ಗುರುವಾರ , ಮಾರ್ಚ್ 4, 2021
24 °C
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರೌಢಶಾಲೆಯ ಎಲ್ಲ ತರಗತಿ ಪುನರಾರಂಭ

ಆಫ್‌ಲೈನ್‌ಗಿಂತ ಆನ್‌ಲೈನ್‌ ತರಗತಿಗೇ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಸೋಮವಾರದಿಂದ 8ನೇ ತರಗತಿಗೂ ಪೂರ್ಣಾವಧಿ ಪಾಠ ಪ್ರಾರಂಭಿಸಲಾಯಿತು. ರಾಜ್ಯದಲ್ಲೆಡೆ 6ನೇ ಕ್ಲಾಸ್‌ನಿಂದಲೇ ಪೂರ್ಣಾವಧಿ ತರಗತಿ ಆರಂಭಿಸಿದ್ದರೂ, ನಗರದಲ್ಲಿ ಪ್ರೌಢಶಾಲೆಗಳ ಎಲ್ಲ ತರಗತಿ ಮಾತ್ರ ಮರುಪ್ರಾರಂಭಗೊಂಡಿದೆ.

9 ಮತ್ತು 10ನೇ ತರಗತಿಯವರಿಗೆ ಭೌತಿಕ ತರಗತಿ, 8ಕ್ಕೆ ಮಾತ್ರ ಆನ್‌ಲೈನ್ ತರಗತಿ ತೆಗೆದುಕೊಳ್ಳುವುದು ಸಮಸ್ಯೆ ಎನಿಸುತ್ತಿತ್ತು. ಈಗ ಎಲ್ಲ ತರಗತಿಗಳು ಪ್ರಾರಂಭವಾಗುವುದರಿಂದ ಭೌತಿಕ ತರಗತಿಯ ಕಡೆಗೆ ಹೆಚ್ಚು ಗಮನ ನೀಡಿ ಪಾಠ ಮಾಡಬಹುದಾಗಿದೆ ಎಂದು ಬಹುತೇಕ ಶಿಕ್ಷಕರು ಹೇಳಿದರು.

ಆನ್‌ಲೈನ್‌ಗೆ ಒತ್ತು

ನಗರದಲ್ಲಿ ಬಹುತೇಕ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿರಲಿಲ್ಲ. ಈ ವರ್ಷ ಪೂರ್ತಿ ಆನ್‌ಲೈನ್ ವ್ಯವಸ್ಥೆಯಡಿಯಲ್ಲಿಯೇ ತರಗತಿಗಳು ಮುಗಿಯಲಿ ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು. ಮುಖ್ಯವಾಗಿ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಅಧೀನದ ಶಾಲೆಗಳು ಈ ಶೈಕ್ಷಣಿಕ ವರ್ಷ ಪೂರ್ತಿ ಆನ್‌ಲೈನ್‌ ತರಗತಿಯನ್ನೇ ನಡೆಸಲು ತೀರ್ಮಾನಿಸಿವೆ.

‘ಪಠ್ಯಕ್ರಮ ಮುಗಿಸಲು ಸುಮಾರು ಒಂದು ತಿಂಗಳು ಸಮಯವಷ್ಟೇ ಇದೆ. ಈ ಸಂದರ್ಭದಲ್ಲಿ ಮಕ್ಕಳನ್ನು ಶಾಲೆಗೆ ಕರೆಸಿ ಪಾಠ ಮಾಡುವುದು ಕಷ್ಟವಾಗುತ್ತದೆ. ಈಗಾಗಲೇ ಆನ್‌ಲೈನ್‌ ತರಗತಿಗೆ ಬಹುತೇಕ ವಿದ್ಯಾರ್ಥಿಗಳು ಒಗ್ಗಿಕೊಂಡಿರುವುದರಿಂದ ಇದೇ ವ್ಯವಸ್ಥೆಯಡಿಯಲ್ಲಿಯೇ ಬೋಧನೆ ಮುಂದುವರಿಸಲು ನಿರ್ಧರಿಸಿದ್ದೇವೆ’ ಎಂದು ಖಾಸಗಿ ಶಾಲೆಯ ಪ್ರಾಚಾರ್ಯರೊಬ್ಬರು ಹೇಳಿದರು.

‘ಪೋಷಕರಿಂದಲೂ ನಾವು ಅಭಿಪ್ರಾಯ ಸಂಗ್ರಹಿಸಿದ್ದೇವೆ. ಬಹುತೇಕರು ಆನ್‌ಲೈನ್‌ ತರಗತಿ ಮುಂದುವರಿಸುವಂತೆಯೇ ಹೇಳಿದರು. ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಸಂದರ್ಭದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದೇ ಪೋಷಕರು ಹೇಳುತ್ತಿದ್ದಾರೆ’ ಎಂದು ವೈಟ್‌ಫೀಲ್ಡ್‌ನ ಖಾಸಗಿ ಶಾಲೆಯ ಪ್ರಾಚಾರ್ಯರೊಬ್ಬರು ತಿಳಿಸಿದರು.

ಮಾರ್ಗಸೂಚಿ ಪಾಲನೆ

ಸರ್ಕಾರದ ಆದೇಶದಂತೆ ಎಲ್ಲ ಶಾಲೆ, ಕಾಲೇಜುಗಳಲ್ಲಿ ಸ್ವಚ್ಛತೆ, ಸ್ಯಾನಿಟೈಸಿಂಗ್ ಸೇರಿದಂತೆ ಸಮಗ್ರ ಮಾರ್ಗಸೂಚಿಯನ್ನು ಅನುಸರಿಸಿ ಸಿದ್ಧಗೊಳಿಸಿದ್ದವು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು