ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ‘ಸಿಬಿಐ’ ಹೆಸರಿನಲ್ಲಿ ಸುಲಿಗೆ: ನಾಲ್ವರು ಬಂಧನ

* ಕೇರಳ ವಿದ್ಯಾರ್ಥಿಗಳು ಗುರಿ * ಗಾಂಜಾ ಕೈಗಿಟ್ಟು ವಿಡಿಯೊ ಚಿತ್ರೀಕರಣ
Published 30 ಮೇ 2024, 15:54 IST
Last Updated 30 ಮೇ 2024, 15:54 IST
ಅಕ್ಷರ ಗಾತ್ರ

ಬೆಂಗಳೂರು: ‘ಡ್ರಗ್ಸ್ ಪ್ರಕರಣದಲ್ಲಿ ಜೈಲಿಗೆ ಕಳುಹಿಸುತ್ತೇವೆ’ ಎಂಬುದಾಗಿ ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೇರಳದ ಅನಂತಕೃಷ್ಣನ್ (23), ಎ.ಎಸ್. ಪ್ರಮೋದ್ (42), ಆದರ್ಶ (22) ಹಾಗೂ ದೀಪಕ್ ಆರ್. ಚಂದ್ರ (37) ಬಂಧಿತರು. ಎರಡು ಕಾರು, ಪಿಸ್ತೂಲ್, ಕೈ ಕೋಳ, ಲಾಠಿ, ಸಿಬಿಐ ಟ್ರಸ್ಟ್ ಹೆಸರಿನಲ್ಲಿದ್ದ ಗುರುತಿನ ಚೀಟಿಗಳು, ಬ್ಯಾಟನ್ ಹಾಗೂ 4 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಹೆಸರಘಟ್ಟ ಮುಖ್ಯರಸ್ತೆಯ ಎಜಿಬಿ ಬಡಾವಣೆಯಲ್ಲಿ ವಿದ್ಯಾರ್ಥಿಯೊಬ್ಬರು ವಾಸವಿದ್ದಾರೆ. ಮೇ 27ರಂದು ರಾತ್ರಿ ಮನೆಗೆ ನುಗ್ಗಿದ್ದ ಆರೋಪಿಗಳು, ಸಿಬಿಐ ಅಧಿಕಾರಿಗಳು ಎಂಬುದಾಗಿ ಹೇಳಿ ಬೆದರಿಸಿದ್ದರು. ತಾವು ತಂದಿದ್ದ ಗಾಂಜಾವನ್ನು ವಿದ್ಯಾರ್ಥಿ ಬಳಿ ಕೊಟ್ಟು ವಿಡಿಯೊ ಚಿತ್ರೀಕರಣ ಮಾಡಿದ್ದರು. ‘₹ 3 ಲಕ್ಷ ನೀಡಬೇಕು. ಇಲ್ಲದಿದ್ದರೆ, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುತ್ತೇವೆ. ಜೊತೆಗೆ, ನಿನ್ನನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ’ ಎಂಬುದಾಗಿ ಬೆದರಿಸಿದ್ದರು’ ಎಂದು ತಿಳಿಸಿದರು.

‘ತಮ್ಮ ಬಳಿ ಹಣವಿಲ್ಲವೆಂದು ವಿದ್ಯಾರ್ಥಿ ಹೇಳಿದ್ದರು. ಮೊಬೈಲ್ ಕಸಿದುಕೊಂಡಿದ್ದ ಆರೋಪಿಗಳು, ಯುಪಿಐ ಮೂಲಕ ಒತ್ತಾಯದಿಂದ ತಮ್ಮ ಖಾತೆಗೆ ಹಂತ ಹಂತವಾಗಿ ₹ 90 ಸಾವಿರ ವರ್ಗಾಯಿಸಿಕೊಂಡಿದ್ದರು. ಮರುದಿನ ಉಳಿದ ಹಣ ನೀಡುವಂತೆ ಹೇಳಿ ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ವಿದ್ಯಾರ್ಥಿ ದೂರು ನೀಡುತ್ತಿದ್ದಂತೆ, ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಹೇಳಿದರು.

ತಂಗಿ ಮಾತನಾಡಿಸಲು ಬರುತ್ತಿದ್ದ: ‘ಆರೋಪಿಗಳ ಪೈಕಿ ಒಬ್ಬಾತನ ತಂಗಿ, ಪತಿಯೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದಾರೆ. ತಂಗಿಯನ್ನು ನೋಡಲು ಆರೋಪಿ ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದ. ಹೆಚ್ಚಿನ ಹಣ ಸಂಪಾದಿಸಲು ಮುಂದಾಗಿದ್ದ ಆರೋಪಿ, ಸ್ನೇಹಿತರನ್ನು ತನ್ನೊಂದಿಗೆ ಕರೆದುಕೊಂಡು ಬಂದು ವಿದ್ಯಾರ್ಥಿಗಳನ್ನು ಬೆದರಿಸಿ ಸುಲಿಗೆ ಮಾಡಲಾರಂಭಿಸಿದ್ದ’ ಎಂದು ತಿಳಿಸಿದರು.

ಕೇರಳ ವಿದ್ಯಾರ್ಥಿಗಳು ಗುರಿ: ‘ಸಿಬಿಐ ಟ್ರಸ್ಟ್ ಹೆಸರಿನಲ್ಲಿ ಆರೋಪಿಗಳು ನಕಲಿ ಗುರುತಿನ ಚೀಟಿ ಮಾಡಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ಉಳಿದುಕೊಂಡಿರುವ ಕೇರಳದ ವಿದ್ಯಾರ್ಥಿಗಳ ಮನೆ ವಿಳಾಸವನ್ನು ಆರೋಪಿಗಳು ಪತ್ತೆ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಮನೆಗಳಿಗೆ ನುಗ್ಗುತ್ತಿದ್ದ ಆರೋಪಿಗಳು, ಸಿಬಿಐ ಗುರುತಿನ ಚೀಟಿ ತೋರಿಸಿ ಬೆದರಿಸುತ್ತಿದ್ದರು. ತಮ್ಮ ಬಳಿಯ ಗಾಂಜಾವನ್ನೇ ವಿದ್ಯಾರ್ಥಿಗಳ ಕೈಗೆ ಕೊಟ್ಟು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಮರ್ಯಾದೆಗೆ ಹೆದರಿ ವಿದ್ಯಾರ್ಥಿಗಳು ಹಣ ನೀಡುತ್ತಿದ್ದರು. ಆರೋಪಿಗಳು ಇದುವರೆಗೂ ಹಲವು ವಿದ್ಯಾರ್ಥಿಗಳನ್ನು ಸುಲಿಗೆ ಮಾಡಿರುವ ಮಾಹಿತಿ ಇದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT