ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಡರ್‌ ಶ್ಯೂರ್‌: ಆಗ ಆರೋಪ– ಈಗ ವೆಚ್ಚ ಹೆಚ್ಚಳ

ಐದು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುತ್ತಿಗೆ ಮೊತ್ತಕ್ಕಿಂತ ₹34.40 ಕೋಟಿ ಹೆಚ್ಚು ವೆಚ್ಚ ಮಾಡಲು ಸಿದ್ಧತೆ
Last Updated 6 ಏಪ್ರಿಲ್ 2022, 20:56 IST
ಅಕ್ಷರ ಗಾತ್ರ

ಬೆಂಗಳೂರು: ‘ಟೆಂಡರ್‌ಶ್ಯೂರ್ ಯೋಜನೆಯೇ ಅವೈಜ್ಞಾನಿಕ. ಇದು ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ಹೊರೆ’ ಎಂದು ವಿರೋಧಪಕ್ಷದಲ್ಲಿದ್ದಾಗ ಬಿಜೆಪಿ ಆರೋಪಿಸಿತ್ತು. ಆದರೆ, ಬಿಜೆಪಿ ನೇತೃತ್ವದ ಸರ್ಕಾರ ಈಗ ಈ ಯೋಜನೆಯ ಐದು ರಸ್ತೆ ಕಾಮಗಾರಿಗಳಿಗೆ ₹ 34.40 ಕೋಟಿಗಳಷ್ಟು ಹೆಚ್ಚುವರಿ ವೆಚ್ಚವನ್ನೂ ಸೇರಿಸಿ ಅನುಷ್ಠಾನಗೊಳಿಸಲು ಸಿದ್ಧತೆ ನಡೆಸಿದೆ.

‘ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನೇ ರದ್ದುಪಡಿಸುತ್ತೇವೆ. ಈಗಾಗಲೇ ಜಾರಿಯಾಗುತ್ತಿರುವ ಕಾಮಗಾರಿಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಿ, ದುಂದುವೆಚ್ಚಕ್ಕೆ ಕಾರಣವಾದವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ’ ಎಂದು ಬಿಜೆಪಿ ಮುಖಂಡರು ಈ ಹಿಂದೆ ಆರೋಪಿಸಿದ್ದರು. ಈಗ ಕೆಂಪೇಗೌಡ ರಸ್ತೆ, ನೃಪತುಂಗ ರಸ್ತೆ, ಮೋದಿ ಆಸ್ಪತ್ರೆ ರಸ್ತೆ, ಸಿದ್ದಯ್ಯಪುರಾಣಿಕ ರಸ್ತೆ ಮತ್ತು ಜಯನಗರ 11ನೇ ಮುಖ್ಯ ರಸ್ತೆಗಳಲ್ಲಿ ಟೆಂಡರ್‌ಶ್ಯೂರ್‌ ಯೋಜನೆಯಡಿ ಕೈಗೊಂಡ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ ₹ 34.40 ಕೋಟಿ ವೆಚ್ಚ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಬಿಬಿಎಂಪಿಯು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅವರಿಗೆ ಪ್ರಸ್ತಾವ ಸಲ್ಲಿಸಿದೆ.

ಈ ಐದು ರಸ್ತೆಗಳನ್ನು ₹ 61.56 ಕೋಟಿ ಮೊತ್ತದಲ್ಲಿ ಟೆಂಡರ್ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಬಿಬಿಎಂಪಿ 2014ರಲ್ಲಿ ಟೆಂಡರ್ ಕರೆದಿತ್ತು. ಒಟ್ಟು ₹ 86.46 ಕೊಟಿ ಮೊತ್ತದ ಗುತ್ತಿಗೆಯನ್ನು ಮೆ.ಆರ್‌ಎನ್‌ಆರ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಸಂಸ್ಥೆಗೆ ವಹಿಸಲಾಗಿತ್ತು. ಈ ಐದು ಕಾಮಗಾರಿಗಳಲ್ಲಿ 1.15 ಕಿ.ಮೀ ಉದ್ದದ ಕೆಂಪೇಗೌಡ ರಸ್ತೆ, 0.80 ಕಿ.ಮೀ ಉದ್ದದ ನೃಪತುಂಗ ರಸ್ತೆ ಹಾಗೂ 1.02 ಕಿ.ಮೀ ಉದ್ದದ ಮೋದಿ ಆಸ್ಪತ್ರೆ ರಸ್ತೆಗಳ ಕಾಮಗಾರಿಗಳು ಪೂರ್ಣಗೊಂಡಿವೆ. 2.12 ಕಿ.ಮೀ ಉದ್ದದ ಸಿದ್ದಯ್ಯ ಪುರಾಣಿಕ ರಸ್ತೆ ಕಾಮಗಾರಿ ಶೇ 90ರಷ್ಟು ಹಾಗೂ ಜಯನಗರ 11ನೇ ಮುಖ್ಯರಸ್ತೆ ಕಾಮಗಾರಿ ಶೇ 70ರಷ್ಟು ಪೂರ್ಣಗೊಂಡಿದೆ.

ಈ ರಸ್ತೆಗಳಲ್ಲಿ ಒಳಚರಂಡಿ, ನೀರು ಸರಬರಾಜು ಮತ್ತು ಸಂಪರ್ಕ, ಬೆಸ್ಕಾಂನ ವಿದ್ಯುತ್‌ ಕೇಬಲ್‌, ಒಎಫ್‌ಸಿ ಮತ್ತು ಅಡುಗೆ ಅನಿಲ ಕೊಳವೆಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ಪ್ರತ್ಯೇಕವಾಗಿ ಅಳವಡಿಸುವ ಸಂದರ್ಭದಲ್ಲಿ ಈಗಿದ್ದ ಒಳಚರಂಡಿ ಕೊಳವೆಗಳು ಮತ್ತು ಮನೆ ಸಂಪರ್ಕ ಕೊಳವೆಗಳಿಗೆ ಹಾಗೂ ಮ್ಯಾನ್‌ಹೋಲ್‌ ಚೇಂಬರ್‌ಗಳಿಗೆ ಅಡ್ಡಿ ಉಂಟಾಗಿತ್ತು. ಸ್ಥಳೀಯ ಶಾಸಕರ ಸೂಚನೆ ಮೇರೆಗೆ ಹಾಗೂ ಬೆಸ್ಕಾಂ ಮತ್ತು ಜಲಮಂಡಳಿಯವರ ಕೋರಿಕೆ ಮೇರೆಗೆ ಹೆಚ್ಚುವರಿ ಡಕ್ಟ್‌ಗಳನ್ನು ನಿರ್ಮಿಸಬೇಕಾದ ಮತ್ತು ಕೊಳವೆಗಳನ್ನು ಅಳವಡಿಸಬೇಕಾದ ಪ್ರಮೇಯ ಎದುರಾಗಿತ್ತು. ಕೆಲವು ಕಡೆ ಛೇಂಬರ್‌ಗಳ ವಿನ್ಯಾಸದಲ್ಲಿ ಮಾರ್ಪಾಡು ಮಾಡಲಾಗಿತ್ತು.

ಮಂಜೂರಾದ ಪಟ್ಟಿಯಲ್ಲಿರದ ಹೆಚ್ಚುವರಿ ಕಾಮಗಾರಿಗಳನ್ನು (ಇಐಆರ್‌ಎಲ್‌) ಟೆಂಡರ್‌ಶ್ಯೂರ್‌ ಮಾದರಿಯಲ್ಲೇ ನಿರ್ವಹಿಸಬೇಕಾಗಿದೆ. ಇಲ್ಲದಿದ್ದರೆ ಒಳಚರಂಡಿ, ಕುಡಿಯುವ ನೀರು ಕೊಳವೆ ಹಾಗೂ ಬೆಸ್ಕಾಂನ ಕೇಬಲ್‌ಗಳು ಹಾಗೂ ಒಎಫ್‌ಸಿ ಕೇಬಲ್‌ಗಳ ಡಕ್ಟ್‌ಗಳಲ್ಲಿ ನಿರಂತರತೆ ಕಾಯ್ದುಕೊಳ್ಳುವುದು ಸಾಧ್ಯವಾಗದು. ಆಗ ಈಗ ಅಳವಡಿಸಿರುವ ಕೊಳವೆಗಳು ಹಾಗೂ ನಿರ್ವಹಿಸಿರುವ ಕಾಮಗಾರಿಗಳು ವ್ಯರ್ಥವಾಗುವ ಸಂಭವವಿದೆ. ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಳಿಕವೇ ಜೋಡಣೆ ಕಾರ್ಯವನ್ನು ಕೈಗೆತ್ತಿಕೊಳ್ಳಬಹುದು ಎಂದು ಬಿಬಿಎಂಪಿಯು ಪ್ರಸ್ತಾವದಲ್ಲಿ ವಿವರಿಸಿದೆ.

ಬಾಕಿ ಕಾಮಗಾರಿಗಳನ್ನು ಚಾಲ್ತಿ ದರಪಟ್ಟಿ ಆಧಾರದಲ್ಲಿ ಈಗಿನ ಗುತ್ತಿಗೆದಾರರಿಂದಲೇ ಮಾಡಿಸಬೇಕು. ಇದಕ್ಕಾಗಿ ಟೆಂಡರ್‌ ಆಹ್ವಾನಿಸಿದರೂ ಗುತ್ತಿಗೆದಾರರು ಭಾಗವಹಿಸದೇ ಇರುವ ಸಾಧ್ಯತೆಗಳಿವೆ. ಒಂದು ವೇಳೆ ಭಾಗವಹಿಸಿದರೂ ಹೆಚ್ಚು ಮೊತ್ತ ನಮೂದಿಸುವ ಸಾಧ್ಯತೆ ಹೆಚ್ಚು. ಹೆಚ್ಚುವರಿ ಕಾಮಗಾರಿಗಳನ್ನು ಬೇರೆಯ ಗುತ್ತಿಗೆದಾರರಿಗೆ ವಹಿಸಿದರೆ ಸಂಪರ್ಕ ಹಾಗೂ ಜೋಡಣೆ ಕಾರ್ಯದಲ್ಲಿ ಸಮನ್ವಯ ಕಾಪಾಡಲು ಸಾಧ್ಯವಾಗದು ಎಂದು ಬಿಬಿಎಂಪಿ ಅಭಿಪ್ರಾಯಪಟ್ಟಿದೆ.

ಹೆಚ್ಚುವರಿ ಕಾಮಗಾರಿಗಳನ್ನು ನಿರ್ವಹಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಸಚಿವ ಕೆ.ಗೋಪಾಲಯ್ಯ, ಶಾಸಕರಾದ ಎಸ್‌.ಸುರೇಶ್‌ ಕುಮಾರ್‌ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದರು. ಶಾಸಕಿ ಸೌಮ್ಯಾ ರೆಡ್ಡಿ ಅವರು ವಿಧಾನ ಮಂಡಲ ಅಧಿವೇಶನದಲ್ಲಿ ಈ ಕುರಿತು ಗಮನ ಸೆಳೆಯುವ ಸೂಚನೆ ಮಂಡಿಸಿದ್ದರು.

ಈ ಕಾಮಗಾರಿಯನ್ನು (2012–13ರ ದರಪಟ್ಟಿ ಪ್ರಕಾರ) ಟೆಂಡರ್‌ ಮೊತ್ತಕ್ಕಿಂತ ಶೇ 47ರಷ್ಟು ಹೆಚ್ಚು ಮೊತ್ತಕ್ಕೆ ಗುತ್ತಿಗೆ ನೀಡಲಾಗಿತ್ತು. ಟೆಂಡರ್‌ ಮೊತ್ತಕ್ಕೆ (₹ 56.14 ಕೋಟಿ) ಹೋಲಿಸಿದರೆ, ಒಟ್ಟು ₹ 64.72 ಕೋಟಿ ಹೆಚ್ಚುವರಿ ವೆಚ್ಚ ಮಾಡಿದಂತಾಗುತ್ತದೆ.

ಐದು ರಸ್ತೆಗಳ ಅಭಿವೃದ್ಧಿ: ಪರಿಷ್ಕೃತ ಮೊತ್ತದ ವಿವರ

₹ 61.56 ಕೋಟಿ – ಐದು ರಸ್ತೆ ಕಾಮಗಾರಿಗಳ ಅಂದಾಜು ಮೊತ್ತ (2012–13ನೇ ಸಾಲಿನ ದರಪಟ್ಟಿ)

₹ 56.15 ಕೋಟಿ –ಟೆಂಡರ್‌ಗೆ ಇಟ್ಟ ಮೊತ್ತ

₹ 86.46 ಕೋಟಿ – ಅನುಮೋದಿತ ಗುತ್ತಿಗೆ ಮೊತ್ತ

ಶೇ 47.89 – ಅನುಮೋದಿತ ಗುತ್ತಿಗೆ ಮೊತ್ತದ ಟೆಂಡರ್‌ ಪ್ರೀಮಿಯಂ

₹ 34.40 ಕೋಟಿ – ಹೆಚ್ಚುವರಿ ಕಾಮಗಾರಿಗಳಿಗೆ ತಗಲುವ ಮೊತ್ತ

₹ 120.86 ಕೋಟಿ – ಕಾಮಗಾರಿಯ ಪರಿಷ್ಕೃತ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT