ಕೆಂಗೇರಿ: ‘ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿಕೊಳ್ಳುವವರು ತುಂಬಾ ಸಹನೆ ಹಾಗೂ ಅವಲೋಕನ ಸಾಮರ್ಥ್ಯ ಹೊಂದಿರಬೇಕು’ ಎಂದು ಇಸ್ರೊ ವಿಶ್ರಾಂತ ವಿಜ್ಞಾನಿ ಹಿರಿಯಣ್ಣ ಅಭಿಪ್ರಾಯಪಟ್ಟರು.
ಇಲ್ಲಿನ ದುಬಾಸಿಪಾಳ್ಯ ಜ್ಞಾನ ಬೋಧಿನಿ ಶಾಲೆಯಲ್ಲಿ ‘ಸೈನ್ಸ್ ಅಂಡ್ ಮ್ಯಾಥ್ಸ್ ಕ್ಲಬ್‘ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಹಾಗೂ ಗಣಿತ ವಿಷಯಗಳು ದೈನಂದಿನ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವೈಜ್ಞಾನಿಕ ದೃಷ್ಟಿಕೋನಗಳು ನಮ್ಮ ಬದುಕಿನ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿವೆ ಎಂದರು.
ಹತ್ತಾರು ದೃಷ್ಟಿಕೋನದಲ್ಲಿ ವೈಜ್ಞಾನಿಕ ಫಲಿತಾಂಶಗಳನ್ನು ಮರು ವಿಮರ್ಶೆಗೆ ಒಳ ಪಡಿಸಬೇಕು. ಆಗ ಮಾತ್ರ ನಿಖರ ಮಾಹಿತಿ ದೊರಕಲಿದ್ದು, ಯುವ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಅತ್ಯಂತ ಜಾಗರೂಕರಾಗಿರಬೇಕು ಎಂದು ತಿಳಿಸಿದರು.
ಇದೇ ವೇಳೆ ದ್ರವ್ಯರಾಶಿ, ಗಗನಯಾನ, ಭೂಮಿಯ ಮೇಲೆ ಚಂದ್ರ ಗ್ರಹದ ಪ್ರಭಾವ ಹಾಗೂ ಮಹತ್ವ, ಬಲದ ವರ್ಗಾವಣೆ, ಗುರುತ್ವಾಕರ್ಷಣೆ ಮುಂತಾದ ವಿಷಯಗಳ ಕುರಿತು ಸುಲಭ ಪ್ರಯೋಗಗಳ ಮೂಲಕ ಮಾಹಿತಿ ನೀಡಿದರು. ನೀರು ಮತ್ತು ಗಾಳಿಯ ಒತ್ತಡ ಮೂಲಕ ರಾಕೆಟ್ ಹಾರಿಸಿ ಮಕ್ಕಳನ್ನು ಚಕಿತಗೊಳಿಸಿದರು.
ಮುಖ್ಯ ಶಿಕ್ಷಕಿ ಸಿಸ್ಟರ್ ಜೇನ್ ಕ್ರಾಸ್ತ, ಸಂಚಾಲಕಿ ಸಿಸ್ಟರ್ ಇಮ್ಯಾಕ್ಯುಲೇಟ್, ಶಿಕ್ಷಕಿ ಶರ್ಮಿಳಾ, ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.