ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶೋತ್ಸವ ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ

ಪಾಲಿಕೆ ವಿಭಾಗ ಕಚೇರಿಗಳಲ್ಲಿ ನಾಲ್ಕು ಇಲಾಖೆಗಳ ಅಧಿಕಾರಿಗಳು ಲಭ್ಯ
Last Updated 27 ಆಗಸ್ಟ್ 2019, 20:07 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ಪಡೆಯಲು ಈ ವರ್ಷವೂ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಬಿಎಂಪಿಯ 64 ಉಪವಿಭಾಗ ಕಚೇರಿಗಳಲ್ಲೇ ಈ ಕುರಿತು ಅನುಮತಿ ಪಡೆಯಬಹುದು.

ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಈ ವಿಚಾರ ತಿಳಿಸಿದ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಬಿಬಿಎಂಪಿ ಜೊತೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಬೆಸ್ಕಾಂ ಅನುಮತಿಯೂ ಅಗತ್ಯ. ಈ ಮೂರು ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಈ ಬಾರಿಯೂ ಒಂದೇ ಕಡೆ ಅನುಮತಿ ನೀಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದರು.

‘ಪೊಲೀಸ್‌ ಇಲಾಖೆ, ಬೆಸ್ಕಾಂ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗಳ ಅಧಿಕಾರಿಗಳು ಬುಧವಾರದಿಂದ ಪಾಲಿಕೆಯ ಪ್ರತಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕಚೇರಿಗಳಲ್ಲೇ ಲಭ್ಯ ಇರುತ್ತಾರೆ. ಸಾರ್ವಜನಿಕ ಗಣೇಶೋತ್ಸವ ಆಚರಿಸುವವರು ಅಲ್ಲೇ ಅನುಮತಿ ಪಡೆಯಬಹುದು. ಆದರೆ ಅವರು ಪಿಒಪಿಯಿಂದ ತಯಾರಿಸಿದ ಮೂರ್ತಿ ಬಳಸುವಂತಿಲ್ಲ’ ಎಂದರು.

‘ಗಣೇಶ ಮೂರ್ತಿಗಳ ವಿಸರ್ಜನೆಗೆ ಕೆರೆಗಳ ಪಕ್ಕದಲ್ಲಿ ಕಲ್ಯಾಣಿಗಳನ್ನು ನಿರ್ಮಿಸಲಾಗುತ್ತಿದೆ. ಸಂಚಾರಿ ನೀರಿನ ತೊಟ್ಟಿಗಳನ್ನೂ ವ್ಯವಸ್ಥೆ ಮಾಡಲಾಗಿದೆ’ ಎಂದು ಆಯುಕ್ತರು ಮಾಹಿತಿ ನೀಡಿದರು.

‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ತಯಾರಿಸಿದ ಮೂರ್ತಿಗಳನ್ನು ತೆರವುಗೊಳಿಸುವಾಗ ಅಧಿಕಾರಿಗಳು ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುವಂತೆ ವರ್ತಿಸುತ್ತಿದ್ದಾರೆ. ಬೇರೆ ಧರ್ಮದವರು ಹಬ್ಬ ಆಚರಿಸುವಾಗ ಪ್ರಾಣಿ ವಧೆಯಿಂದ ಸಾಕಷ್ಟು ಮಾಲಿನ್ಯ ಉಂಟಾದರೂ ಅಧಿಕಾರಿಗಳು ಸುಮ್ಮನಿರುತ್ತಾರೆ’ ಎಂದು ಬಿಜೆಪಿಯ ಉಮೇಶ ಶೆಟ್ಟಿ ಆರೋಪಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೊಹಮ್ಮದ್‌ ರಿಜ್ವಾನ್‌ ನವಾಬ್‌, ‘ಗಣೇಶನಿಗೆ ಪ್ರಥಮ ಪೂಜೆ ಸಲ್ಲಿಸಿಯೇ ಎಲ್ಲರೂ ಕಾರ್ಯಕ್ರಮ ಆರಂಭಿಸುತ್ತಾರೆ. ನಾವೂ ಅದನ್ನು ಗೌರವಿಸುತ್ತೇವೆ. ನೀವು ಈ ರೀತಿ ಮಾತನಾಡಬಾರದು’ ಎಂದರು.

ಇದಕ್ಕೆ ದನಿ ಗೂಡಿಸಿದ ಅಬ್ದುಲ್‌ ವಾಜಿದ್‌, ‘ನಾವೂ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸುತ್ತೇವೆ. ನೀವು ಧರ್ಮಗಳನ್ನು ಎಳೆದು ತರಬೇಡಿ’ ಎಂದರು.

ಪಿಒಪಿ ವಿಗ್ರಹ ತೆರವುಗೊಳಿಸುವಾಗ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಆಯುಕ್ತರು ತಿಳಿಸಿದರು.

ಬಿಬಿಎಂಪಿ ಆಸ್ತಿ ರಕ್ಷಣೆಗೆ ಒತ್ತಾಯ

ಬಿಬಿಎಂಪಿಗೆ ಸೇರಿದ ಆಸ್ತಿಗಳನ್ನು ಸಂರಕ್ಷಿಸುವ ಬಗ್ಗೆ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಈ ವಿಚಾರ ಪ್ರಸ್ತಾಪಿಸಿದ ವಿಧಾನ ಪರಿಷತ್‌ ಸದಸ್ಯ ಪಿ.ಆರ್‌.ರಮೇಶ್‌, ‘ವಿ.ವಿ.ಪುರದ ಬಳಿಯ ಮಾರಮ್ಮನ ದೇವಸ್ಥಾನದ ಬಳಿಯ ಜಾಗವನ್ನು 1917ರಲ್ಲೇ ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ಅದು ಈಗ ಬಿಬಿಎಂಪಿ ಸ್ವತ್ತು. ಅದನ್ನು ದೇವಸ್ಥಾನದ ಹೆಸರಿಗೆ ಮಾಡಿಕೊಡುವ ಪ್ರಯತ್ನ ನಡೆದಿದೆ. ಇದಕ್ಕೆ ಅವಕಾಶ ಕಲ್ಪಿಸಬಾರದು’ ಎಂದರು.

‘ಪಾಲಿಕೆಯ ಅನೇಕ ಆಸ್ತಿಯನ್ನು ಬೇರೆಯವರು ಅನುಭೋಗಿಸುತ್ತಿದ್ದಾರೆ. ಪಾಲಿಕೆಯ ಆಸ್ತಿ ಉಳಿಸಿಕೊಳ್ಳಲು ಕಾನೂನು ಕೋಶ, ಕಂದಾಯ, ಎಂಜಿನಿಯರಿಂಗ್‌ ಹಾಗೂ ಆಸ್ತಿ ವಿಭಾಗಗಳು ಸಂಯೋಜಿತ ಪ್ರಯತ್ನ ನಡೆಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ದನಿಗೂಡಿಸಿದ ಪದ್ಮನಾಭ ರೆಡ್ಡಿ,‘ಕೆಪಿಸಿಸಿ ಕಚೇರಿ ಸಮೀಪದ ಆಸ್ತಿ ಬಿಬಿಎಂಪಿಗೆ ಸೇರಿದ್ದು. ಅದನ್ನು ಸ್ವಾಧೀನಪಡಿಸಲು ಇನ್ನೂ ಸಾಧ್ಯವಾಗಿಲ್ಲ. ಬೌರಿಂಗ್‌ ಕ್ಲಬ್‌ ಕೂಡಾ ಪಾಲಿಕೆ ಜಾಗ. ಕೋರಮಂಗಲದ ಎನ್‌ಡಿಆರ್‌ಐ ಜಾಗವನ್ನೂ ಪಾಲಿಕೆ ಬೋಗ್ಯಕ್ಕೆ ನೀಡಿತ್ತು. ಅವೆಲ್ಲವೂ ಈಗ ಕೈತಪ್ಪುವ ಆತಂಕದಲ್ಲಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಆಯಾ ವಲಯದ ಜಂಟಿ ಆಯುಕ್ತರ ಮಟ್ಟದಲ್ಲಿ ಪ್ರತ್ಯೇಕ ನೋಂದಣಿಯನ್ನು ತೆರೆದು ಪಾಲಿಕೆಯ ಆಸ್ತಿಯನ್ನು ದಾಖಲಿಸುವ ಕೆಲಸ ಆಗಬೇಕು’ ಎಂದು ಒತ್ತಾಯಿಸಿದರು.

‘ಈ ಕುರಿತು ಕ್ರಮ ವಹಿಸುತ್ತೇವೆ. ಈಗಾಗಲೇ ಆಸ್ತಿ ವಿಭಾಗವು ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದೆ’ ಎಂದರು.

ಮಂಜುನಾಥ ಪ್ರಸಾದ್‌ ಮುಂದುವರಿಸಲು ನಿರ್ಣಯ

ಬಿಬಿಎಂಪಿಯ ಈಗಿನ ಕೌನ್ಸಿಲ್‌ನ ಅವಧಿ ಪೂರ್ಣಗೊಳ್ಳುವವರೆಗೆ ಎನ್‌.ಮಂಜುನಾಥ ಪ್ರಸಾದ್‌ ಅವರನ್ನು ಆಯುಕ್ತರನ್ನಾಗಿ ಮುಂದುವರಿಸುವಂತೆ ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕಾಂಗ್ರೆಸ್‌ ಸದಸ್ಯ ಎಂ.ಕೆ.ಗುಣಶೇಖರ್‌, ‘ಅನೇಕ ಅಭಿವೃದ್ಧಿ ಕಾರ್ಯಗಳು ಅನುಷ್ಠಾನ ಹಂತದಲ್ಲಿವೆ. ಮುಂದಿನ ವರ್ಷ ಚುನಾವಣೆ ಬರಲಿದೆ. ಹೊಸ ಆಯುಕ್ತರು ಪಾಲಿಕೆಯ ಕಾರ್ಯವೈಖರಿಗೆ ಹೊಂದಿಕೊಳ್ಳುವುದಕ್ಕೆ ಸಮಯ ಬೇಕು.ಇದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತ ಆಗುವ ಸಾಧ್ಯತೆ ಇದೆ. ಇದನ್ನು ತಪ್ಪಿಸಬೇಕಾದರೆ ಮಂಜುನಾಥ ಪ್ರಸಾದ್‌ ಅವರನ್ನೇ ಕನಿಷ್ಠ 6 ತಿಂಗಳವರೆಗೆ ಆಯುಕ್ತರನ್ನಾಗಿ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಸದಸ್ಯರೆಲ್ಲರೂ ಪಕ್ಷ ಭೇದ ಮರೆತು ಮೇಜು ಕುಟ್ಟಿ ಸ್ವಾಗತಿಸಿದರು.

ಮರಗಣತಿ ಮರವಿಜ್ಞಾನ ಸಂಸ್ಥೆಗೆ

‘ನಗರದಲ್ಲಿ ಮರಗಣತಿಗೆ ಟೆಂಡರ್‌ ಆಹ್ವಾನಿಸಿದಾಗ ಅರ್ಜಿ ಸಲ್ಲಿಸಿದ್ದ ಎರಡೂ ಸಂಸ್ಥೆಗಳು ತಾಂತ್ರಿಕ ಅರ್ಹತೆ ಗಳಿಸಿರಲಿಲ್ಲ. ಮರವಿಜ್ಞಾನ ಸಂಸ್ಥೆ ಆಸಕ್ತಿ ತೋರಿಸಿದ್ದು, ಅವರೇ ಈ ಕುರಿತು ಡಿಪಿಆರ್‌ ಸಿದ್ಧಪಡಿಸಲಿದ್ದಾರೆ’ ಎಂದು ಪಾಲಿಕೆ ಉಪ‌ಅರಣ್ಯ ಸಂರಕ್ಷಣಾಧಿಕಾರಿ ಚೋಳರಾಜಪ್ಪ ತಿಳಿಸಿದರು.

‘ನಗರದಲ್ಲಿ ವಿಸ್ತಾರ ರಸ್ತೆಗಳಿರು ಕಡೆ ಮಾತ್ರ ಎತ್ತರಕ್ಕೆ ಬೆಳೆಯುವಂತಹ ಮಹಾಘನಿ, ಆಕಾಶ ಮಲ್ಲಿಗೆಯಂತಹ ಜಾತಿಯ ಗಿಡ ನೆಡುತ್ತಿದ್ದೇವೆ. ರಸ್ತೆಯ ಅಗಲ ಕಿರಿದಾಗಿರುವ ಕಡೆ ಬಸವನಪಾದ, ಹೊಂಗೆ, ಕುಂಕುಮ ಮತ್ತಿತರ ಜಾತಿಗಳ ಮರಗಳನ್ನು ನೆಡುತ್ತಿದ್ದೇವೆ. ಈ ಬಾರಿಯ ಗಾಳಿಮಳೆಗೆ ಗುಲ್‌ಮೊಹರ್‌ ಜಾತಿಯ ಮರಗಳು ಹೆಚ್ಚಾಗಿ ಬಿದ್ದಿದ್ದವು. ಅವುಗಳನ್ನು ನಾವು ನೆಡುತ್ತಿಲ್ಲ’ ಎಂದರು.

‘ಅರಣ್ಯ ವಿಭಾಗವು 2018–19ನೇ ಸಾಲಿನ ಸಸಿನೆಡುವ ಟೆಂಡರ್‌ ವಿಳಂಬವಾಗಿತ್ತು. ಅದನ್ನು ಈವರ್ಷ ನೆಡುತ್ತಿದ್ದೇವೆ’ ಎಂದರು. ಇದಕ್ಕೆ ಪಕ್ಷಭೇದ ಮರೆತು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಯಲಹಂಕ ಪ್ರದೇಶದಲ್ಲಿ ಗಿಡ ನೆಡಲು ಆರಂಭಿಸಿದ್ದು ನಿಜ ಎಂದು ಅಲ್ಲಿನ ಸದಸ್ಯರು ತಿಳಿಸಿದರು.

ಮತ್ತಿಕೆರೆ ಜೆ.ಪಿ.ಪಾರ್ಕ್‌ ಆವರಣ ಗೋಡೆ ನಿರ್ಮಿಸಲು 80ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದೆ ಎಂದು ಸದಸ್ಯ ಮಮತಾ ವಾಸುದೇವ್‌ ಆರೋಪಿಸಿದರು.

‘ಎರಡು ತಿಂಗಳಿಂದ ಯಾವುದೇ ಮರ ಕಡಿಯುವುದಕ್ಕೆ ಅನುಮತಿ ನೀಡಿಲ್ಲ. ಈ ಬಗ್ಗೆ ಪರಿಶೀಲಿಸುತ್ತೇನೆ’ ಎಂದು ಚೋಳರಾಜಪ್ಪ ತಿಳಿಸಿದರು.

ರಸ್ತೆ ವಿಭಜಕಗಳಲ್ಲಿ ಗಿಡ ನೆಡುವುದು ಒಳ್ಳೆಯದಲ್ಲ ಎಂದು ಅವರು ಸಲಹೆ ನೀಡಿದರು.

ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ

ಪಾಲಿಕೆ ಸಭೆ ಆರಂಭವಾದಾಗ ಅನೇಕ ಹಿರಿಯ ಅಧಿಕಾರಿಗಳು ಸಭಾಂಗಣದಲ್ಲಿ ಹಾಜರಿರಲಿಲ್ಲ. ಈ ಬಗ್ಗೆ ಗುಣಶೇಖರ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಭಾತ್ಯಾಗಕ್ಕೆ ಮುಂದಾದರು.

ಮಧ್ಯಪ್ರವೇಶಿಸಿದ ಮೇಯರ್‌ ಗಂಗಾಂಬಿಕೆ, ‘ಆಯುಕ್ತರ ಅನುಮತಿ ಪಡೆಯದೇ ಸಭೆಗೆ ಗೈರಾದ ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ನೀಡಲಾಗುವುದು. ಸಮರ್ಪಕ ಉತ್ತರ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಬೆಳಿಗ್ಗ 11ಕ್ಕೆ ನಿಗದಿಯಾಗಿದ್ದ ಸಭೆ ಆರಂಭವಾಗಿದ್ದು ಮಧ್ಯಾಹ್ನ 1 ಗಂಟೆಗೆ. ಬಿಜೆಪಿ ಸದಸ್ಯರು ಪಕ್ಷದ ರಾಜ್ಯ ಘಟಕದ ನೂತನ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡ ಕಾರಣ ಸಭೆಗೆ ಬರುವಾಗ ತಡವಾಗಿತ್ತು.

***

ಪಾಲಿಕೆ ನಿರ್ಮಿಸಿದ ಕಲ್ಯಾಣಿಗಳಲ್ಲಿ ಪಿಒಪಿಯಿಂದ ತಯಾರಿಸಿದ ವಿಗ್ರಹ ವಿಸರ್ಜಿಸಲು ಅವಕಾಶವಿಲ್ಲ. ಪಿಒಪಿ ವಿಗ್ರಹ ಬಳಸದಂತೆ ಹೈಕೋರ್ಟ್‌ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶವಿದ್ದು, ಅದನ್ನು ಪಾಲಿಸುತ್ತಿದ್ದೇವೆ

–ಎನ್‌.ಮಂಜುನಾಥ ಪ್ರಸಾದ್‌, ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT