ಶುಕ್ರವಾರ, ಜನವರಿ 17, 2020
22 °C
ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾಡಿದ ‘ಕುಡುಕ’

ರಾಜಕಾಲುವೆಯಲ್ಲಿ ಬಿದ್ದ: ಶಾಂತಿನಗರದಲ್ಲಿ ಎದ್ದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಂಠಪೂರ್ತಿ ಕುಡಿದು ರಾಜಕಾಲುವೆಯಲ್ಲಿ ಮಲಗಿದ್ದ ಕುಡುಕನೊಬ್ಬ ಎಸ್‌.ಜೆ.ಪಾರ್ಕ್ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ತಲೆನೋವಾಗಿ ಕಾಡಿದ ಘಟನೆ ಗುರುವಾರ ನಡೆದಿದೆ.

‘ಎಸ್‌.ಜೆ.ಪಾರ್ಕ್‌ ಠಾಣೆ ವ್ಯಾಪ್ತಿಯ ರಾಜಕಾಲುವೆಯಲ್ಲಿ ಬಿದ್ದಿದ್ದ ಕುಡುಕ, ಅಲ್ಲಿಯೇ ಮಲಗಿಕೊಂಡಿದ್ದ. ಕೆಲ ನಿಮಿಷಗಳಲ್ಲೇ ಅಲ್ಲಿಂದ ದಿಢೀರ್ ನಾಪತ್ತೆಯಾಗಿದ್ದ. ಹುಡುಕಾಟ ನಡೆಸಿದಾಗ, 2 ಕಿ.ಮೀ ದೂರದಲ್ಲಿದ್ದ ಶಾಂತಿನಗರದ ರಾಜಕಾಲುವೆಯಲ್ಲಿ ತಡರಾತ್ರಿ ಪತ್ತೆಯಾದ. ಅಸ್ವಸ್ಥಗೊಂಡಿರುವ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕುಡುಕನ ಹೆಸರು ಹಾಗೂ ವಿಳಾಸ ಗೊತ್ತಾಗಿಲ್ಲ. ಆತನೂ ಏನು ಹೇಳುತ್ತಿಲ್ಲ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರವೇ ಹೇಳಿಕೆ ಪಡೆಯಲಾಗುವುದು’ ಎಂದು ಮೂಲಗಳು ಹೇಳಿವೆ.

ಆಗಿದ್ದೇನು?: ‘ಮಾತನಾಡಲು ಸಾಧ್ಯವಾಗದಷ್ಟು ಮದ್ಯ ಕುಡಿದಿದ್ದ ವ್ಯಕ್ತಿ, ಎಸ್.ಜೆ.ಪಾರ್ಕ್‌ ಸಮೀಪದ ರಾಜಕಾಲುವೆಯಲ್ಲಿ ಬಿದ್ದಿದ್ದ. ನೀರಿನ ಹರಿಯುವಿಕೆ ಕಡಿಮೆ ಇತ್ತು. ಹೀಗಾಗಿ, ಆತ ಅಲ್ಲಿಯೇ ಮಲಗಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಕುಡುಕನ್ನು ನೋಡಿದ್ದ ಸ್ಥಳೀಯರು ಮಾತನಾಡಿಸಲು ಯತ್ನಿಸಿದ್ದರು. ಆತ ಮಾತ್ರ ಮಾತನಾಡಿರಲಿಲ್ಲ. ಸ್ಥಳೀಯರೇ ಆತನನ್ನು ಮೇಲಕ್ಕೆ ಎತ್ತಿದ್ದರು. ಆತನಿಗೆ ತಿಂಡಿ ತಿನ್ನಿಸಿ, ಚಹಾ ಕುಡಿಸಿದ್ದರು. ಮನೆಗೆ ಹೋಗುವಂತೆ ಹೇಳಿ ಅಲ್ಲಿಂದ ಕಳುಹಿಸಿದ್ದರು.’

‘ಮನೆಗೆ ಹೋದಂತೆ ನಟಿಸಿದ್ದ ಆತ, ಪುನಃ ರಾಜಕಾಲುವೆಯೊಳಗೆ ಬಂದು ಮಲಗಿದ್ದ. ಅವಾಗಲೇ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲೇ ಆತ ರಾಜಕಾಲುವೆಯಿಂದ ನಾಪತ್ತೆಯಾಗಿದ್ದ. ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿದ್ದ ಪೊಲೀಸರು ರಾಜಕಾಲುವೆಯಲ್ಲಿ ಇಳಿದು ಆತನಿಗಾಗಿ ಹುಟುಕಾಟ ನಡೆಸಿದರು. ಯಾವುದೇ ಸುಳಿವು ಸಿಕ್ಕಿರಲಿಲ್ಲ’ ಎಂದರು.

‘ರಾಜಕಾಲುವೆ ಹಾದು ಹೋಗಿರುವ ಪ್ರದೇಶಗಳ ಪೊಲೀಸ್‌ ಠಾಣೆಗಳಿಗೆ ಮಾಹಿತಿ ನೀಡಲಾಗಿತ್ತು. ಅಲ್ಲಿಯ ಪೊಲೀಸರು ಶೋಧ ಆರಂಭಿಸಿದ್ದರು. ತಡರಾತ್ರಿ ಶಾಂತಿನಗರದ ರಾಜಕಾಲುವೆಯಲ್ಲಿ ಕುಡುಕ ಪತ್ತೆಯಾದ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು