ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನಪೂರ್ಣೇಶ್ವರಿ ನಗರ: ತಿಂಗಳಿಗೊಮ್ಮೆ ಚಾಕು ತೋರಿಸಿ ಸುಲಿಗೆ, ಮೂವರ ಸೆರೆ

ಮೂವರು ಸಂಬಂಧಿಕರ ಬಂಧನ, ₹ 17 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
Last Updated 9 ಸೆಪ್ಟೆಂಬರ್ 2021, 16:58 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆಯಲ್ಲಿ ಸಾರ್ವಜನಿಕರನ್ನು ಅಡ್ಡಗಟ್ಟಿ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

‘ಅರಸೀಕೆರೆಯ ಪರಮೇಶ್ವರಯ್ಯ, ಜಗದೀಶ್ ಹಾಗೂ ಶಶಿಕುಮಾರ್ ಬಂಧಿತರು. ಅವರಿಂದ ₹ 17 ಲಕ್ಷ ಮೌಲ್ಯದ 347 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಚಾಕು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಂಬಂಧಿಕರೇ ಆಗಿರುವ ಆರೋಪಿಗಳು, ಕೆಲಸ ಹುಡುಕಿಕೊಂಡು ಐದು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದರು. ಪರಮೇಶ್ವರಯ್ಯ ಹಾಗೂ ಜಗದೀಶ್, ಪೇಟಿಂಗ್ ಕೆಲಸಕ್ಕೆ ಸೇರಿದ್ದರು. ಶಶಿಕುಮಾರ್, ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.’

‘ಕುಟುಂಬ ನಿರ್ವಹಣೆಗೆ ಸಂಬಳ ಸಾಲದ ಕಾರಣ ಆರೋಪಿಗಳು, ಸುಲಿಗೆ ಮಾಡಲು ಸಂಚು ರೂಪಿಸಿದ್ದರು. ಸರದಿ ಪ್ರಕಾರ ಪಲ್ಸರ್‌ ಬೈಕ್‌ನಲ್ಲಿ ಸುತ್ತಾಡಿ ಸಾರ್ವಜನಿಕರನ್ನು ಬೆದರಿಸಿ ಚಿನ್ನಾಭರಣ ಹಾಗೂ ಮೊಬೈಲ್‌ ಕಿತ್ತೊಯ್ಯುತ್ತಿದ್ದರು. ಚಿನ್ನಾಭರಣವನ್ನು ಅಡವಿಟ್ಟು, ಅದರಿಂದ ಬಂದ ಹಣವನ್ನು ಹಂಚಿಕೊಳ್ಳುತ್ತಿದ್ದರು’ ಎಂದೂ ಮೂಲಗಳು ಹೇಳಿವೆ.

‘ನಿತ್ಯವೂ ಕೃತ್ಯ ಎಸಗಿದರೆ ಪೊಲೀಸರು ಬಂಧಿಸುತ್ತಾರೆಂಬ ಆತಂಕ ಆರೋಪಿಗಳಲ್ಲಿ ಇತ್ತು. ಹೀಗಾಗಿ, ಅವರು ತಿಂಗಳಿಗೊಮ್ಮೆ ಮಾತ್ರ ಸುಲಿಗೆ ಮಾಡುತ್ತಿದ್ದರು. ಅದೇ ಕಾರಣಕ್ಕೆ, 2018ರಿಂದ ಕೃತ್ಯ ಎಸಗಿದರೂ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ.’

‘ಅನ್ನಪೂರ್ಣೇಶ್ವರಿನಗರ, ಬಸವೇಶ್ವರನಗರ, ರಾಜರಾಜೇಶ್ವರಿನಗರ, ದಾಬಸ್‌ಪೇಟೆ, ಹೊಸಕೋಟೆ, ಮಾದನಾಯಕನಹಳ್ಳಿ, ಕೊರಟಗೆರೆ, ನಾಗಮಂಗಲ, ಬೆಸಗರನಹಳ್ಳಿ ಹಾಗೂ ಐಜೂರು ಠಾಣೆ ವ್ಯಾಪ್ತಿಯಲ್ಲೂ ಆರೋಪಿಗಳು ಸುಲಿಗೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.’

ಸಿ.ಸಿ.ಟಿ.ವಿ ಕ್ಯಾಮೆರಾ ಸುಳಿವು: ‘ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ನಿವಾಸಿಯೊಬ್ಬರು ಆ. 26ರಂದು ವಾಯುವಿಹಾರ ಮಾಡುತ್ತಿದ್ದರು. ಅವರನ್ನು ಅಡ್ಡಗಟ್ಟಿದ್ದ ಆರೋಪಿಗಳು, ಚಾಕು ತೋರಿಸಿ ಬೆದರಿಸಿ 22 ಗ್ರಾಂ ತೂಕದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ನಿವಾಸಿ ನೀಡಿದ್ದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಘಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ, ಆರೋಪಿಗಳ ಸುಳಿವು ಸಿಕ್ಕಿತ್ತು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT