ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಂತ್ರಸ್ತ ಕುಟುಂಬಗಳಿಗೆ ₹1 ಲಕ್ಷ ಪರಿಹಾರ ವಿತರಣೆಗೆ ಚಾಲನೆ

Last Updated 23 ಸೆಪ್ಟೆಂಬರ್ 2021, 19:47 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌‌ನಿಂದ ಕುಟುಂಬದ ದುಡಿಯುವ ಸದಸ್ಯರನ್ನೇ ಕಳೆದುಕೊಂಡ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಕ್ಕೆ‍ ₹1 ಲಕ್ಷ ಪರಿಹಾರ ನೀಡುವ ಕಾರ್ಯಕ್ಕೆ ಕಂದಾಯ ಸಚಿವ ಆರ್.ಅಶೋಕ್ ಗುರುವಾರ ಚಾಲನೆ ನೀಡಿದರು.

‘ಕೋವಿಡ್ ಸಮಯದಲ್ಲಿ ಅನೇಕ ಕುಟುಂಬಗಳು ತಂದೆ, ತಾಯಿಯನ್ನು ಕಳೆದುಕೊಂಡಿವೆ. ಇನ್ನು ಕೆಲವರು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಅಂತಹವರ ನೆರವಿಗೆ ನಿಲ್ಲುವ ಸಲುವಾಗಿ ₹1 ಲಕ್ಷ ಪರಿಹಾರವನ್ನು ಬಿಪಿಎಲ್ ಕುಟುಂಬಗಳಿಗೆ ನೀಡಲಾಗುತ್ತಿದೆ. ಅರ್ಜಿ ಸ್ವೀಕೃತಿ, ವಿತರಣೆಗೆ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಎಲ್ಲಾ ನಾಡಕಚೇರಿ, ತಾಲ್ಲೂಕು ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಪರಿಹಾರದ ಕುರಿತು ಆಕ್ಷೇಪಣೆಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದೇವೆ. ಒಟ್ಟು 7,729 ಅರ್ಜಿಗಳು ಬಂದಿವೆ’ ಎಂದರು.

‘ಸುಮಾರು ₹200 ಕೋಟಿಗೂ ಹೆಚ್ಚು ಹಣ ಇದಕ್ಕಾಗಿ ಮೀಸಲಿಡಲಾಗಿದೆ. ಕೋವಿಡ್‌ನಿಂದ ಮೃತಪಟ್ಟವರ ಮಾಹಿತಿಯನ್ನು ಆರೋಗ್ಯ ಇಲಾಖೆಯಿಂದ ಪಡೆಯುತ್ತಿದ್ದೇವೆ. ಸುಪ್ರೀಂ ಕೋರ್ಟ್ ಆದೇಶದಂತೆ, ಕೋವಿಡ್‌ನಿಂದ ದಾಖಲಾಗದ ಸಾವಿನ ಮಾಹಿತಿ ಕೂಡ ಪಡೆಯುತ್ತೇವೆ. ಸಾಂಕೇತಿಕವಾಗಿ ಚೆಕ್ ವಿತರಣೆ ಮಾಡಲಾಗುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಹಣ ನೀಡುತ್ತಾರೆ’ ಎಂದು ವಿವರಿಸಿದರು.

‘ಕೇಂದ್ರ ಸರ್ಕಾರ ₹50 ಸಾವಿರ ಘೋಷಣೆ ಮಾಡಿದೆ. ಆ ಹಣ ಇನ್ನೂ ಬಂದಿಲ್ಲ. ಆ ಹಣ ಬಂದ ಬಳಿಕ ಅದನ್ನು ಕೊಡುತ್ತೇವೆ’ ಎಂದರು.

ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವ ಕಾಂಗ್ರೆಸ್: ‘ಜಾತಿ ಆಧಾರಿತ ರಾಜಕೀಯವನ್ನು ಬಿಜೆಪಿ ಮಾಡುವುದಿಲ್ಲ. ಸಿದ್ಧಾಂತದ ತಳಹದಿಯ ಮೇಲೆ ರಾಜಕೀಯ ಮಾಡುತ್ತದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಈಗಾಗಲೇ 15 ಬಾರಿ ರಾಜ್ಯ ಪ್ರವಾಸ ಮಾಡಿದ್ದಾರೆ. ಜನರ ಸಮಸ್ಯೆಗಳನ್ನು ಅರಿತಿದ್ದಾರೆ. ಕಾಂಗ್ರೆಸ್ ಪಕ್ಷದವರು ಚುನಾವಣಾ ಸಮಯದಲ್ಲಿ ಜಾಗೃತರಾಗುತ್ತಾರೆ. ನಾವು ಸದಾ ಜನರ ಜತೆ ಇರುತ್ತೇವೆ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವುದರಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುವುದಿಲ್ಲ’ ಎಂದು ಟೀಕಿಸಿದರು.

‘60 ವರ್ಷಗಳಿಂದ ಜಾತಿ ಆಧಾರಿತ ರಾಜಕೀಯ ಮಾಡಿಕೊಂಡು ಬಂದಿದೆ. ಈ ಹಿಂದೆ ಧರ್ಮ ಒಡೆಯಲು ಪ್ರಯತ್ನ ಮಾಡಿ ಸೋತರೂ ಬುದ್ಧಿ ಕಲಿಯಲಿಲ್ಲ. ಕಾಂಗ್ರೆಸ್ ಪಕ್ಷವು ಜೆಡಿಎಸ್ ಜೊತೆ ಸಮ್ಮಿಶ್ರ ಸರ್ಕಾರ ರಚಿಸಿ, ಜೆಡಿಎಸ್‌ಗೆ ಕೈ ಕೊಟ್ಟಿದೆ. ಜನರಿಗೂ ಕಾಂಗ್ರೆಸ್ ಬಗ್ಗೆ ಭಯ ಇದೆ. ಕೈ ಕೊಡುವ ಪಕ್ಷವದು’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT