ಬುಧವಾರ, ನವೆಂಬರ್ 25, 2020
24 °C
ಬಿರುಸಿನ ಸಿದ್ಧತೆ * 144 ಸೆಕ್ಷನ್‌ ಜಾರಿ

ಉಪ ಚುನಾವಣೆ: ಕೊರೊನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಕಾಣಿಸಿಕೊಂಡ ಬಳಿಕ ನಡೆಯುತ್ತಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯ ಮತದಾನ ಇದೇ 3ರಂದು (ಮಂಗಳವಾರ) ನಡೆಯಲಿದ್ದು ಕೊನೆ ಕ್ಷಣದ ಸಿದ್ಧತೆಗಳು ಭರದಿಂದ ಸಾಗಿವೆ. ಕೊರೊನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಕರ್ತವ್ಯನಿರತ ಸಿಬ್ಬಂದಿಗೆ ಅಪಾಯವಾಗದಂತೆ ಕಟ್ಟೆಚ್ಚರ ವಹಿಸಲು ಚುನಾವಣಾ ಆಯೋಗ ಹರಸಾಹಸ ನಡೆಸುತ್ತಿದೆ.

ಮತದಾನದ ಸಿದ್ಧತೆ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ಹಾಗೂ ನಗರದ ಪೊಲೀಸ್‌ ಕಮಿಷನರ್‌ ಕಮಲಪಂಥ್‌ ಸುದ್ದಿಗಾರರಿಗೆ ಭಾನುವಾರ ಮಾಹಿತಿ ನೀಡಿದರು.

ಎಡಗೈ ಮಧ್ಯ ಬೆರಳಿಗೆ ಶಾಯಿ: ‘ಎಲ್ಲ 678 ಮತಗಟ್ಟೆಗಳಿಗೂ ಆರೋಗ್ಯಾಧಿಕಾರಿಯನ್ನು ನಿಯೋಜಿಸಲಾಗಿದೆ. ದೇಹದ ಉಷ್ಣಾಂಶ ತಪಾಸಣೆ ನಡೆಸುವ ಯಂತ್ರ, ಸೋಂಕು ನಿವಾರಕ ದ್ರಾವಣ (ಸ್ಯಾನಿಟೈಟಸರ್), ಹಾಗೂ ಪ್ರತಿ ಮತದಾರರಿಗೆ (ಬಲಗೈಗೆ) ತಲಾ ಒಂದು ಕೈಗವಸು (ಗ್ಲೋವ್‌) ನೀಡಲಿದ್ದೇವೆ. ಮತದಾರರು ಬಲಗೈಯಲ್ಲಿ ಕೈಗವಸು ಧರಿಸುವುದು ಕಡ್ಡಾಯವಾಗಿರುವುದರಿಂದ ಈ ಬಾರಿ ಎಡಗೈ ಮಧ್ಯದ ಬೆರಳಿಗೆ ಶಾಯಿ ಹಾಕಲಾಗುತ್ತದೆ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಕೋವಿಡ್‌ ಸೋಂಕಿತರು ಕೊನೇಯ 1 ಗಂಟೆಯಲ್ಲಿ ಮತ ಹಾಕಲು ಅವಕಾಶ ಕಲ್ಪಿಸಲಾಗುತ್ತದೆ. ಅವರನ್ನು ಮತಗಟ್ಟೆಗೆ ಕರೆ ತರಲು 90 ಆ್ಯಂಬುಲೆನ್ಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅವರಿಗೆ ಉಚಿತವಾಗಿ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ ಕಿಟ್‌) ಒದಗಿಸಲಿದ್ದೇವೆ’ ಎಂದರು.

‘ಮತಗಟ್ಟೆಯ ಸಿಬ್ಬಂದಿ ಅಗತ್ಯಬಿದ್ದರೆ ಸಂಜೆ 5ರಿಂದ 6ಗಂಟೆವರೆಗೆ ಪಿಪಿಇ ಕಿಟ್‌ ಧರಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇದಕ್ಕಾಗಿಯೇ ಪ್ರತಿ ಮತಗಟ್ಟೆಗೆ ತಲಾ 10 ಪಿಪಿಇ ಕಿಟ್‌ಗಳನ್ನು ಒದಗಿಲಾಗಿದೆ. ಮತದಾನಕ್ಕೆ ಮುನ್ನಾ ದಿನ ಇಡೀ ಮತಗಟ್ಟೆಗೆ ಸೋಂಕು ನಿವಾರಕ ಸಿಂಪಡಿಸಲಾಗುತ್ತದೆ. ಕೋವಿಡ್‌ ಲಕ್ಷಣ ಇರುವವರು ಭೇಟಿ ನೀಡಿದರೆ ನಡುವೆ ಸೋಂಕು ನಿವಾರಕ ಸಿಂಪಡಿಸುವುದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಚುನಾವಣಾ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ವಿಶೇಷ ಆಯುಕ್ತ ಜೆ.ಮಂಜುನಾಥ ಮಾಹಿತಿ ನೀಡಿದರು.

ಬಹಿರಂಗ ಪ್ರಚಾರ ಅಂತ್ಯ
‘ಚುನಾಣೆಯ ಬಹಿರಂಗ ಪ್ರಚಾರ ಭಾನುವಾರ ಸಂಜೆ 6ಕ್ಕೆ ಅಂತ್ಯವಾಗಿದೆ. ಇನ್ನು ಧ್ವನಿವರ್ಧಕ ಬಳಸಿ ಪ್ರಚಾರ ನಡೆಸುವಂತಿಲ್ಲ. ಐದು ಮಂದಿಗಿಂತ ಹೆಚ್ಚು ಮಂದಿ ಮನೆ ಮನೆ ಪ್ರಚಾರಕ್ಕೆ ಹೋಗುವಂತಿಲ್ಲ. ಹೊರಗಡೆಯಿಂದ ಚುನಾವಣಾ ಬೇರೆ ಕಡೆಯಿಂದ ಪ್ರಚಾರಕ್ಕೆ ಬಂದಿರುವ ಮುಖಂಡರು ಹಾಗೂ ಪ್ರಚಾರಕರು ಕ್ಷೇತ್ರದಿಂದ ನಿರ್ಗಮಿಸಬೇಕು. ಇಲ್ಲದಿದ್ದರೆ ಅಂತಹವರ ಮೇಲೆ ಪ್ರಕರಣ ದಾಖಲಿಸಲಿದ್ದೇವೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಎಚ್ಚರಿಕೆ ನೀಡಿದರು. 

148 ಮತದಾರರಿಗೆ ಕೋವಿಡ್‌
ಚುನಾವಣಾ ಆಯೋಗದ ಸಿಬ್ಬಂದಿ ಕಲೆ ಹಾಕಿರುವ ಗುರುತಿಸಿರುವ ಪ್ರಕಾರ ಈ ಕ್ಷೇತ್ರದಲ್ಲಿ 148 ಮತದಾರರು ಕೋವಿಡ್‌ ಹೊಂದಿರುವುದು ದೃಢಪಟ್ಟಿದೆ.

‘ಬಹುತೇಕ ಸೋಂಕಿತರು ಮತದಾನ ಮಾಡುವ ಬಗ್ಗೆ ಇನ್ನೂ ಖಚಿತಪಡಿಸಿಲ್ಲ. ಅವರು ಬಯಸಿದರೆ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಿದ್ದೇವೆ’ ಎಂದು ವಿಶೇಷ ಆಯುಕ್ತ ಜೆ.ಮಂಜುನಾಥ ಮಾಹಿತಿ ನೀಡಿದರು.

ಮತದಾನಕ್ಕೆ ವ್ಯವಸ್ಥೆ ಕಲ್ಪಿಸುವ ಮಾಹಿತಿ ನೀಡಲು ಸೋಂಕಿತರನ್ನು ಸಂಪರ್ಕಿಸಿರುವ ಚುನಾವಣಾ ಸಿಬ್ಬಂದಿ ಬೈಗುಳವನ್ನೂ ಕೇಳಬೇಕಾಗಿದೆ.

‘ನಮಗೆ ಆರೋಗ್ಯದ ಚಿಂತೆಯಾದರೆ ನಿಮಗೆ ಚುನಾವಣೆಯ ಚಿಂತೆ ಎಂದು ಅನೇಕರು ಬೈದಿದ್ದಾರೆ. ಮತ ಚಲಾಯಿಸುತ್ತೇವೋ ಇಲ್ಲವೋ ಎಂಬ ಬಗ್ಗೆ ಮತದಾನದ ದಿನ ತಿಳಿಸುವುದಾಗಿ ಕೆಲವರು ಹೇಳಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸೆಕ್ಷನ್‌ 144 ಜಾರಿ
‘ಚುನಾವಣೆ ಸಲುವಾಗಿ ಕ್ಷೇತ್ರದಾದ್ಯಂತ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ. ಮದ್ಯ ಮಾರಾಟವನ್ನು ನ.3ರಂದು ನಡುರಾತ್ರಿ 12 ಗಂಟೆವರೆಗೆ ನಿಷೇಧಿಸಲಾಗಿದೆ. ರೌಡಿ ಚಟುವಟಿಕೆಯಲ್ಲಿ ತೊಡಗಿದವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯಲಿದ್ದೇವೆ. ಪರವಾನಗಿ ಪಡೆದ 306 ಶಸ್ತ್ರಾಸ್ತ್ರಗಳನ್ನು ಮುಂಜಾಗ್ರತಾ ಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ’  ಎಂದು ಕಮಲಪಂತ್‌ ತಿಳಿಸಿದರು.

‘102 ಸಂಚಾರ ತಂಡಗಳು ದಿನದ 24 ಗಂಟೆಗಳೂ  ಚುನಾವಣಾ ಅಕ್ರಮಗಳ ಮೇಲೆ ನಿಗಾ ಇಡುತ್ತಿವೆ. ಒಬ್ಬ ಎಎಸ್‌ಐ ಹಾಗೂ ನಾಲ್ವರು ಸಿಬ್ಬಂದಿ ಇರುವ ತಂಡಗಳನ್ನು ಇಲ್ಲಿಗೆ ನಿಯೋಜಿಸಲಾಗಿದೆ. 8 ಎಸಿಪಿಗಳು, 30 ಇನ್‌ಸ್ಪೆಕ್ಟರ್‌ಗಳು, 94 ಎಸ್‌ಐಗಳು 185 ಎಎಸ್‌ಐಗಳ ನೇತೃತ್ವದಲ್ಲಿ ವಿವಿಧ ತಂಡಗಳನ್ನು ರಚಿಸಲಾಗಿದೆ. ನಗರ ಸಶಸ್ತ್ರ ಮೀಸಲು ಪಡೆಯ 3, ಸಂಚಾರ ದಳದ 40 ತಂಡಗಳನ್ನು ನಿಯೋಜಿಸಿದ್ದೇವೆ. 82 ಸೂಕ್ಷ ಮತಗಟ್ಟೆಗಳಲ್ಲಿ 141 ಪ್ರದೇಶಗಳನ್ನು ಗುರುತಿಸಿ ಅಲ್ಲಿ ಭದ್ರತೆ ಹೆಚ್ಚಿಸಿದ್ದೇವೆ. ದೂರು ಬಂದ ತಕ್ಷಣ ಸ್ಪಂದಿಸಲು ಬೇರೆಕಡೆಗಳಿಂದ 32 ಹೊಯ್ಸಳ ವಾಹನಗಳನ್ನು, 91 ಚೀತಾ ವಾಹನಗಳನ್ನು  ನಿಯೋಜಿಸಿದ್ದೇವೆ ’ ಎಂದರು.

ದರ್ಶನ್‌ ಪ್ರಚಾರ– ಪ್ರಕರಣ ದಾಖಲು
‘ಸಿನಿಮಾ ನಟ ದರ್ಶನ್‌ ಬಿಜೆಪಿ ಅಭ್ಯರ್ಥಿ ಪರವಾಗಿ ನಡೆಸಿವ ಚುನಾವಣಾ ಪ್ರಚಾರವೂ ಸೇರಿದಂತೆ ಕೋವಿಡ್‌ ನಿಯಂತ್ರಣ ನಿಯಮ ಉಲ್ಲಂಘನೆಗಾಗಿ ಚುನಾವಣಾ ಆಯೋಗ ಇದುವರೆಗೆ 15 ಪ್ರಕರಣ ದಾಖಲಿಸಿಕೊಂಡಿದೆ. ಇದರಲ್ಲಿ ಕಾಂಗ್ರೆಸ್‌ ವಿರುದ್ಧ ನಾಲ್ಕು, ಬಿಜೆಪಿ ವಿರುದ್ಧ 8 ಹಾಗೂ ಜೆಡಿಎಸ್‌ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ ’ ಎಂದು ಜಿಲ್ಲಾ ಚುನಾವಣಾಧಿಕಾರಿ ಮಾಹಿತಿ ನೀಡಿದರು.

‘ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಒಟ್ಟು 145 ಪ್ರಕರಣ ದಾಖಲಾಗಿದೆ. 36 ಸಂಚಾರಿ ತಂಡಗಳು, 7 ವಿಡಿಯೊ ನಿಗಾ ತಂಡಗಳು ಹಾಗೂ 9 ಅಬಕಾರಿ ಸಂಚಾರಿ ತಂಡಗಳು ಇದರ ಮೇಲೆ ನಿಗಾ ಇಡಲಿವೆ. ವಾಹನ ತಪಾಸಣೆ ನಡೆಸುವುದರ ಜೊತೆಗೆ, ಕಲ್ಯಾಣ ಮಂಟಪಗಳಲ್ಲಿ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಲಿವೆ’ ಎಂದರು.  

ಅಂಕಿ ಅಂಶ

100: ಸೂಕ್ಷ್ಮ ವೀಕ್ಷಕರನ್ನು ನಿಯೋಜನೆ ಮಾಡಲಾಗಿದೆ.

40: ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಇರಲಿದೆ

50: ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ

2: ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ

2,563: ಚುನಾವಣೆಗೆ ನಿಯೋಜಿಸಲಾದ ಭದ್ರತಾ ಸಿಬ್ಬಂದಿ

19: ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯ (ಕೆಎಸ್ಆರ್‌ಪಿ) ತುಕಡಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ

20: ನಗರ ಸಶಸ್ತರ ಮೀಸಲು (ಸಿಎಆರ್) ಪಡೆ  ತುಕಡಿಗಳನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು