ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಜಾಪುರ ಮೆಟ್ರೊ: ಮಣ್ಣು ಪರೀಕ್ಷೆ ಯಶಸ್ವಿ

35.40 ಕಿಲೋ ಮೀಟರ್ ಉದ್ದದ ಮಾರ್ಗ: ₹15 ಸಾವಿರ ಕೋಟಿ ಮೊತ್ತದ ಯೋಜನೆ
Last Updated 29 ಮಾರ್ಚ್ 2023, 20:09 IST
ಅಕ್ಷರ ಗಾತ್ರ

ಬೆಂಗಳೂರು: ಬಹುದಿನಗಳ ಕನಸಾಗಿದ್ದ ವೈಟ್‌ಫೀಲ್ಡ್‌ ಮೆಟ್ರೊ ರೈಲು ಮಾರ್ಗ ಕಾರ್ಯರಂಭವಾದ ಬೆನ್ನಲ್ಲೆ, ಇನ್ನುಳಿದ ಐಟಿ ಕಾರಿಡಾರ್‌ಗಳಿಗೆ ಮೆಟ್ರೊ ಸಂಪರ್ಕ ಕಲ್ಪಿಸಲು ಬಿಎಂಆರ್‌ಸಿಎಲ್ ತಯಾರಿ ನಡೆಸುತ್ತಿದೆ. ಐ.ಟಿ ಕಾರಿಡಾರ್‌ ಗಳಲ್ಲಿ ಒಂದಾದ ಸರ್ಜಾಪುರ–ಹೆಬ್ಬಾಳ ಮಾರ್ಗದ ಮಣ್ಣು ಪರೀಕ್ಷೆ ಪೂರ್ಣಗೊಂಡಿದೆ.

ಸರ್ಜಾಪುರ–ಹೆಬ್ಬಾಳ(3ಎ) ನಡುವಿನ 35.40 ಕಿಲೋ ಮೀಟರ್ ಉದ್ದದ ಮಾರ್ಗಕ್ಕೆ ಡಿಪಿಆರ್‌ (ಸಮಗ್ರ ಯೋಜನಾ ವರದಿ) ಸಿದ್ಧವಾಗುತ್ತಿದೆ. ಅಂದಾಜು ₹15 ಸಾವಿರ ಕೋಟಿ ಮೊತ್ತದ ಈ ಯೋಜನೆಯನ್ನು 2022–23ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು.

ಸರ್ಜಾಪುರ ರಸ್ತೆ ಎಂದ ಕೂಡಲೇ ಅಲ್ಲಿನ ರಸ್ತೆಗಳಲ್ಲಿನ ವಾಹನ ದಟ್ಟಣೆಯೇ ಕಣ್ಣೆದುರಿಗೆ ಬರುತ್ತದೆ. ಬೆಳ್ಳಂದೂರು, ಸರ್ಜಾಪುರ ಸುತ್ತಮುತ್ತ ಐ.ಟಿ ಕಂಪನಿಗಳ ಕಟ್ಟಡಗಳು ತಲೆ ಎತ್ತಿದ ಬಳಿಕ ದಟ್ಟಣೆ ಹೆಚ್ಚಾಗಿದೆ. ಐ.ಟಿ ಕಾರಿಡಾರ್‌ನ ಸಂಚಾರ ದಟ್ಟಣೆಯನ್ನು ಈ ಮೆಟ್ರೊ ರೈಲು ಮಾರ್ಗ ಕಡಿಮೆ ಮಾಡಲಿದೆ ಎಂಬುದು ಬಿಎಂಆರ್‌ಸಿಎಲ್ ಅಧಿಕಾರಿಗಳ ಅಂದಾಜು.

ಸರ್ಜಾಪುರ– ಹೆಬ್ಬಾಳ ಮೆಟ್ರೊ ಮಾರ್ಗವು ಅಗರ, ಕೋರಮಂಗಲ, ಡೇರಿ ವೃತ್ತದ ಮೂಲಕ ಹಾದುಹೋಗಲಿದೆ. ಮೆಟ್ರೊ ಜಾಲಕ್ಕೆ ಮಾಸ್ಟರ್‌ಪ್ಲ್ಯಾನ್‌ ರೂಪಿಸುವಾಗಲೇ ಈ ಮಾರ್ಗದ ಪ್ರಸ್ತಾವ ಇತ್ತು. ಕಾರಣಾಂತರಗಳಿಂದ ಅದರ ಅನುಷ್ಠಾನ
ಸಾಧ್ಯವಾಗಿರಲಿಲ್ಲ. ನಗರದ ಕೇಂದ್ರ ವಾಣಿಜ್ಯ ಪ್ರದೇಶಗಳಲ್ಲಿನ ಮೆಟ್ರೊ ಜಾಲವನ್ನು ಈ ಮಾರ್ಗ ಮತ್ತಷ್ಟು ಬಲಪಡಿಸಲಿದೆ.

ಡಿಪಿಆರ್‌ ಸಿದ್ಧಪಡಿಸುವ ಕೆಲಸವನ್ನು ಮುಂಬೈ ಮೂಲದ ಕಂಪನಿಗೆ ವಹಿಸಲಾಗಿದ್ದು, ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಡಿಪಿಆರ್‌ ಸಿದ್ಧವಾಗಲು ಇನ್ನು ಎರಡು ತಿಂಗಳು ಬೇಕಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.

ಇದರ ನಡುವೆ ಮಣ್ಣು ಪರೀಕ್ಷೆ ಕಾರ್ಯವನ್ನು ಬಿಎಂಆರ್‌ಸಿಎಲ್ ಪೂರ್ಣಗೊಳಿಸಿದೆ. ಹೆಬ್ಬಾಳದಿಂದ ಕೋರಮಂಗಲ ತನಕ ಸುರಂಗ ಮಾರ್ಗ ಹಾಗೂ ಅಲ್ಲಿಂದ ಸರ್ಜಾಪುರದವರೆಗೆ ಎತ್ತರಿಸಿದ ಮಾರ್ಗ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

ಸರ್ಜಾಪುರದಿಂದ ಹೆಬ್ಬಾಳ ತನಕ 70 ಕಡೆ ಮಣ್ಣು ಪರೀಕ್ಷೆ ನಡೆಸಲಾಗಿದ್ದು, ಮೆಟ್ರೊ ರೈಲು ಕಾಮಗಾರಿ ಆರಂಭಿಸಲು ಎಲ್ಲಿಯೂ ತೊಡಕು ಕಾಣಿಸಿಲ್ಲ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಎರಡು ತಿಂಗಳಲ್ಲಿ ಡಿಪಿಆರ್‌ ಸಿದ್ಧವಾದರೆ ಅದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಪ್ಪಿಗೆಗೆ ಕಳುಹಿಸಲಾಗುತ್ತದೆ. ಒಪ್ಪಿಗೆ ದೊರೆತ ನಂತರ ಕಾಮಗಾರಿ ಆರಂಭವಾಗಲಿದೆ ಎಂದು ಅವರು ಹೇಳಿದರು.

ಮುಂದಿನ ಹೊಸ ಮಾರ್ಗ ಎಲೆಕ್ಟ್ರಾನಿಕ್ ಸಿಟಿ

ವೈಟ್‌ಫೀಲ್ಡ್ ಮೆಟ್ರೊ ಮಾರ್ಗ ಉದ್ಘಾಟನೆಯಾದ ನಂತರ ಬಿಎಂಆರ್‌ಸಿಎಲ್ ಅಧಿಕಾರಿಗಳ ಗಮನವೀಗ ಮತ್ತೊಂದು ಐ.ಟಿ ಕಾರಿಡಾರ್‌ ಎಲೆಕ್ಟ್ರಾನಿಕ್ ಸಿಟಿ ಮಾರ್ಗದ ಕಡೆಗೆ ತಿರುಗಿದೆ.

‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಆರ್‌.ವಿ.ರಸ್ತೆ– ಬೊಮ್ಮಸಂದ್ರ ಮಾರ್ಗದ (ರೀಚ್‌–5) ಸಿವಿಲ್ ಕಾಮಗಾರಿ ಮೂರು ಪ್ಯಾಕೇಜ್‌ಗಳಲ್ಲಿ ನಡೆಯುತ್ತಿದ್ದು, ಎಲ್ಲಾ ಪ್ಯಾಕೇಜ್‌ ಕಾಮಗಾರಿಗಳೂ ಅಂತಿಮ ಹಂತಕ್ಕೆ ತಲುಪಿವೆ. ಜುಲೈ ಅಥವಾ ಆಗಸ್ಟ್‌ನಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ.

ಮೊದಲ ಎರಡು ಪ್ಯಾಕೇಜ್‌ಗಳಲ್ಲಿ ಪಿಲ್ಲರ್‌ ಮತ್ತು ವಯಡಕ್ಟ್‌ ಅಳವಡಿಕೆ ಕಾಮಗಾರಿಯಾದರೆ, ಮೂರನೇ ಪ್ಯಾಕೇಜ್‌ನಲ್ಲಿ ಅವುಗಳ ಜತೆಗೆ ಮೆಟ್ರೊ ರೈಲುಮಾರ್ಗದ ಕೆಳಗೆ ಕಾರು ಮತ್ತು ಬಸ್‌ಗಳ ಸಂಚಾರಕ್ಕೂ ಮಾರ್ಗಗಳನ್ನು(ಡಬಲ್ ಡೆಕ್ಕರ್) ನಿರ್ಮಿಸಲಾಗುತ್ತಿದೆ.
ಈ ಕಾಮಗಾರಿಯೂ ಅಂತಿಮಗೊಂಡಿದೆ.

‘ವೈಟ್‌ಫೀಲ್ಡ್ ಮಾರ್ಗದಲ್ಲಿ ರೈಲು ಸಂಚಾರಆರಂಭ ಆಗಿರುವುದರಿಂದ ಈಗ ಎಲೆಕ್ಟ್ರಾನಿಕ್ ಸಿಟಿ ಮಾರ್ಗದ ಕಡೆಗೆ ಗಮನ ಹರಿಸಿದ್ದೇವೆ, ನಿಗದಿತ ಅವಧಿಯಲ್ಲೇ ರೈಲುಗಳ ಸಂಚಾರ ಆರಂಭವಾಗಲಿದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು
ಹೇಳುತ್ತಾರೆ.

ಮುಂದಿನ ಹೊಸ ಮಾರ್ಗ ಎಲೆಕ್ಟ್ರಾನಿಕ್ ಸಿಟಿ

ವೈಟ್‌ಫೀಲ್ಡ್ ಮೆಟ್ರೊ ಮಾರ್ಗ ಉದ್ಘಾಟನೆಯಾದ ನಂತರ ಬಿಎಂಆರ್‌ಸಿಎಲ್ ಅಧಿಕಾರಿಗಳ ಗಮನವೀಗ ಮತ್ತೊಂದು ಐ.ಟಿ ಕಾರಿಡಾರ್‌ ಎಲೆಕ್ಟ್ರಾನಿಕ್ ಸಿಟಿ ಮಾರ್ಗದ ಕಡೆಗೆ ತಿರುಗಿದೆ.

‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಆರ್‌.ವಿ.ರಸ್ತೆ– ಬೊಮ್ಮಸಂದ್ರ ಮಾರ್ಗದ (ರೀಚ್‌–5) ಸಿವಿಲ್ ಕಾಮಗಾರಿ ಮೂರು ಪ್ಯಾಕೇಜ್‌ಗಳಲ್ಲಿ ನಡೆಯುತ್ತಿದ್ದು, ಎಲ್ಲಾ ಪ್ಯಾಕೇಜ್‌ ಕಾಮಗಾರಿಗಳೂ ಅಂತಿಮ ಹಂತಕ್ಕೆ ತಲುಪಿವೆ. ಜುಲೈ ಅಥವಾ ಆಗಸ್ಟ್‌ನಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ.

ಮೊದಲ ಎರಡು ಪ್ಯಾಕೇಜ್‌ಗಳಲ್ಲಿ ಪಿಲ್ಲರ್‌ ಮತ್ತು ವಯಡಕ್ಟ್‌ ಅಳವಡಿಕೆ ಕಾಮಗಾರಿಯಾದರೆ, ಮೂರನೇ ಪ್ಯಾಕೇಜ್‌ನಲ್ಲಿ ಅವುಗಳ ಜತೆಗೆ ಮೆಟ್ರೊ ರೈಲು ಮಾರ್ಗದ ಕೆಳಗೆ ಕಾರು ಮತ್ತು ಬಸ್‌ಗಳ ಸಂಚಾರಕ್ಕೂ ಮಾರ್ಗಗಳನ್ನು(ಡಬಲ್ ಡೆಕ್ಕರ್) ನಿರ್ಮಿಸಲಾಗುತ್ತಿದೆ.
ಈ ಕಾಮಗಾರಿಯೂ ಅಂತಿಮಗೊಂಡಿದೆ.

‘ವೈಟ್‌ಫೀಲ್ಡ್ ಮಾರ್ಗದಲ್ಲಿ ರೈಲು ಸಂಚಾರ ಆರಂಭ ಆಗಿರುವುದರಿಂದ ಈಗ ಎಲೆಕ್ಟ್ರಾನಿಕ್ ಸಿಟಿ ಮಾರ್ಗದ ಕಡೆಗೆ ಗಮನ ಹರಿಸಿದ್ದೇವೆ, ನಿಗದಿತ ಅವಧಿಯಲ್ಲೇ ರೈಲುಗಳ ಸಂಚಾರ ಆರಂಭವಾಗಲಿದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT