ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌.ನಾರಾಯಣ್‌ಗೆ ₹ 43 ಲಕ್ಷ ವಂಚನೆ

₹ 70 ಕೋಟಿ ಸಾಲ ಕೊಡಿಸುವುದಾಗಿ ಮೋಸ
Last Updated 31 ಆಗಸ್ಟ್ 2018, 20:23 IST
ಅಕ್ಷರ ಗಾತ್ರ

ಬೆಂಗಳೂರು: ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ₹ 43 ಲಕ್ಷ ಕಮಿಷನ್ ಪಡೆದು ಚಿತ್ರ ನಿರ್ದೇಶಕ ಎಸ್‌.ನಾರಾಯಣ್ ಅವರಿಗೆ ವಂಚಿಸಿದ್ದ ತಮಿಳುನಾಡಿನ ಜ್ಯೋತಿಷಿ ಸೇರಿ ಮೂವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಮೆಟ್ಟುಪಾಳ್ಯಂನ ಜ್ಯೋತಿಷಿ ರಮೇಶ್ ಅಲಿಯಾಸ್ ಸ್ವಾಮೀಜಿ, ಆತನ ಶಿಷ್ಯ ವಿಜಯ್‌ಕುಮಾರ್ ಹಾಗೂ ಶಿವಗಂಗಾದ ಸಂತಾನಕೃಷ್ಣ ಎಂಬುವ
ವರನ್ನು ಬಂಧಿಸಿದ್ದೇವೆ. ಪ್ರಮುಖ ಆರೋಪಿಗಳಾದ ಮಂದಾರಮೂರ್ತಿ ಹಾಗೂ ಬಾಲಸುಬ್ರಹ್ಮಣ್ಯ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಎಸ್‌.ನಾರಾಯಣ್, ‘ಸಿನಿಮಾ ನಿರ್ಮಾಣ ಹಾಗೂ ಇತರೆ ಪ್ರಾಜೆಕ್ಟ್‌ಗಳಿಗಾಗಿ ಹಣ ಬೇಕಿತ್ತು. ಹೀಗಾಗಿ, ಆಂಧ್ರ ಬ್ಯಾಂಕ್‌ನ ರಾಜಾಜಿನಗರ ಶಾಖೆಯಲ್ಲಿ ಸಾಲ ಕೇಳಿದ್ದೆ. 2017ರ ಮೇ ತಿಂಗಳಲ್ಲಿ ಬ್ಯಾಂಕ್‌ ಬಳಿ ನನ್ನನ್ನು ಭೇಟಿಯಾದ ಒಬ್ಬಾತ, ‘ಸರ್, ಬ್ಯಾಂಕಿನಲ್ಲಿ ಕೆಲಸ ಆಗಲ್ಲ. ನಾಲ್ಕೇ ದಿನಗಳಲ್ಲಿ ನಾನು ಹಣ ಕೊಡಿಸುತ್ತೇನೆ. ಬಡ್ಡಿಯೂ ಕಡಿಮೆ. ಆದರೆ, ಶೇ 1ರಷ್ಟು ಕಮಿಷನ್ ಕೊಡಬೇಕು’ ಎಂದ. ಅದಕ್ಕೆ ಒಪ್ಪಿಕೊಂಡಿದ್ದೆ’ ಎಂದು ವಿವರಿಸಿದರು.

‘ನಂತರ ಆ ವ್ಯಕ್ತಿ ಮೆಟ್ಟುಪಾಳ್ಯಕ್ಕೆ ಕರೆದೊಯ್ದು ರಮೇಶ್ ಎಂಬ ಸ್ವಾಮೀಜಿಯನ್ನು ಭೇಟಿ ಮಾಡಿಸಿದ. ಅವರು ನನ್ನನ್ನು ತಿರುನಲ್ವೇಲಿಯ ಮಂದಾರಮೂರ್ತಿ ಬಳಿ ಕರೆದುಕೊಂಡು ಹೋದರು. ಆತ ಆ ಪ್ರದೇಶದಲ್ಲಿ ತಮಿಳು ಸಮುದಾಯದ ಮುಖಂಡನಂತೆ. ನನ್ನ ಆಸ್ತಿ ದಾಖಲೆಗಳನ್ನು ಪರಿಶೀಲಿಸಿದ ಆತ, ₹ 70 ಕೋಟಿ ಸಾಲ ಕೊಡಲು ಒಪ್ಪಿಕೊಂಡ.’

‘ನನ್ನ ಹೆಸರಿಗೇ ಡ್ರಾಫ್ಟ್ ಸಿದ್ಧಪಡಿಸಿ, ಡಿ.ಡಿಯನ್ನೂ ತೆಗೆಸಿದ. ಉಪನೋಂದಣಾಧಿಕಾರಿ ಕಚೇರಿಗೆ ಕರೆದುಕೊಂಡು ಅಲ್ಲಿನ ಅಧಿಕಾರಿಗಳಿಗೂ ನನ್ನನ್ನು ಪರಿಚಯ ಮಾಡಿಸಿದ. ಯಾವುದೇ ಅನುಮಾನ ಬಾರದಂತೆ ವ್ಯವಸ್ಥಿತವಾಗಿ ‌ಪ್ರಕ್ರಿಯೆ ಪೂರ್ಣಗೊಳಿಸಿದ. ಕೆಲ ದಿನಗಳ ಬಳಿಕ ಕರೆ ಮಾಡಿದ ಮಧ್ಯವರ್ತಿ, ‘ಸರ್ ನೀವು 70 ಲಕ್ಷ ಕಮಿಷನ್ ಹಣ ಕೊಟ್ಟರೆ, ಡಿ.ಡಿಯನ್ನು ತಲುಪಿಸುವ ವ್ಯವಸ್ಥೆ ಮಾಡುತ್ತೇನೆ’ ಎಂದು ಹೇಳಿದ. ಆತನ ಮಾತನ್ನು ನಂಬಿ, ಮೊದಲ ಹಂತದಲ್ಲಿ ₹ 43 ಲಕ್ಷವನ್ನು ಬ್ಯಾಂಕ್ ಖಾತೆಗೆ ಹಾಕಿದ್ದೆ.’

‘ಆ ನಂತರ ಯಾರೂ ಸಂಪರ್ಕಕ್ಕೆ ಸಿಗಲಿಲ್ಲ. ಮೆಟ್ಟುಪಾಳ್ಯಂ ಹಾಗೂ ತಿರುನಲ್ವೇಲಿಗೆ ಹೋದರೂ ಪತ್ತೆಯಾಗಲಿಲ್ಲ. ಹೀಗಾಗಿ, 2017ರ ಡಿಸೆಂಬರ್‌ನಲ್ಲಿ ಯಶವಂತಪುರ ಪೊಲೀಸರಿಗೆ ದೂರು ಕೊಟ್ಟಿದ್ದೆ’ ಎಂದು ಹೇಳಿದರು.

ಹಣ ಮರಳಿಸಿದ: ‘ಬಂಧಿಸಿ ನಗರಕ್ಕೆ ಕರೆತರುತ್ತಿದ್ದಂತೆಯೇ ಸಂತಾನಕೃಷ್ಣ ₹ 30 ಲಕ್ಷವನ್ನು ನಾರಾಯಣ್ ಅವರಿಗೆ ಮರಳಿಸಿದ್ದಾನೆ. ಇನ್ನುಳಿದ ₹ 13 ಲಕ್ಷವನ್ನು ಸದ್ಯದಲ್ಲೇ ಕೊಡುವುದಾಗಿ ನ್ಯಾಯಾಧೀಶರ ಎದುರೇ ಹೇಳಿಕೆ ಕೊಟ್ಟಿದ್ದಾನೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ರಾಜ್ಯದ ಹಲವು ಉದ್ಯಮಿಗಳಿಗೆ ಇದೇ ರೀತಿ ವಂಚಿಸಿರುವುದು ಗೊತ್ತಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಬೆನ್ನಟ್ಟಿದ ಜನ, ಬೆಚ್ಚಿಬಿದ್ದ ಪೊಲೀಸರು!

ಶಿವಗಂಗಾದಲ್ಲಿ ಸಂತಾನ ಕೃಷ್ಣನನ್ನು ವಶಕ್ಕೆ ಪಡೆದುಕೊಂಡ ಯಶವಂತಪುರ ಪೊಲೀಸರನ್ನು ಅಪಹರಣಕಾರರು ಎಂದು ಭಾವಿಸಿದ ಸ್ಥಳೀಯರು, ಅವರ ಕಾರನ್ನು ಸುಮಾರು ಹತ್ತು ಕಿ.ಮೀನಷ್ಟು ದೂರ ಹಿಂಬಾಲಿಸಿದ್ದರು. ಇದರಿಂದ ಕಂಗಾಲಾದ ಪೊಲೀಸರು, ಮಾರ್ಗಬದಲಿಸಿ ಶಿವಂಗಂಗಾ ಎಸ್ಪಿ ಕಚೇರಿಗೆ ತೆರಳಿ ತಮ್ಮ ಪರಿಚಯ ಮಾಡಿಕೊಂಡರು.

ಬಂಧನ ಕಾರ್ಯಾಚರಣೆ ಬಗ್ಗೆ ‘ಪ್ರಜಾವಾಣಿ’ಗೆ ವಿವರಿಸಿದ ಪೊಲೀಸರು, ‘ನಾರಾಯಣ್ ಅವರನ್ನು ಬ್ಯಾಂಕ್ ಬಳಿ ಭೇಟಿಯಾಗಿದ್ದ ಮಧ್ಯವರ್ತಿಯ ಮೊಬೈಲ್ ಸಂಖ್ಯೆಯ ವಿವರ ಪರಿಶೀಲಿಸಿದಾಗ, ಆತನ ಹೆಸರು ವಿಜಯಕುಮಾರ್ ಎಂದು ಗೊತ್ತಾಯಿತು. ಸ್ವಿಚ್ಡ್‌ಆಫ್ ಆಗಿದ್ದರು ಸಹ ಆ ಸಂಖ್ಯೆ ಮೇಲೆ ನಿರಂತರ ನಿಗಾ ಇಟ್ಟಿದ್ದೆವು’ ಎಂದರು.

‘ಕೆಲ ದಿನಗಳ ನಂತರ ಆತ ಪುನಃ ಸಿಮ್ ಚಾಲೂ ಮಾಡಿದ್ದ. ಆಗ ಉದ್ಯಮಿಯ ಸೋಗಿನಲ್ಲಿ ಕರೆ ಮಾಡಿ, ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವಂತೆ ಕೇಳಿದೆವು. ಅದಕ್ಕೆ ಒಪ್ಪಿಕೊಂಡ ಆತ ಮಲ್ಲೇಶ್ವರ ಕಾಫಿ ಶಾ‍ಪ್ ಬಳಿ ಕರೆದಿದ್ದ. ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಮೊದಲು ಆತನನ್ನು ವಶಕ್ಕೆ ಪಡೆದೆವು. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ‘ರಮೇಶ್ ಸ್ವಾಮೀಜಿ ಬಿಟ್ಟರೆ, ಈ ಜಾಲದ ಇತರೆ ಸದಸ್ಯರ ಬಗ್ಗೆ ನನಗೆ ಗೊತ್ತಿಲ್ಲ’ ಎಂದ. ಕೊನೆಗೆ, ಶಾಸ್ತ್ರ ಕೇಳುವವರ ಸೋಗಿನಲ್ಲಿ ತೆರಳಿ ಅವರನ್ನೂ ವಶಕ್ಕೆ ಪಡೆದೆವು.’

‘ಸ್ವಾಮೀಜಿ ಕಡೆಯಿಂದ ಸಂತಾನಕೃಷ್ಣನಿಗೆ ಕರೆ ಮಾಡಿಸಿ, ‘ಮೈಸೂರಿನ ಉದ್ಯಮಿಯೊಬ್ಬರು ಬಂದಿದ್ದಾರೆ. ಹೈದರಾಬಾದ್‌ನಲ್ಲಿ ಮದರ್‌ ಡೇರಿ ಮಾಡ್ತಾರಂತೆ. ₹ 50 ಕೋಟಿ ಸಾಲ ಬೇಕಂತೆ’ ಎಂದು ಹೇಳಿಸಿದೆವು. ಅದಕ್ಕೆ ಆತ, ಉದ್ಯಮಿಯ ಪ್ರೊಫೈಲನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸುವಂತೆ ಕೇಳಿದ. ಹತ್ತಿರದ ಸೈಬರ್ ಕೆಫೆಯಲ್ಲಿ ನಕಲಿ ಪ್ರೊಫೈಲ್ ಸಿದ್ಧಪಡಿಸಿ, ಅದರ ಪ್ರತಿಯನ್ನು ಸ್ವಾಮೀಜಿಯ ಮೊಬೈಲ್‌ನಿಂದಲೇ ಸಂತಾನಕೃಷ್ಣನಿಗೆ ರವಾನಿಸಿದೆವು. ಅದನ್ನು ನೋಡಿ ಸಂಶಯಗೊಂಡ ಆತ, ಸಾಲ ಕೊಡಲು ನಿರಾಕರಿಸಿದ್ದ.’

‘ಆತನ ಮೊಬೈಲ್ ಸಂಖ್ಯೆಯ ಲೊಕೇಷನ್ ಪರಿಶೀಲಿಸಿದಾಗ ಶಿವಗಂಗಾದ ಕಮರಪಟ್ಟಿಯ ಟವರ್‌ನಿಂದ ಸಂಪರ್ಕ ಪಡೆಯುತ್ತಿತ್ತು. ಕೂಡಲೇ ವಿಜಯ್‌ಕುಮಾರ್ ಹಾಗೂ ಸ್ವಾಮೀಜಿಯನ್ನು ಕೂರಿಸಿಕೊಂಡು ಆ ಸ್ಥಳಕ್ಕೆ ತೆರಳಿದೆವು. ಪೊಲೀಸ್ ಸ್ಟೇಷನ್ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ನಿಂತಿದ್ದ ಆತನನ್ನು ಸ್ವಾಮೀಜಿ ಗುರುತಿಸಿದರು. ಸಂತಾನಕೃಷ್ಣನ್ನು ಸುತ್ತುವರಿಯುತ್ತಿದ್ದಂತೆಯೇ, ‘ಅಪಹರಣಕಾರರು ಬಂದಿದ್ದಾರೆ’ ಎಂದು ಕೂಗಲಾರಂಭಿಸಿದ. ಚೀರಾಟ ಕೇಳಿ ಜನ ಜಮಾಯಿಸಿ ಗಲಾಟೆ ಪ್ರಾರಂಭಿಸಿದರು.’

‘ಆರೋಪಿಯನ್ನು ಆತನ ಕಾರಿನಲ್ಲೇ ಕೂರಿಸಿಕೊಂಡು ತಕ್ಷಣ ಅಲ್ಲಿಂದ ಹೊರಟೆವು. ನಮ್ಮದೊಂದು ಕಾರು ಅಲ್ಲೇ ಉಳಿಯಿತು. ಸ್ಥಳೀಯರು ಬೈಕ್ ಹಾಗೂ ಕಾರುಗಳಲ್ಲಿ ಸುಮಾರು 10 ಕಿ.ಮೀ ದೂರು ಬೆನ್ನಟ್ಟಿ ಬಂದರು. ಕೊನೆಗೆ ಎಸ್ಪಿ ಕಚೇರಿಗೆ ತೆರಳಿ ಪ್ರಕರಣದ ಬಗ್ಗೆ ವಿವರಿಸಿದಾಗ, ಅವರು ಜನರನ್ನು ಕಳುಹಿಸಿದರು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT