ಶುಕ್ರವಾರ, ಅಕ್ಟೋಬರ್ 22, 2021
29 °C
ಪೊಲೀಸರಿಗೆ ಸವಾಲು ಹಾಕಿದ್ದ ಆರೋಪಿ

ಬೆಂಗಳೂರನ್ನೇ ಸರ್ವನಾಶ ಮಾಡಿ ಬಿಡ್ತೀನಿ ಎಂದಿದ್ದ ರೌಡಿಶೀಟರ್ ಮೆಂಟಲ್ ಮಂಜ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಎಸ್‌ಪಿ, ಡಿಎಸ್‌ಪಿ ಸರ್‌. ಕುಳ್ಳ ವೆಂಕಟೇಶ್‌ನ ಕೊಲೆ ಮಾಡಿದ್ದು ನಾನು. ಅನಿಲ್‌ ಅಲ್ಲ. ಅವ್ನು ಒಳ್ಳೆಯವ್ನು. ಅವ್ನನ್ನ ವರ್ಕ್‌ ಮಾಡ್ತಿರೋರು ನೀವೆ ಅಲ್ವಾ. ಅವ್ನನ್ನ ಬಿಟ್ಬಿಡಿ. ತಾಕತ್ತಿದ್ರೆ ನನ್‌ ಮೈ ಮುಟ್ಟಿ. ಇಡೀ ಬೆಂಗಳೂರನ್ನೇ ಸರ್ವನಾಶ ಮಾಡಿ ಬಿಡ್ತೀನಿ. ಏನ್‌ ಅಂದ್ಕೊಂಡಿದಿಯಾ ನನ್‌ ಬಗ್ಗೆ’...

ರೌಡಿಶೀಟರ್‌ ಮಂಜುನಾಥ ಯಾನೆ ಮೆಂಟಲ್‌ ಮಂಜ ಪೊಲೀಸ್‌ ಅಧಿಕಾರಿಗಳಿಗೆ ಸವಾಲು ಹಾಕಿರುವ ಪರಿ ಇದು. ಈ ಕುರಿತ ಆಡಿಯೊ ಈಗ ಎಲ್ಲೆಡೆ ಹರಿದಾಡುತ್ತಿದೆ. ಆಡಿಯೊ ಬಹಿರಂಗದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ತಮಿಳುನಾಡಿನಲ್ಲಿ ಮಂಜನನ್ನು ಬಂಧಿಸಿದ್ದಾರೆ.

‘ಅವಲಹಳ್ಳಿ ಠಾಣೆ ವ್ಯಾಪ್ತಿಯ ಅಂಗಡಿಯೊಂದರ ಎದುರು ಇತ್ತೀಚೆಗೆ ಅನಿಲ ಮತ್ತು ಆತನ ಸಹಚರರು ರೌಡಿಶೀಟರ್‌ ಕುಳ್ಳ ವೆಂಕಟೇಶ್‌ನನ್ನು ಕೊಲೆ ಮಾಡಿ ಆಟೊದಲ್ಲಿ ಪರಾರಿಯಾಗಿದ್ದರು. ಆ ಕೊಲೆಗೂ ಮಂಜನಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿತ್ತು. ತಾನು ಡಾನ್ ಎನಿಸಿಕೊಳ್ಳಬೇಕು ಎಂಬ ಹಪಹಪಿಯಲ್ಲಿ ಮಂಜ ಆಡಿಯೊ ಮಾಡಿ ಹರಿಬಿಟ್ಟಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕುಡಿದ ಅಮಲಿನಲ್ಲಿ ತಾನು ಈ ರೀತಿ ಮಾತನಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಕುಳ್ಳ ವೆಂಕಟೇಶ್‌ನ ಜಮೀನು ತನಗೆ ಸೇರಬೇಕು ಎಂದು ಹೇಳುತ್ತಿದ್ದಾನೆ. ಜಮೀನಿಗೂ ಕೊಲೆಗೂ ಏನಾದರೂ ಸಂಬಂಧವಿದೆಯೇ ಎಂಬುದು ಗೊತ್ತಿಲ್ಲ. ಆ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತೇವೆ’ ಎಂದೂ ಹೇಳಿದ್ದಾರೆ.

ಆಡಿಯೊದಲ್ಲಿ ಮಂಜ ಹೇಳಿದ್ದೇನು
‘ಓ ಡಿಎಸ್‌ಪಿ ಸರ್‌. ಕುಳ್ಳ ವೆಂಕಟೇಶನ್ನ ಮೊದಲು ಹೊಡೆದಿದ್ದು ನಾನು. ಅನಿಲ್‌ ವಿಡಿಯೊದಲ್ಲಿ ಕಾಣಿಸುತ್ತಿದ್ದಾನಷ್ಟೇ. ಅವ್ನನ್ನ ಹೊಡೆದು ಬಂದ ಮೇಲೆ ತಲೆ ತಿರುಗಿ ಬಿದ್ದಿದ್ದೆ. ಅದು ಗೊತ್ತಾ ನಿನಗೆ. ಅನಿಲ್‌ ಒಳ್ಳೆಯವ್ನು, ನೀನು ತಿಕ್ಕಲು. ಡಿಎಸ್‌ಪಿ ಅಂತೆ’.

‘ನಾನು ನ್ಯಾಯವಾಗಿದ್ದೀನಿ. ನ್ಯಾಯವಾಗೇ ಹೋಗ್ತೀನಿ. ಕುಳ್ಳ ವೆಂಕಟೇಶ್‌ ಯಾರು. ಅವನು ಸುಮ್ನೆ ಇರ್ಬೇಕು. ಇರೊ ಜಮೀನಿಗೆಲ್ಲಾ ಬರಕೂಡದು ಅವನು. ನಂದು ನಂದು ನಂದು ಅಂದ್ರೆ, ದುಡ್‌ ಹಾಕಿದ್ದ ನಾವು ಏನ್‌ ಮಾಡ್ಬೇಕು. ಓಹೋ ಡಿಎಸ್‌ಪಿ, ಎಸ್‌ಪಿ. ಕಾಂಜಿಪಿಂಜಿ ಜನಗಳು ನೀವು. ಖಾಕಿ ಬಟ್ಟೆ ಮೈಮೇಲೆ ಇದೆ ಅಂತ ದುರಂಹಾರ ಪಡಬೇಡ. ನ್ಯಾಯವಾಗಿ ನೋಡಲೇ’.

‘ಮುಂದೆ ಬೆಂಗಳೂರಿಗೆ ಅಂಡರ್‌ ವರ್ಲ್ಡ್‌ ಡಾನ್‌ ನಾನು. ಆಗೋದು ಕನ್ಫರ್ಮ್ಮೆ. ಆಗೇ ಆಗ್ತೀನಿ. ಆಗೇ ತೀರ್ತಿನಿ. ತಾಕತ್ತಿದ್ರೆ ಮುಟ್ಟೊ ನನ್‌ ಮೈಯನ್ನಾ’.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು