರ್ಕಾರ. ಹೊಸ ಪ್ರಸ್ತಾವನೆ ಸಿದ್ಧಪಡಿಸಲು ಸೂಚನೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು