ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದಾಪುರ ಕೆರೆಗೆ ₹500 ಕೋಟಿ ಪರಿಹಾರ: ಕರ್ನಾಟಕ ಸರ್ಕಾರಕ್ಕೆ ಎನ್‌ಜಿಟಿ ಆದೇಶ

ಜಲಕಾಯ ಅಭಿವೃದ್ಧಿಗೆ ಬಳಸಲು ನಿರ್ದೇಶನ
Last Updated 14 ಅಕ್ಟೋಬರ್ 2022, 2:24 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಚಂದಾಪುರ ಕೆರೆಗೆಸುತ್ತಮುತ್ತಲ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಕೈಗಾರಿಕೆಗಳ ಕೊಳಚೆ ನೀರು ಸೇರಿ ಅಪಾರ ಹಾನಿ ಉಂಟಾಗಿದ್ದು, ಈ ಪರಿಸರ ಹಾನಿ ಸರಿಪಡಿಸಲು ಕರ್ನಾಟಕ ಸರ್ಕಾರವು ಕೆರೆಗೆ ₹500 ಕೋಟಿ ಪರಿಹಾರ ನೀಡಬೇಕು ಎಂದು ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠ ಆದೇಶಿಸಿದೆ.

ಚಂದಾಪುರ ಕೆರೆ ಮಾಲಿನ್ಯ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿಆದರ್ಶ ಕುಮಾರ್‌ ಗೋಯೆಲ್‌, ನ್ಯಾಯಮೂರ್ತಿ ಸುಧೀರ್ ಅಗರವಾಲ್‌, ತಜ್ಞ ಸದಸ್ಯರಾದ ಪ್ರೊ.ಸೆಂಥಿಲ್‌ ವೇಲ್‌, ಡಾ.ಅಫ್ರೋಜ್‌ ಅಹ್ಮದ್‌ ಅವರನ್ನು ಒಳಗೊಂಡ ಪೀಠ ಈ ಆದೇಶ ಹೊರಡಿಸಿದೆ.

ಈ ಪರಿಹಾರದ ಮೊತ್ತವನ್ನು ಒಂದು ತಿಂಗಳಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಖಾತೆಯಲ್ಲಿ ಇಡಬೇಕು. ಈ ಮೊತ್ತವನ್ನು ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಬೇಕು. ಕೆರೆಯ ಪುನರುಜ್ಜೀವನಕ್ಕೆ ಸಮಗ್ರ ಯೋಜನೆ ರೂಪಿಸಬೇಕು. ಒಂದು ವೇಳೆ ಈ ಮೊತ್ತ ಕಡಿಮೆಯಾದರೆ ಹೆಚ್ಚುವರಿ ಅನುದಾನವನ್ನು ಒದಗಿಸಬೇಕು. ಅಭಿವೃದ್ಧಿ ಕಾಮಗಾರಿ ನಡೆಸಿ ಆರು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದೂ ಪೀಠ ನಿರ್ದೇಶನ ನೀಡಿದೆ. ಪ್ರಕರಣದ ವಿಚಾರಣೆಯನ್ನು 2023ರ ಫೆಬ್ರುವರಿ 22ಕ್ಕೆ ಮುಂದೂಡಿದೆ.

ಕೆರೆಯ ಅಭಿವೃದ್ಧಿಯ ಮೇಲೆ ನಿಗಾ ವಹಿಸಲು ಕರ್ನಾಟಕ ಜೌಗು ಪ್ರದೇಶ ಪ್ರಾಧಿಕಾರದ ಮುಖ್ಯಸ್ಥರ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸ ಬೇಕು. ಈ ಸಮಿತಿಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಸಚಿವಾಲಯದ ಪ್ರಾದೇಶಿಕ ಅಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಜಿಲ್ಲಾಧಿಕಾರಿ, ಕೆಐಎಡಿಬಿಯ ಅಧಿಕಾರಿ ಇರಬೇಕು. ಈ ಸಮಿತಿಯು ಒಂದು ತಿಂಗ ಳೊಳಗೆ ಸಭೆ ಸೇರಿ ರೂಪರೇಷೆ ಸಿದ್ಧಪಡಿಸಬೇಕು ಎಂದೂ ಪೀಠ ಸೂಚಿಸಿದೆ.

ಕೆರೆಯ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿತ್ತು. ಈ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಮುಖ್ಯ ಕಾರ್ಯದರ್ಶಿಯವರು ವರದಿ ಸಲ್ಲಿಸಿದ್ದಾರೆ. ಸ್ಥಳೀಯ ಪ್ರಾಧಿಕಾರಗಳ ನಿರ್ಲಕ್ಷ್ಯದಿಂದ ಜಲಕಾಯದ ಪರಿಸರ ವ್ಯವಸ್ಥೆ ಮೇಲೆ ಹಾನಿ ಉಂಟಾಗಿದೆ. ಕೆರೆಯ ಮೀಸಲು ಪ್ರದೇಶದ ಸಂರಕ್ಷಣೆಯಲ್ಲೂ ಲೋಪ ಆಗಿದೆ ಎಂದು ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT