ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವದ ಉಳಿವಿಗೆ ಪ್ರಜ್ಞಾವಂತರೇ ಆಸರೆ: ಎಸ್‌.ಜಿ.ಸಿದ್ದರಾಮಯ್ಯ

ದ್ವಾರನಕುಂಟೆ ಪಾತಣ್ಣ ಅವರ ‘ಕತ್ತಲ ದಾರಿ ದೂರ’ ಕಾದಂಬರಿ ಬಿಡುಗಡೆ
Last Updated 12 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಜಾಪ್ರಭುತ್ವದ ಆಶಯಗಳ ಉಳಿವಿಗಾಗಿ ಸಮಾಜಮುಖಿ ಚಿಂತನೆಯ ಪ್ರಜ್ಞಾವಂತರ ಅಗತ್ಯವಿದೆ ಎಂದು ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ ಪ್ರತಿಪಾದಿಸಿದರು.

ಕರ್ನಾಟಕ ವಿಕಾಸ ರಂಗ ಶನಿವಾರ ಹಮ್ಮಿಕೊಂಡಿದ್ದದ್ವಾರನಕುಂಟೆ ಪಾತಣ್ಣ ಅವರ ‘ಕತ್ತಲ ದಾರಿ ದೂರ’ ಕಾದಂಬರಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪ್ರಸ್ತುತ ಸನ್ನಿವೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕತ್ತಲಲ್ಲಿದೆ. ಪ್ರಭುತ್ವದ ವಿರುದ್ಧ ಧ್ವನಿ ಎತ್ತುವವರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಸತ್ಯವನ್ನು ನೇರವಾಗಿ ಹೇಳುವ ಧೈರ್ಯವನ್ನು ಲೇಖಕರು ಪ್ರದರ್ಶಿಸಬೇಕಿದೆ. ಅಂತಹ ಕೆಲಸವನ್ನು ಪಾತಣ್ಣ ನಿಷ್ಠರ ಬರಹದ ಮೂಲಕ ಮಾಡಿದ್ದಾರೆ. ಎಂತಹ ಒತ್ತಡಗಳಿದ್ದರೂ ಅನ್ಯಾಯದ ವಿರುದ್ಧ ಪ್ರತಿಭಟನಾ ಧ್ವನಿ ಗಟ್ಟಿಗೊಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಕೆಲ ಸಿದ್ಧಾಂತವಾದಿಗಳು ಶಾಂತಿಯ ಸಮಯದಲ್ಲೂ ಕ್ರಾಂತಿಯ ಜಪ ಮಾಡುತ್ತಿದ್ದಾರೆ. ಇಂತಹ ಸುದ್ದಿಶೂರರು ಪ್ರಶಸ್ತಿ, ಸನ್ಮಾನ, ಸ್ಥಾನಮಾನಗಳಿಗಾಗಿ ಬರಹ ಮೀಸಲಿಟ್ಟಿದ್ದಾರೆ. ಕಣ್ಣೆದುರಿಗೆ ಅನ್ಯಾಯವಾಗುತ್ತಿದ್ದರೂ ಕಣ್ಣು ತೆರೆಯುವುದಿಲ್ಲ. ತುಟಿಬಿಚ್ಚುವುದಿಲ್ಲ. ಮತ್ತೊಂದು ವರ್ಗ ಎಲ್ಲ ಕಾಲಘಟ್ಟದಲ್ಲೂ ಶೋಷಿತರ ಧ್ವನಿಯಾಗಿದೆ. ಅಗತ್ಯಬಿದ್ದರೆ ಬೀದಿಗಿಳಿದು ಪ್ರತಿಭಟನೆ ದಾಖಲಿಸಿದೆ ಎಂದು ವಿಶ್ಲೇಷಿಸಿದರು.

ದೇಶದಲ್ಲಿ ಇಂದು ಅಘೋಷಿತ ತುರ್ತುಪರಿಸ್ಥಿತಿ ಇದೆ. ವ್ಯವಸ್ಥೆಯ ವಿರುದ್ಧ ವೇದಿಕೆಯ ಮೇಲೆ ನಿಂತು ಮಾಡುವ ಭಾಷಣ, ಬರೆಯುವ ಬರಹವನ್ನೂ ಪರೋಕ್ಷವಾಗಿ ನಿಯಂತ್ರಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಮಾತುಕೇಳದವರ ಜೀವಕ್ಕೂ ಕುತ್ತು ತಂದಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಚಿಂತಕಬಂಜಗೆರೆ ಜಯಪ್ರಕಾಶ ಮಾತನಾಡಿ, ಮಾತೃಭಾಷೆಯಬರವಣಿಗೆ ಅತ್ಯಂತ ಪರಿಣಾಮಕಾರಿಯಾಗಿ ಜನರನ್ನು ತಲುಪುತ್ತದೆ. ಆಯ್ಕೆ ಮಾಡಿಕೊಳ್ಳುವ ವಿಷಯ ವಸ್ತು ಗಟ್ಟಿಯಾಗಿರಬೇಕು. ವಿಚಾರಗಳನ್ನು ನೇರವಾಗಿ ಹೇಳಬೇಕು. ಸಂಪ್ರದಾಯದ ಲೋಪಗಳನ್ನೂ ಖಂಡಿಸುವ ಗುಣವಿರಬೇಕು. ಓಲೈಕೆಯ ಮನೋಭಾವ ಇರಬಾರದು ಎಂದು ಕಿವಿಮಾತು ಹೇಳಿದರು.

ರ್ನಾಟಕ ವಿಕಾಸ ರಂಗ ಅಧ್ಯಕ್ಷ ವ.ಚ. ಚನ್ನೇಗೌಡ ಪ್ರಸ್ತಾವಿಕ ಮಾತನಾಡಿದರು.ಸಾಹಿತಿ ಡಾ.ವಿಜಯಾ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಪಾರ್ವತೀಶ ಬಿಳಿದಾಳೆ, ಲೇಖಕ ದ್ವಾರನಕುಂಟೆ ಪಾತಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT