ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಭೀತಿ ನಡುವೆ ಮಾನವೀಯ ಕಾರ್ಯ

ವಿವಿಧ ಸಂಘಟನೆಗಳ ಸಾಮಾಜಿಕ ಸೇವೆ
Last Updated 31 ಮಾರ್ಚ್ 2020, 5:43 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸಲು ಸರ್ಕಾರ ದೇಶದಾದ್ಯಂತ 21 ದಿನಗಳ ಕರ್ಫ್ಯೂ ವಿಧಿಸಿದ್ದು, ಈ ಸಂದರ್ಭದಲ್ಲಿ ತೊಂದರೆಗೆ ಸಿಲುಕುವ ವರ್ಗಗಳ ಜನರಿಗೆ ನೆರವಾಗಲು ಹಲವು ಸಂಘಟನೆಗಳು, ಯುವಕ ತಂಡಗಳು, ಕಂಪನಿಗಳು ಮುಂದಾಗಿವೆ.

ಕೆಲವು ಸಂಘಟನೆಗಳು ಆರ್ಥಿಕವಾಗಿ ನೆರವು ನೀಡಲು ಮುಂದಾರೆ, ಇನ್ನೂ ಕೆಲವು ಆಹಾರ, ಔಷಧದಂತಹ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಂಕಲ್ಪ ಮಾಡಿವೆ.

ಹಸಿರುದಳ

ಹಸಿರು ದಳ, ಚಿಂದಿ ಆಯುವವರು ಮತ್ತು ಅವರ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯಿದು. ಈ ಸಂಸ್ಥೆಯು, ಕರ್ಫ್ಯೂ ವೇಳೆ ಸಂಕಷ್ಟಕ್ಕೆ ಒಳಗಾಗಿರುವ 2,500ಕ್ಕೂ ಹೆಚ್ಚು ಚಿಂದಿ ಆಯುವ ಕುಟುಂಬಗಳನ್ನು ಗುರುತಿಸಿ,ಅವರಿಗೆ ಉಚಿತ ಆಹಾರ ಪೊಟ್ಟಣ ವಿತರಿಸಲು ಮುಂದಾಗಿದೆ. ಪ್ರತಿ ಕುಟುಂಬಕ್ಕೆ 25 ಕೆ.ಜಿ ಅಕ್ಕಿ, 5 ಕೆ.ಜಿ ಬೇಳೆ, 2 ಲೀಟರ್‌ಅಡುಗೆ ಎಣ್ಣೆ, ಅರ್ಧ ಕೆ.ಜಿ ಶೇಂಗಾವಿರುವ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿದೆ.

ಈ ಸಂಸ್ಥೆ ಬೆಂಗಳೂರು, ತುಮಕೂರು, ಮೈಸೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಹುಬ್ಬಳ್ಳಿ ಧಾರವಾಡದಲ್ಲಿ ಆಹಾರ ವಿತರಣೆ ಮಾಡುತ್ತಿದೆ. ‘ಈಗಾಗಲೇ 250 ಮನೆಗಳಿಗೆ ಆಹಾರ ಪಟ್ಟಣ ತಲುಪಿಸಿದ್ದೇವೆ. ಎಪಿಎಂಸಿ ಮಾರುಕಟ್ಟೆಗಳು ಮುಚ್ಚಿರುವುದರಿಂದ ಆಹಾರ ಪೂರೈಕೆಗೆ ತೊಂದರೆಯಾಗುತ್ತಿದೆ. ಆದರೂ ಮುಂದಿನ ಎರಡು ದಿನಗಳಲ್ಲಿ 150 ಕುಟುಂಬಕ್ಕೆ ನೀಡಲಿದ್ದೇವೆ’ ಎಂದು ಹಸಿರುದಳದ ಸ್ಥಾಪಕಿ ನಳಿನಿ ಶೇಖರ್‌ ತಿಳಿಸಿದರು.

‘ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಚಿಂದಿ ಆಯುವವರು ದುಡಿಮೆ ಇಲ್ಲದೇ ಅಘಾತಕ್ಕೆ ಒಳಗಾಗಿದ್ದಾರೆ. ಅವರು ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದಾರೆ. ಅಂಥವರನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಅವರಿಗೆ ಕೌನ್ಸೆಲಿಂಗ್‌ ಕೂಡ ಮಾಡಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಯುವಕ ತಂಡದ ನೆರವು

ಮಾರತ್‌ಹಳ್ಳಿಯ ಟಿ–ಸಿಸ್ಟಮ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸತೀಶ್ ದಿವಿ ಹಾಗೂ ಅವರ ಆರು ಸ್ನೇಹಿತರು, ಕರ್ಫ್ಯೂ ವೇಳೆ ತೊಂದರೆಗೆ ಸಿಲುಕುವ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ತಮ್ಮ ಕೈಲಾದ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ಈ ಯುವಕರು, ಹಿರಿಯ ವ್ಯಕ್ತಿಗಳು, ಅಸಹಾಯಕರನ್ನು ಗುರುತಿಸಿ, ಅವರಿಗೆ ದಿನಸಿ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಿ ತಲುಪಿಸುತ್ತಿದ್ದಾರೆ.

ಸತೀಶ್ ದಿವಿ

ತಮ್ಮ ಕಾರ್ಯಚಟುವಟಿಕೆಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಇದನ್ನು ಗಮನಿಸಿದ 30ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಣೆಯಿಂದ ಯುವಕರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಹೊರ ದೇಶ, ರಾಜ್ಯದಲ್ಲಿರುವ ಮಕ್ಕಳು, ನಮ್ಮಲ್ಲಿರುವ ಪೋಷಕರಿಗೆ ಏನಾದರೂ ಸಹಾಯ ಮಾಡಬೇಕಿದ್ದರೆ, ನಮ್ಮನ್ನು (9966099552) ಸಂಪರ್ಕಿಸಬಹುದು‘ ಎಂದು ಸತೀಶ್ ತಿಳಿಸಿದ್ದಾರೆ.

ಗೀವ್ ಇಂಡಿಯಾ

ಕರ್ಫ್ಯೂ ಸಂದರ್ಭದಲ್ಲಿ ತೊಂದರೆಗೆ ಸಿಲುಕಿರುವ ದಿನಗೂಲಿ ನೌಕರರಿಗೆ ಸ್ವಯಂ ಸೇವಾ ಸಂಸ್ಥೆ ಗೀವ್‌ ಇಂಡಿಯಾ ‘ನೈರ್ಮಲ್ಯ ಕಿಟ್‌‘ಗಳನ್ನು ವಿತರಿಸುತ್ತಿದೆ. ಇದಕ್ಕಾಗಿ ‘ಗೀವ್‍ಇಂಡಿಯಾ ನೈರ್ಮಲ್ಯ ಮಿಷನ್‘ ಎಂಬ ಯೋಜನೆ ಆರಂಭಿಸಿದೆ. ಈ ದಿನಗೂಲಿ ನೌಕರರಿಗೆ ಆಹಾರ ಒದಗಿಸುವುದು ಹಾಗೂ ದುರ್ಬಲ ವರ್ಗದ ಕುಟುಂಬಗಳಿಗೆ ಸೋಪ್‌, ಸ್ಯಾನಿಟೈಸರ್ ಮತ್ತು ಮಾಸ್ಕ್‌ಗಳಿರುವ ‘ನೈರ್ಮಲ್ಯ ಕಿಟ್‘ ಪೂರೈಕೆ ಮಾಡುತ್ತಿದೆ.

ಈ ಕ್ರಮದ ಬಗ್ಗೆ ಮಾತನಾಡಿದ ಗೀವ್‍ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅತುಲ್ ಸತಿಜಾ, ‘ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ರಕ್ಷಣೆ ನೀಡುವ ದೃಷ್ಟಿಯಿಂದ ನಾವು ಈ ಅಭಿಯಾನ ಆರಂಭಿಸಿದ್ದೇವೆ. ಈ ನಿಧಿಯ ಮೂಲಕ ನಾವು ದಿನಗೂಲಿ ನೌಕರರಿಗೆ ನೇರವಾಗಿ ಬೆಂಬಲ ಮತ್ತು ನೆರವು ನೀಡುತ್ತಿದ್ದೇವೆ. ವೈರಸ್ ನಿರ್ಮೂಲನೆಯಾಗುವವರೆಗೆ ಮತ್ತು ಈ ನೌಕರರು ಕೆಲಸವನ್ನು ಆರಂಭಿಸುವವರೆಗೆ ಈ ಅಭಿಯಾನವನ್ನು ಮುಂದುವರಿಸಲಿದ್ದೇವೆ’ ಎಂದು ತಿಳಿಸಿದರು.

ಈ ಅಭಿಯಾನವನ್ನು ಆರಂಭಿಸಿದ ಮೂರು ದಿನಗಳಲ್ಲಿ ಗೀವ್ ಇಂಡಿಯಾ 6,000ಕ್ಕೂ ಅಧಿಕ ದಾನಿಗಳಿಂದ ₹1.5 ಕೋಟಿ ದೇಣಿಗೆಯನ್ನು ಸಂಗ್ರಹಿಸಿದೆ.

ಥ್ರೀ ವೀಲ್ಸ್ಸ್ ಯುನೈಟೆಡ್ ಸಂಸ್ಥೆ

ಕರ್ಫ್ಯೂ ಕಾರಣದಿಂದಾಗಿ ಜನಸಂಚಾರ ಸ್ತಬ್ಧವಾಗಿದ್ದು ಆಟೊ ಚಾಲಕರ ಆದಾಯವೂ ಕಡಿಮೆಯಾಗಿದೆ. ಆಟೊ ಸಂಚಾರವಿಲ್ಲದೇ, ನಗರದ ಅನೇಕ ಮಂದಿಗೆ (ವಿಶೇಷವಾಗಿ ಹಿರಿಯ ನಾಗರಿಕರು, ಅಂಗವಿಕಲರು) ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಥ್ರೀವೀಲ್ಸ್‌ ಯುನೈಟೆಡ್ ಸಂಸ್ಥೆ ಆಟೊ ಚಾಲಕರಿಗೆ ಕನಿಷ್ಠ ಆದಾಯ ಒದಗಿಸಲು ಮುಂದಾಗಿದೆ. ಈ ಆಟೊ ಚಾಲಕರ ಮೂಲಕ ನಗರದ ನಿವಾಸಿಗಳಿಗೆ ದಿನಸಿ ವಸ್ತು, ಔಷಧ ಸೇರಿದಂತೆ ಅತ್ಯವಶ್ಯಕ ಸಾಮಗ್ರಿಗಳನ್ನು ಅವರವರ ಮನೆ ಬಾಗಿಲಿಗೆ ತಲುಪಿಸುವ ಕೆಲಸಕ್ಕೆ ಮುಂದಾಗಿದೆ. ‘ತುಂಬಾ ಸಂಕಷ್ಟದಲ್ಲಿರುವವರಿಗೆ, ಹಿರಿಯ ನಾಗರಿಕರಿಗೆ ಕಡಿಮೆ ದರದಲ್ಲಿ ಅಥವಾ ಉಚಿತ ವಾಗಿ ವಸ್ತುಗಳ ಡೆಲಿವರಿ ಮಾಡಲಾಗುತ್ತದೆ. ಈ ಯೋಜನೆ ಮೂಲಕಆಟೊ ಚಾಲಕರಿಗೆ ಆರ್ಥಿಕ ಬೆಂಬಲ, ಅವಶ್ಯಕತೆ ಇದ್ದವರಿಗೆ ಅಗತ್ಯ ಸೇವೆ ನೀಡಿದಂತಾಗುತ್ತದೆ‘ ಎಂಬುದು ಸಂಸ್ಥೆಯವರ ಅಭಿಪ್ರಾಯ.

ಅತ್ಯಗತ್ಯ ವಸ್ತುಗಳಾದ ದಿನಸಿ ಸಾಮಗ್ರಿಗಳು, ಔಷಧಗಳು ಇತ್ಯಾದಿ ಸ್ಥಳೀಯ ಚಿಲ್ಲರೆ ಮಾರಾಟಗಾರರಾಗಿದ್ದಲ್ಲಿ, ನಮ್ಮ ಆಟೊ ರಿಕ್ಷಾಗಳ ಡೆಲಿವರಿ ಸೇವೆಗಳೊಂದಿಗೆ ಸಂಪರ್ಕಿಸಲು ಥ್ರೀ ವೀಲ್ಸ್ ಯುನೈಟೆಡ್ ಮೊಬೈಲ್ ಸಂಖ್ಯೆ 9844139191 ಗೆ ಕರೆ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT