ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದಂಕಿ ಲಾಟರಿ ದಂಧೆ: ಪೊಲೀಸರೇ ಆರೋಪಿಗಳು!

ಚಾರ್ಜ್‌ಶೀಟ್‌ ಸಲ್ಲಿಸಿದ ಸಿಬಿಐ
Last Updated 6 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂದಂಕಿ ಲಾಟರಿ ದಂಧೆ’ ಪ್ರಕರಣದಲ್ಲಿ ಸುಳ್ಳು ದೋಷಾರೋಪ ಪಟ್ಟಿ ಸಿದ್ಧಪಡಿಸಿದ್ದ ಆರೋಪದಡಿ ಅಬಕಾರಿ ಜಾರಿ ಹಾಗೂ ಲಾಟರಿ ನಿಷೇಧ ದಳದ ಅಂದಿನ ಐಜಿಪಿ ಬಿ.ಎ.ಪದ್ಮನಯನ (ನಿವೃತ್ತ) ಸೇರಿ 10 ಪೊಲೀಸರ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಸಿದೆ.

ದಂಧೆಯ ಪ್ರಮುಖ ಆರೋಪಿ ಎನ್ನಲಾಗಿದ್ದ ಎನ್‌. ಪಾರಿರಾಜನ್ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು, ‘ಲಾಟರಿ ನಿಷೇಧ ದಳದ ಪೊಲೀಸರೇ, ರಾಜನ್ ಮನೆ ಮೇಲೆ ಪೂರ್ವನಿಯೋಜಿತ ಸಂಚಿನ ಭಾಗವಾಗಿ2015ರ ಮೇ 1ರಂದು ದಾಳಿ ನಡೆಸಿದ್ದರು. ಆ ಸಂಬಂಧ ಖೊಟ್ಟಿ ದಾಖಲೆ ಹಾಗೂ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಪ್ರಕರಣ ದಾಖಲಿಸಿದ್ದರು. ಅದೇ ಪುರಾವೆಗಳನ್ನು ಬಳಸಿ
ಕೊಂಡು ಸ್ಥಳೀಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದು ಅಭಿಪ್ರಾಯಪಟ್ಟು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ
ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

‘ಪದ್ಮನಯನ ನಿರ್ದೇಶನದಂತೆ ಇನ್‌ಸ್ಪೆಕ್ಟರ್ ಕನಕಲಕ್ಷ್ಮಿ ತನಿಖೆ ಆರಂಭಿಸಿದ್ದರು. ನಂತರ, ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. 2015ರ ಜೂನ್ 29ರಂದು ರಾಜನ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. 2016ರಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ದೋಷಾರೋಪ ಪಟ್ಟಿಯಲ್ಲಿರುವುದು ಸುಳ್ಳು ಎಂಬುದು ತನಿಖೆಯಿಂದ ಗೊತ್ತಾಗಿದೆ. ಪಾರಿರಾಜನ್ ಆರೋಪಮುಕ್ತಕ್ಕೆ ಅರ್ಹರಾಗಿದ್ದಾರೆ’ ಎಂದು ಸಿಬಿಐ ಹೇಳಿದೆ.

ಆರೋಪ ಎದುರಿಸುತ್ತಿರುವವರು: ಪದ್ಮನಯನ (ನಿವೃತ್ತ), ಇನ್‌ಸ್ಪೆಕ್ಟರ್‌ಗಳಾಗಿದ್ದ ಬಿ.ಎಂ. ಕನಕಲಕ್ಷ್ಮಿ (ಸದ್ಯ ಬಾಣಸವಾಡಿ ಸಂಚಾರ ಠಾಣೆ), ಜಿ.ಟಿ.ಸ್ವಾಮಿ (ಸದ್ಯ ಚನ್ನಪಟ್ಟಣ ಪೊಲೀಸ್ ತರಬೇತಿ ಶಾಲೆ ಇನ್‌ಸ್ಪೆಕ್ಟರ್), ಸಿ.ಆರ್. ರಂಗನಾಥ್ (ನಿವೃತ್ತ), ಎಂ.ಜೆ.ಲೋಕೇಶ್ (ಸದ್ಯ ಕೆ.ಆರ್.ಪುರ ಸಂಚಾರ ಠಾಣೆ), ಬಿ.ಎನ್‌.ಶ್ರೀಕಂಠ (ಕೆಜಿಎಫ್‌ನ ರಾಬರ್ಟ್‌ಸನ್‌ ಪೇಟೆ), ಪಿಎಸ್‌ಐಗಳಾದ ಆರ್‌.ರವಿಪ್ರಕಾಶ್ (ಈಗ ಮೈಕೋ ಲೇಔಟ್ ಠಾಣೆ ಇನ್‌ಸ್ಪೆಕ್ಟರ್), ಬಿ.ಎಂ. ತಿಪ್ಪೇಸ್ವಾಮಿ (ಸದ್ಯ ಕಾಮಾಕ್ಷಿಪಾಳ್ಯ ಠಾಣೆ ಪಿಎಸ್‌ಐ), ಹೆಡ್‌ ಕಾನ್‌ಸ್ಟೆಬಲ್ ಬಿ.ಎಸ್.ವೇಣುಗೋಪಾಲ್ (ಸದ್ಯ ಕೆಜಿಎಫ್‌ ಸೈಬರ್ ಕ್ರೈಂ ಠಾಣೆ ಹೆಡ್‌ ಕಾನ್‌ಸ್ಟೆಬಲ್) ಹಾಗೂ ಕಾನ್‌ಸ್ಟೆಬಲ್ ಡಿ.ರವಿಕುಮಾರ್ (ಸದ್ಯ ಕಲಬುರ್ಗಿ ಪೊಲೀಸ್ ತರಬೇತಿ ಶಾಲೆ ಪಿಎಸ್‌ಐ).

ಅಲೋಕ್‌ಕುಮಾರ್‌ ನಿರಾಳ

ಈ ಪ‍್ರಕರಣದಲ್ಲಿ ಐಪಿಎಸ್ ಅಧಿಕಾರಿ ಅಲೋಕ್‌ಕುಮಾರ್‌ಗೆ ಪರೋಕ್ಷವಾಗಿ ಕ್ಲೀನ್ ಚಿಟ್‌ ನೀಡಲಾಗಿದೆ.

ಪಾರಿರಾಜನ್‌ಗೆ ಸಹಾಯ ಮಾಡಿದ ಆರೋಪದ ಮೇಲೆ ಅಲೋಕ್‌ ಕುಮಾರ್ ಅವರನ್ನು ಅಮಾನತು ಮಾಡಲಾಗಿತ್ತು. ಆರೋಪ ಪಟ್ಟಿಯಲ್ಲಿಅವರ ಹೆಸರಿಲ್ಲ. ಹೀಗಾಗಿ ಅವರಿಗೆ ಕ್ಲೀನ್‌ಚಿಟ್‌ ಸಿಕ್ಕಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT