ಗುರುವಾರ , ಮಾರ್ಚ್ 23, 2023
28 °C
ದಂಡ ಪಾವತಿಸಲು ಮುಗಿಬಿದ್ದ ಜನ l ₹ 4.77 ಲಕ್ಷ ಪ್ರಕರಣ ಇತ್ಯರ್ಥ

ಎರಡೇ ದಿನದಲ್ಲಿ ₹13.81 ಕೋಟಿ ದಂಡ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶೇ 50ರಷ್ಟು ರಿಯಾಯಿತಿ ಘೋಷಿಸಿದ್ದರಿಂದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಜನರು ಮುಗಿಬೀಳುತ್ತಿದ್ದು, ಎರಡು ದಿನಗಳಲ್ಲಿ ₹ 13.81 ಕೋಟಿ ದಂಡ ಸಂಗ್ರಹವಾಗಿದೆ.

ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಪ್ರಸ್ತಾವನೆ ಒಪ್ಪಿದ್ದ ರಾಜ್ಯ ಸರ್ಕಾರ, ಸಂಚಾರ ನಿಯಮ ಉಲ್ಲಂಘನೆಯ ಇ–ಚಲನ್ ಪ್ರಕರಣಗಳ ದಂಡ ಪಾವತಿ ಮೇಲೆ ರಿಯಾಯಿತಿ ನೀಡಿ ಫೆ. 2ರಂದು ಆದೇಶ ಹೊರಡಿಸಿತ್ತು. ಫೆ. 3ರಿಂದ ದಂಡ ಸಂಗ್ರಹ ಪ್ರಕ್ರಿಯೆ ಆರಂಭವಾಗಿದ್ದು, ರಿಯಾಯಿತಿ ದಂಡ ಪಾವತಿಸಲು ಫೆ. 11 ಕೊನೆ ದಿನವಾಗಿದೆ.

ನಗರದ ಸಂಚಾರ ಪೊಲೀಸ್ ಠಾಣೆಗಳು, ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ) ಹಾಗೂ ಕರ್ನಾಟಕ ಒನ್‌- ಬೆಂಗಳೂರು ಒನ್ ಕೇಂದ್ರಗಳಲ್ಲಿ ಶುಕ್ರವಾರದಿಂದಲೇ ಜನರು ದಂಡ ಪಾವತಿಸುತ್ತಿದ್ದಾರೆ. ಶನಿವಾರವೂ ಎಲ್ಲ ಕಡೆ ಜನರ ಸರದಿ ಸಾಲು ಕಂಡುಬಂತು.

ಇನ್ಫೆಂಟ್ರಿ ರಸ್ತೆಯಲ್ಲಿರುವ ಟಿಎಂಸಿಯಲ್ಲಿ ದಂಡ ಪಾವತಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರು. ಕಂಪ್ಯೂಟರ್‌ಗಳ ಕೊರತೆಯಿಂದಾಗಿ ದಂಡ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿತ್ತು. ಜನರ ಸರದಿಯೂ ಹೆಚ್ಚಾಗಿತ್ತು. ಎಎಸ್‌ಐ ಹಾಗೂ ಪಿಎಸ್‌ಐಗಳು ಕೇಂದ್ರಕ್ಕೆ ಬಂದು ತಮ್ಮ ಬಳಿಯ ಉಪಕರಣ ಸಹಾಯದಿಂದ ದಂಡ ಸಂಗ್ರಹಿಸಿದರು.

ಆನ್‌ಲೈನ್ ಮೂಲಕ ದಂಡ ಪಾವತಿಸಲು ಹೆಚ್ಚು ಜನರು ಆಸಕ್ತಿ ತೋರಿಸುತ್ತಿದ್ದಾರೆ. ಕರ್ನಾಟಕ ಒನ್ ಹಾಗೂ ಪೇಟಿಎಂ ಆ್ಯಪ್‌ ಮೂಲಕ ಹೆಚ್ಚಿನ ದಂಡ ಸಂಗ್ರಹವಾಗಿದೆ.

ಪೊಲೀಸರ ಬಳಿ ಜನ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಪತ್ತೆಗಾಗಿ ಜನರು ರಸ್ತೆಯಲ್ಲಿ ನಿಲ್ಲುತ್ತಿದ್ದರು. ವಾಹನಗಳನ್ನು ತಡೆದು ದಂಡ ಸಂಗ್ರಹಿಸುತ್ತಿದ್ದರು. ರಿಯಾಯಿತಿ ಘೋಷಿಸಿದ ದಿನದಿಂದ ಜನರೇ ಪೊಲೀಸರ ಬಳಿ ಬಂದು ದಂಡ ಕಟ್ಟುತ್ತಿದ್ದಾರೆ.

‘ರಸ್ತೆಯಲ್ಲಿ ವಾಹನ ಅಡ್ಡಗಟ್ಟಿದಾಗ ಜನರು ಬೈಯುತ್ತಿದ್ದರು. ಇದೀಗ, ಜನರೇ ಉತ್ಸಾಹದಿಂದ ದಂಡ ಪಾವತಿಸುತ್ತಿದ್ದಾರೆ. ರಿಯಾಯಿತಿಯಿಂದ ದಂಡ ಸಂಗ್ರಹದ ರೂಪವೇ ಬದಲಾಗಿದೆ’ ಎಂದು ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು