ಭಾನುವಾರ, ಆಗಸ್ಟ್ 14, 2022
25 °C

‘ಸಿಂಗನಾಯಕನಹಳ್ಳಿ ಕೆರೆಯ ಜಂಟಿ ಸರ್ವೆ ನಡೆಸಲಿ’–ಎಎಪಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಗನಾಯಕನಹಳ್ಳಿ ಕೆರೆ ಅಂಗಳದಲ್ಲಿ ಬೆಳೆದಿರುವ ಮರಗಳು

ಬೆಂಗಳೂರು: ‘ಯಲಹಂಕದ ಸಿಂಗನಾಯಕನಹಳ್ಳಿ ಕೆರೆಯು 265 ಎಕರೆ ವಿಸ್ತೀರ್ಣ ಹೊಂದಿದ್ದು, ಈ ಪೈಕಿ ಕೆಲ ಎಕರೆಗಳಷ್ಟು ಜಾಗವನ್ನು ಪ್ರಭಾವಿಗಳು ಹಾಗೂ ರಿಯಲ್ ಎಸ್ಟೇಟ್‌ ಉದ್ಯಮಿಗಳು ಒತ್ತುವರಿ ಮಾಡಿರುವ ಅನುಮಾನವಿದೆ. ಹೀಗಾಗಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೆ ನಡೆಸಬೇಕು’ ಎಂದು ಆಮ್‌ ಆದ್ಮಿ ಪಕ್ಷ ಆಗ್ರಹಿಸಿದೆ.

ಪಕ್ಷದ ನಿಯೋಗವು ಶುಕ್ರವಾರ ಕೆರೆಯ ಜಾಗಕ್ಕೆ ಭೇಟಿ ನೀಡಿ ‍ಪರಿಶೀಲನೆ ನಡೆಸಿತು. 

‘ಇದುವರೆಗೂ ಈ ಕೆರೆಯ ಪುನರುಜ್ಜೀವನ ಕಾರ್ಯ ನಡೆಯದಿರುವುದು ಬೇಸರದ ಸಂಗತಿ. ಕೆರೆಯಲ್ಲಿ 7,500 ಕ್ಕೂ ಅಧಿಕ ಜಾಲಿ ಮರಗಳು ಬೆಳೆದಿವೆ. ಇವು ಸುಮಾರು 50 ವರ್ಷಗಳಷ್ಟು ಹಳೆಯದಾಗಿವೆ. ಕೋಟ್ಯಂತರ ರೂಪಾಯಿ ಮೌಲ್ಯದ ಜಾಲಿ, ಹೊಂಗೆ ಹಾಗೂ ಬೇವಿನ ಮರಗಳು ಟಿಂಬರ್‌ ಮಾಫಿಯಾಕ್ಕೆ ಬಲಿಯಾಗುತ್ತಿವೆ. ಕೆರೆ ಅಭಿವೃದ್ಧಿ ಹೆಸರಿನಲ್ಲಿ ಇವುಗಳಿಗೆ ಕೊಡಲಿ ಏಟು ಬೀಳುತ್ತಿದೆ. ಇದು ಕೂಡಲೇ ನಿಲ್ಲಬೇಕು’ ಎಂದು ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ ಒತ್ತಾಯಿಸಿದರು.  

‘ಕೆರೆಯು ಪ್ರಾಣಿ, ಪಕ್ಷಿಗಳ ಆವಾಸ ಸ್ಥಾನವಾಗಿದೆ. ಹೀಗಾಗಿ ಮರಗಳನ್ನು ಕಡಿಯದೆಯೇ ವೈಜ್ಞಾನಿಕ ರೀತಿಯಲ್ಲಿ ಹೂಳೆತ್ತುವ ಕೆಲಸ ಆಗಲಿ. ಭಾರತೀಯ ವಿಜ್ಞಾನ ಸಂಸ್ಥೆಯ ಸಸ್ಯಶಾಸ್ತ್ರ ವಿಭಾಗದ ವಿಜ್ಞಾನಿಗಳನ್ನೊಳಗೊಂಡ ಸಮಿತಿ ನೀಡಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಮೂಲಕ ಪರಿಸರವನ್ನು ಸಂರಕ್ಷಿಸಲಿ. ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಟಿಂಬರ್‌ ಮಾಫಿಯಾಗೆ ಅನುಕೂಲವಾಗುವಂತಹ ತೀರ್ಮಾನ ಕೈಗೊಳ್ಳುವುದನ್ನು ನಿಲ್ಲಿಸಲಿ’ ಎಂದರು.   

ಇದನ್ನೂ ಓದಿ: ಸಿಂಗನಾಯಕನಹಳ್ಳಿ ಕೆರೆ: 6,316 ಮರ ಕಡಿಯುವುದಕ್ಕೆ ವಿರೋಧ

ಪಕ್ಷದ ಮುಖಂಡರಾದ ಫಣಿರಾಜ್‌, ಜಗದೀಶ್ ವಿ. ಸದಂ, ರಾಜಶೇಖರ್ ದೊಡ್ಡಣ್ಣ, ಜಯಕುಮಾರ್, ನಿತಿನ್ ರೆಡ್ಡಿ ಸಂತೋಷ್, ಪ್ರಕಾಶ್, ಉಷಾ ಮೋಹನ್, ಸುಹಾಸಿನಿ ಹಾಗೂ ಪುರುಷೋತ್ತಮ್ ಇದ್ದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು