ಶನಿವಾರ, ಸೆಪ್ಟೆಂಬರ್ 25, 2021
29 °C
ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನದ ಹಾದಿಯ ತುಂಬಾ ಕತ್ತಲು * ಮೂರು ಬಾರಿ ಗಡುವು ಬದಲಾದರೂ ಪ್ರಗತಿ ಆಮೆಗತಿ

ಇನ್ನೂ ಬೆಳಗದ ಸ್ಮಾರ್ಟ್‌ ಎಲ್‌ಇಡಿ ಬೀದಿ ದೀಪ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಬೀದಿ ಬೀದಿಗಳ ಕತ್ತಲು ನಿವಾರಿಸುವುದಷ್ಟೇ ಅಲ್ಲ, ಸುರಕ್ಷತೆಗೆ ಸಂಬಂಧಿಸಿಯೂ ಆಮೂಲಾಗ್ರ ಬದಲಾವಣೆ ತರಬಲ್ಲುದು ಚತುರ ಎಲ್‌ಇಡಿ ಬೀದಿ ದೀಪ ಯೋಜನೆ (ಸ್ಮಾರ್ಟ್‌ ಎಲ್‌ಇಡಿ ಸ್ಟೀಟ್‌ ಲೈಟಿಂಗ್‌). ಸಮರ್ಪಕವಾಗಿ ಅನುಷ್ಠಾನವಾಗಿದ್ದೇ ಆದರೆ ಬಿಬಿಎಂಪಿ ಪಾಲಿಗೆ ವರ್ಷಕ್ಕೆ ನೂರಾರು ಕೋಟಿಗಳಷ್ಟು ವಿದ್ಯುತ್‌ ಬಿಲ್‌ ಉಳಿಸಬಲ್ಲ ಮಹತ್ವಾಕಾಂಕ್ಷಿ ಯೋಜನೆ ಇದು. ಈ ಯೋಜನೆಯ ಟೆಂಡರ್‌ಗೆ ಬಿಬಿಎಂಪಿ ಅನುಮೋದನೆ ನೀಡಿಯೇ ಮೂರು ವರ್ಷಗಳಾಗಿವೆ. ಇನ್ನೂ ಈ ಯೋಜನೆಯಡಿ ಒಂದೇ ಒಂದು ಎಲ್‌ಇಡಿ ಬೀದಿ ದೀಪವೂ ಬೆಳಗಿಲ್ಲ.

2018ರ ಜ. 11ರಂದು ಈ ಯೋಜನೆಗೆ ಬಿಬಿಎಂಪಿ ಟೆಂಡರ್‌ ಆಹ್ವಾನಿಸಿತ್ತು. ಅದೇ ವರ್ಷ ಆಗಸ್ಟ್‌ನಲ್ಲಿ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಟೆಂಡರ್‌ಗೆ ಅನುಮೋದನೆಯೂ ಸಿಕ್ಕಿತ್ತು. ಆ ಬಳಿಕ ಕೆಲ ತಾಂತ್ರಿಕ ವಿಚಾರಗಳಿಗೆ ಸಂಬಂಧಿಸಿ ಬಿಬಿಎಂಪಿ ಮತ್ತು ನಗರಾಭಿವೃದ್ಧಿ ಇಲಾಖೆ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಯೋಜನೆ ಅನುಷ್ಠಾನದ ವಿಳಂಬವಾಗುತ್ತಿರುವುದರಿಂದ ಎದುರಾಗಿದ್ದ ತೊಂದರೆಗಳ ಬಗ್ಗೆ ಪಾಲಿಕೆಯ ಕೆಲವು ಸದಸ್ಯರೂ ಕೌನ್ಸಿಲ್‌ ಸಭೆಯಲ್ಲಿ ಧ್ವನಿ ಎತ್ತಿದ್ದರು. ಮೇಯರ್ ಅವರು ಸರ್ಕಾರಕ್ಕೆ ಪತ್ರ ಬರೆದು ಗುತ್ತಿಗೆ ರದ್ದುಪಡಿಸುವಂತೆಯೂ ಒತ್ತಾಯಿಸಿದ್ದರು. ಬಳಿಕ ಕೆಲವು ತೊಡಕುಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿತ್ತು. ಒಟ್ಟು ಎರಡೂವರೆ ವರ್ಷಗಳಲ್ಲಿ ಐದು ಹಂತಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ತೀರ್ಮಾನಕ್ಕೆ ಬರಲಾಗಿತ್ತು.

ನಗರದಲ್ಲಿ ಈಗಿರುವ ಸೋಡಿಯಂ ದೀಪಗಳ ಬದಲು ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸಲು ಶಾಪೂರ್ಜಿ ಪಲ್ಲೋಂಜಿ, ಎಸ್‌ಎಂಎಸ್‌ ಇನ್‌ಫ್ರಾಸ್ಟ್ರಕ್ಚರ್‌ ಮತ್ತು ಸಮುದ್ರ ಎಲೆಕ್ಟ್ರಾನಿಕ್‌ ಸಿಸ್ಟಮ್‌ ಪ್ರೈವೇಟ್‌ ಲಿಮಿಟೆಡ್‌ಗಳ ಒಕ್ಕೂಟಕ್ಕೆ (ಎಸ್ಕೊ) ಗುತ್ತಿಗೆ ನೀಡಲಾಗಿದೆ. ಈ ಯೋಜನೆಯನ್ನು ವಿನ್ಯಾಸ ರಚನೆ, ಹಣಕಾಸು ವ್ಯವಸ್ಥೆ, ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ (ಡಿಎಫ್‌ಬಿಒಟಿ) ಮಾದರಿಯಲ್ಲಿ ಜಾರಿಗೆ ತರಲಾಗುತ್ತಿದೆ. ಹೊಸ ಬೀದಿದೀಪ ಅಳವಡಿಕೆಗೆ ಗುತ್ತಿಗೆ ಸಂಸ್ಥೆಗೆ 30 ತಿಂಗಳ ಕಾಲಾವಕಾಶ ನೀಡಲಾಗಿದೆ. ಹತ್ತು ವರ್ಷಗಳ ಅವಧಿಗೆ ಬೀದಿ ದೀಪಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಹೊಣೆಯನ್ನೂ ವಹಿಸಲಾಗಿದೆ. ನಗರದಲ್ಲಿ 4.85 ಲಕ್ಷ ಸಾಂಪ್ರದಾಯಿಕ ಬೀದಿದೀಪಗಳನ್ನು ಬದಲಿಸಿ ಎಲ್‌ಇಡಿ ಬೀದಿದೀಪಗಳನ್ನು ಈ ಒಕ್ಕೂಟವೇ ಅಳವಡಿಸಬೇಕು. ಅವುಗಳನ್ನು 10 ವರ್ಷ ನಿರ್ವಹಣೆ ಮಾಡಬೇಕಿದೆ.

ಟೆಂಡರ್‌ ಕುರಿತ ಗೊಂದಲ ನಿವಾರಣೆಯಾಗಿ ಎರಡು ವರ್ಷಗಳು ಕಳೆದಿವೆ. ಆದರೂ ಈ ಯೋಜನೆಯಲ್ಲಿ ನಿರೀಕ್ಷಿತ ಪ್ರಗತಿ ಆಗಿಲ್ಲ. ಮೊದಲ ಹಂತದ ಅನುಷ್ಠಾನಕ್ಕೆ ವಿಧಿಸಿದ್ದ ಮೂರು ಗಡುವುಗಳು ಮೀರಿ ಹೋಗಿವೆ. ಮೊದಲ ನಾಲ್ಕು ಹಂತಗಳಲ್ಲಿ ತಲಾ 1 ಲಕ್ಷ ಹಾಗೂ ಐದನೇ ಹಂತದಲ್ಲಿ 85 ಸಾವಿರ ಎಲ್‌ಇಡಿ ದೀಪಗಳನ್ನು ಗುತ್ತಿಗೆದಾರರು ಅಳವಡಿಸಬೇಕಿದೆ. ಮೊದಲ ಹಂತದಲ್ಲಿ 1 ಲಕ್ಷ ಎಲ್‌ಇಡಿಗಳನ್ನು ಬದಲಿಸಬೇಕಿತ್ತು. ಅದರಲ್ಲಿ ಕನಿಷ್ಠ 20 ಸಾವಿರ ಎಲ್‌ಇಡಿಗಳನ್ನು 2020ರ ಡಿಸೆಂಬರ್‌ ಅಂತ್ಯದೊಳಗೆ ಬದಲಾಯಿಸಲು ಗುತ್ತಿಗೆದಾರರಿಗೆ ಬಿಬಿಎಂಪಿ ಸೂಚನೆ ನೀಡಿತ್ತು. ಆದರೆ, ಅದು ಈಡೇರದ ಕಾರಣ ಬಿಬಿಎಂಪಿಯ ಆಗಿನ ಆಯುಕ್ತರು ಎಸ್ಕೊ ಪ್ರಮುಖರನ್ನು ಕರೆಸಿಕೊಂಡು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ 2021ರ ಏಪ್ರಿಲ್‌ ಒಳಗೆ ಮೊದಲ ಹಂತ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದ್ದರು. ಅದೂ ಈಡೇರಿಲ್ಲ. ಈ ಗಡುವನ್ನು 2021ರ ಜುಲೈವರೆಗೆ ವಿಸ್ತರಿಸಲಾಗಿತ್ತು.

ಈ ಯೋಜನೆಯಲ್ಲಿ ಬಿಬಿಎಂಪಿ ಯಾವುದೇ ಹೂಡಿಕೆ ಮಾಡುತ್ತಿಲ್ಲ. ಆದರೆ, ಪ್ರಸ್ತುತ ಎಷ್ಟು ವಿದ್ಯುತ್‌ ಬಳಕೆ ಆಗುತ್ತಿದೆ ಎಂಬುದನ್ನು ಆಧಾರವಾಗಿಟ್ಟುಕೊಂಡು, ಎಲ್‌ಇಡಿ ದೀಪ ಬಳಕೆಯಿಂದಾಗುವ ವಿದ್ಯುತ್‌ ಉಳಿತಾಯದ ಮೊತ್ತಕ್ಕೆ ಅನುಗುಣವಾಗಿ ಕಂಪನಿಗೆ ಹಣ ಪಾವತಿ ಮಾಡಲಿದೆ. ಎಲ್‌ಇಡಿ ಬೀದಿ ದೀಪಗಳನ್ನು ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆಯಡಿ ತರಲಾಗುತ್ತದೆ. ಯಾವುದೇ ದೀಪದಲ್ಲಿ ಲೋಪ ಕಾಣಿಸಿಕೊಂಡರೂ ತಕ್ಷಣ ತಿಳಿಯುತ್ತದೆ. ಲೋಪಗಳನ್ನು ತ್ವರಿತವಾಗಿ ಸರಿಪಡಿಸಬಹುದಾದ ವ್ಯವಸ್ಥೆ ಹಾಗೂ ಬೀದಿ ದೀಪಗಳ ಬೆಳಕಿನ ತೀವ್ರತೆಯನ್ನು ದೂರದಿಂದಲೇ ನಿಯಂತ್ರಿಸುವ ವ್ಯವಸ್ಥೆಯೂ ಇದರಲ್ಲಿ ಇರಲಿದೆ. ಯಾವುದಾದರೂ ಬೀದಿ ದೀಪ ಉರಿಯದಿದ್ದರೆ ಗುತ್ತಿಗೆದಾರರಿಗೆ ದಂಡ ವಿಧಿಸುವುದಕ್ಕೆ ಅವಕಾಶ ಇದೆ.

ವಿದ್ಯುತ್‌ ಬಿಲ್‌: ತಿಂಗಳ ಉಳಿಕೆ ₹ 17 ಕೋಟಿ

ನಗರದಲ್ಲಿ ಎಲ್‌ಇಡಿ ಬೀದಿದೀಪ ಅಳವಡಿಸುವಿಕೆಗೆ ಹಾಗೂ ಅವುಗಳ ನಿರ್ವಹಣೆಗೆ ಎಸ್ಕೊ ಒಟ್ಟು ₹ 830 ಕೋಟಿ ಹೂಡಿಕೆ ಮಾಡಲಿದೆ. ಎಲ್‌ಇಡಿ ಬಲ್ಬ್‌ಗಳ ಬಳಕೆಯಿಂದ ಶೇ 85ರಷ್ಟು ವಿದ್ಯುತ್‌ ಉಳಿತಾಯವಾಗಲಿದೆ. ಬಿಬಿಎಂಪಿಗೆ ಪ್ರತಿ ತಿಂಗಳ ವಿದ್ಯುತ್‌ ಬಿಲ್‌ನಲ್ಲಿ ₹ 17 ಕೋಟಿ ಉಳಿಯಲಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ₹ 13.5 ಕೋಟಿಯನ್ನು ಬಿಬಿಎಂಪಿಯು ಕಂಪನಿಗೆ ಪಾವತಿಸಲಿದೆ.

‘ಅಪೇಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣುತ್ತಿಲ್ಲ’

‘ಸ್ಮಾರ್ಟ್‌ ಎಲ್‌ಇಡಿ ಬೀದಿ ದೀಪ ಯೋಜನೆಯ ಅನುಷ್ಠಾನವು ಅಪೇಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣುತ್ತಿಲ್ಲ. ಮೀಟರ್‌ ಅಳವಡಿಕೆ ಬಗ್ಗೆಯೂ ಕೆಲವು ತೊಡಕುಗಳಿವೆ. ಬೆಸ್ಕಾಂ ಜೊತೆಯೂ ಸಮಾಲೋಚನೆ ನಡೆಸಬೇಕಿದೆ. ಅವುಗಳನ್ನು ನಿವಾರಿಸಿಕೊಂಡು ಪ್ರಗತಿ ಸಾಧಿಸಬೇಕಿದೆ’ ಎನ್ನುತ್ತಾರೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ. ಈ ಯೋಜನೆ ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆ ಅವರೂ ಅಸಮಾಧಾನ ವ್ಯಕ್ತಪಡಿಸಿದರು.

‘2021ರ ಜನವರಿ ತಿಂಗಳಲ್ಲಿ ಒಮ್ಮೆ ಪ್ರಗತಿ ಪರಿಶೀಲನೆ ನಡೆಸಿ ಯೋಜನೆ ಅನುಷ್ಠಾನವನ್ನು ಚುರುಕುಗೊಳಿಸುವಂತೆ ಸೂಚನೆ ನಿಡಲಾಗಿತ್ತು. ಇತ್ತೀಚೆಗೆ ಮತ್ತೊಮ್ಮೆ ಪ್ರಗತಿ ಪರಿಶೀಲನೆ ನಡೆಸಿದ್ದೇವೆ. ವಾರದಲ್ಲಿ ಇನ್ನೊಂದು ಸುತ್ತಿನ ಸಭೆ ನಡೆಸಿ ಕಾಮಗಾರಿಗೆ ಎದುರಾಗಿರುವ ತೊಡಕುಗಳ ನಿವಾರಣೆಗೆ ಕ್ರಮ ಕೈಗೊಳ್ಳಲಿದ್ದೇನೆ’ ಎಂದು ಅವರು ಮಾಹಿತಿ ನೀಡಿದರು.

‘ಬೀದಿದೀಪ ಅಳವಡಿಕೆ 10 ದಿನಗಳಲ್ಲಿ ಶುರು’ 

ಸ್ಮಾರ್ಟ್‌ ಎಲ್‌ಇಡಿ ಲೈಟಿಂಗ್‌ ಯೋಜನೆಯ ಮೊದಲ ಹಂತದ ಸದ್ಯಕ್ಕೆ ಬೇಸ್‌ಲೈಸ್‌ ಸರ್ವೆ ಹಾಗೂ ಜಂಟಿ ಸಮೀಕ್ಷೆಗಳು ಪೂರ್ಣಗೊಂಡಿವೆ. ವಸಂತನಗರ ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಳಿಸಲಿದ್ದೇವೆ. ಸಾಂಪ್ರದಾಯಿಕ ಬೀದಿದೀಪಗಳನ್ನು ಎಲ್‌ಇಡಿ ಬೀದಿದೀಪಗಳಿಗೆ ಬದಲಾಯಿಸುವ ಪ್ರಕ್ರಿಯೆ ಈ ವಾರ್ಡ್‌ನಲ್ಲಿ 10 ದಿನಗಳಲ್ಲಿ ಆರಂಭವಾಗಲಿದೆ. ಆ.15ರ ಒಳಗೆ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಯೋಜನೆ) ಮನೋಜ್‌ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಯೋಜನೆಯಡಿ ಆರ್‌.ಆರ್‌.ನಗರ, ದಾಸರಹಳ್ಳಿ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ಆರಂಭಿಕ ಹಂತದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ. ಉಳಿದ ಹಂತಗಳಲ್ಲಿ ಬೇರೆ ವಲಯಗಳ ವಾರ್ಡ್‌ಗಳಿಗೂ ವಿಸ್ತರಿಸಲಾಗುತ್ತದೆ. ಮೊದಲ ಹಂತದಲ್ಲಿ 1 ಲಕ್ಷ ಬೀದಿದೀಪಗಳನ್ನು ಅಳವಡಿಸುವ ಕಾರ್ಯ ಎರಡು ತಿಂಗಳ ಒಳಗೆ ಪೂರ್ಣಗೊಳಿಸಲಿದ್ದೇವೆ’ ಎಂದು ಅವರು ತಿಳಿಸಿದರು.

ಸ್ಮಾರ್ಟ್‌ ಬೀದಿ ದೀಪ– ವಿಶೇಷಗಳೇನು?

ಬೀದಿದೀಪಗಳ ವಿದ್ಯುತ್‌ ಬಳಕೆಯಲ್ಲಿ ಶೇ 85.50ರಷ್ಟು ಉಳಿತಾಯ

ವಿದ್ಯುತ್‌ ಕಂಬದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ, ಮಾಲಿನ್ಯ ಸಂವೇದಕ ಅಳವಡಿಕೆಗೆ ಅವಕಾಶ

ಪ್ರತಿ ದೀಪಕ್ಕೂ ನಿಸ್ತಂತು ಸಂವೇದಕ ಅಳವಡಿಕೆ

ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆ ಮೂಲಕ ಬೀದಿದೀಪಗಳ ಮೇಲೆ ನಿಗಾ ಸಾಧ್ಯ

10 ವರ್ಷಗಳ ಕಾಲ ಬೀದಿದೀಪಗಳ ನಿರ್ವಹಣೆಯ ಹೊಣೆ ಗುತ್ತಿಗೆದಾರರದು

 

4.85 ಲಕ್ಷ: ಯೋಜನೆಯಡಿ ನಗರದಲ್ಲಿ ಅಳವಡಿಸಬೇಕಾದ ಎಲ್‌ಇಡಿ ಬಲ್ಬ್‌ಗಳ ಸಂಖ್ಯೆ

₹ 1,465 ಕೋಟಿ: ಈ ಯೋಜನೆಗೆ ತಗಲುವ ಒಟ್ಟು ವೆಚ್ಚ

₹ 500 ಕೋಟಿ: ಎಲ್‌ಇಡಿ ಬಲ್ಬ್‌ ಅಳವಡಿಕೆಗೆ ತಗಲುವ ವೆಚ್ಚ

₹ 330 ಕೋಟಿ: ಬೀದಿದೀಪಗಳ ನಿರ್ವಹಣೆಗೆ ವ್ಯವಸ್ಥೆಗೆ ತಗಲುವ ವೆಚ್ಚ

₹ 233 ಕೋಟಿ: ಎಲ್‌ಇಡಿ ಬೀದಿದೀಪ ಅನುಷ್ಠಾನ ಬಳಿಕ ಬಿಬಿಎಂಪಿ ವರ್ಷದಲ್ಲಿ ಪಾವತಿಸಬೇಕಾಗುವ ವಿದ್ಯುತ್‌ ಶುಲ್ಕ

₹ 204 ಕೋಟಿ: ಎಲ್‌ಇಡಿ ಬಲ್ಬ್‌ಗಳ ಅಳವಡಿಕೆ ಬಳಿಕ ವರ್ಷವೊಂದಕ್ಕೆ ಉಳಿತಾಯವಾಗುವ ವಿದ್ಯುತ್‌ ಶುಲ್ಕ

51.5 ಕೋಟಿ ಯೂನಿಟ್‌: ಪ್ರತಿ ವರ್ಷ ಬೀದಿದೀಪಗಳ ಸಲುವಾಗಿ ಬಿಬಿಎಂಪಿ ಬಳಸುತ್ತಿರುವ ವಿದ್ಯುತ್‌

44 ಕೋಟಿ ಯೂನಿಟ್‌: ಎಲ್‌ಇಡಿ ಅಳವಡಿಕೆ ಬಳಿಕ ಬಿಬಿಎಂಪಿಗೆ ಉಳಿತಾಯವಾಗುವ ವಿದ್ಯುತ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು