ಶುಕ್ರವಾರ, ಜುಲೈ 1, 2022
21 °C
ಡಾ. ಸಿ. ವೀರಣ್ಣ ಅವರ ‘ರುದ್ರ ಭಾರತ’ ನಾಟಕ ಕೃತಿ ಬಿಡುಗಡೆ

‘ಹಿಂಸಾಚಾರ, ಮಾನಸಿಕ ಕ್ಷೋಭೆಗಳ ಚರ್ಚೆಯೇ ಮಹಾಭಾರತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಹಾಭಾರತದಲ್ಲಿ ಪೌರಾಣಿಕ, ಅಲೌಕಿಕ ಪಾತ್ರಗಳಿಗಿಂತ ಈಗ ನಮ್ಮ ಸುತ್ತಲೂ ಇರುವ ಮನುಷ್ಯರೇ ಕಾಣುತ್ತಾರೆ. ಅದೊಂದು ಶ್ರೇಷ್ಠ ಧರ್ಮಗ್ರಂಥ ಎನ್ನುವುದರ ಬದಲು ಹಿಂಸಾಚಾರ, ಮಾನಸಿಕ, ನೈತಿಕ ಕ್ಷೋಭೆಗಳ ಚರ್ಚೆಯಾಗಿ ಕಾಣುತ್ತದೆ’ ಎಂದು ಹಿರಿಯ ಸಾಹಿತಿ ಡಾ. ಗೊ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟರು.

ಡಾ. ಸಿ. ವೀರಣ್ಣ ಅವರ ‘ರುದ್ರ ಭಾರತ’ ನಾಟಕ ಕೃತಿಯನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಕುರುಕ್ಷೇತ್ರ ಯುದ್ಧ ಮುಗಿದ ನಂತರ ಮಹಾಭಾರತವು ಒಂದು ಮಾನವಸಹಜ ಘರ್ಷಣೆಗಳ ವ್ಯಥೆಯ ಕಥೆಯಂತೆ ನಮಗೆ ಕಾಣುತ್ತದೆ’ ಎಂದರು. 

‘ಧರ್ಮವಿಲ್ಲದ ದೊರೆತನ ಮತ್ತು ಕೃಷ್ಣನೇ ಮಾಡುವ ಹಿಂಸೆಯ ಪ್ರತಿಪಾದನೆಯಿಂದಾಗಿ ಮಹಾಭಾರತದ ಶಾಂತಿಪರ್ವದಲ್ಲೂ ಹಿಂಸೆ ಕಾಣುತ್ತದೆ. ಈ ಯುದ್ಧೋತ್ತರ ಸತ್ಯಗಳನ್ನು ಈ ನಾಟಕವು ಯಾವುದೇ ಅತಿಶಯವಿಲ್ಲದೆ ಪರಿಣಾಮಕಾರಿಯಾಗಿ ಚಿತ್ರಿಸಿದೆ’ ಎಂದು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಸಿದ್ಧಪ್ಪ, ‘ರುದ್ರ ಭಾರತವು ಮಹಾಭಾರತ ಕಥೆ ಹೊಂದಿರುವ ನಾಟಕವಾದರೂ ತುಂಬಾ ವಿವರಣಾತ್ಮಕವಾಗಿ ಇರದೆ ಅತ್ಯಂತ ಸಂಕ್ಷಿಪ್ತವಾಗಿ ಅಗತ್ಯ ಸಂದೇಶಗಳನ್ನು ಮಾತ್ರ ಹೇಳಿರುವುದರಿಂದ ಇಂದಿನ ಪೀಳಿಗೆಯ ಓದುಗರಿಗೂ ಇಷ್ಟವಾಗುತ್ತದೆ’ ಎಂದು ಹೇಳಿದರು.

ಕೃತಿ ಪರಿಚಯ ಮಾಡಿದ ರಂಗಕರ್ಮಿ ಆರ್. ವೆಂಕಟರಾಜು, ‘ಯುದ್ಧಾನಂತರ ಎಲ್ಲ ಪ್ರತಿಷ್ಠೆಗಳನ್ನು ಕಳಚಿಟ್ಟು ನಡೆಸುವ ಆತ್ಮಸಂವಾದ ಈ ನಾಟಕದ ವೈಶಿಷ್ಟ್ಯ’ ಎಂದರು.

ಕರ್ನಾಟಕ ಸಾಹಿತ್ಯ ಪರಿಷತ್ತು ಈ ಪುಸ್ತಕವನ್ನು ಪ್ರಕಟಿಸಿದೆ. ಫೇಸ್‌ಬುಕ್‌ ನೇರಪ್ರಸಾರದಲ್ಲಿ ನಾಟಕ ಕೃತಿಯನ್ನು ಬಿಡುಗಡೆ ಮಾಡಲಾಯಿತು.  ನಾಟಕಕಾರ ಡಾ. ಸಿ. ವೀರಣ್ಣ ಉಪಸ್ಥಿತರಿದ್ದರು.

ಹಿರಿಯ ರಂಗಭೂಮಿ ಕಲಾವಿದ ಡಾ. ಲಕ್ಷ್ಮಣದಾಸ್ ಅವರು ಈ ನಾಟಕದ ಹಾಡುಗಳನ್ನು ಹಾಡಿ ರಂಜಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು