ಬೆಂಗಳೂರು: ಬಿಬಿಎಂಪಿ ಅರಣ್ಯ ಘಟಕವು ಈ ಬಾರಿ ಪಾಲಿಕೆ ವ್ಯಾಪ್ತಿಯಲ್ಲಿನ ಮರಗಳ ಗಣತಿಗೆ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ (ಕೆಎಸ್‌ಆರ್‌ಎಸ್‌ಎಸಿ) ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ತಂತ್ರಾಂಶವನ್ನು ಬಳಸುತ್ತಿದೆ.
ನಗರದಲ್ಲಿ ಸರ್ಕಾರಿ ಕಚೇರಿಗಳ ಆವರಣ, ರಸ್ತೆ ಬದಿ, ಖಾಸಗಿ ಅಪಾರ್ಟ್‌ಮೆಂಟ್, ಸಂಸ್ಥೆಗಳು ಸೇರಿದಂತೆ ಖಾಸಗಿ ಬಡಾವಣೆಗಳಲ್ಲಿ ಬೆಳೆದಿರುವ ಹಾಗೂ ಬೆಳೆಯುತ್ತಿರುವ ಮರಗಳ ಗಣತಿಯನ್ನು ಜನವರಿಯಿಂದ ನಡೆಸಲಾಗುತ್ತಿದೆ.
ಬೆಂಗಳೂರು ನಗರದ ಭೌಗೋಳಿಕ ವಿಸ್ತೀರ್ಣ 840 ಚದರ ಕಿಲೋಮೀಟರ್ ಇದೆ. ತಲಾ 100 ಚದರ ಕಿಲೋಮೀಟರ್‌ನ ಎಂಟು ವಿಭಾಗ ಮಾಡಿಕೊಳ್ಳಲಾಗಿದೆ. ಈ ವಿಭಾಗಗಳನ್ನು ಯುನಿಟ್ ಎಂದು ಪರಿಗಣಿಸಿ, ಎಂಟು ಗುತ್ತಿಗೆದಾರರನ್ನು ನೇಮಿಸಲಾಗಿದೆ. ಅವರು ಮರಗಳ ಜಾತಿ, ಸುತ್ತಳತೆ, ಚಿತ್ರಗಳನ್ನು ತಂತ್ರಾಂಶದಲ್ಲಿ ನಮೂದಿಸಿ ಗಣತಿ ನಡೆಸಲಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ ಸ್ವಾಮಿ ತಿಳಿಸಿದ್ದಾರೆ.
198 ವಾರ್ಡ್‌ಗಳಲ್ಲಿ ಮರಗಣತಿ ಕಾರ್ಯ ಪ್ರಗತಿಯಲ್ಲಿದ್ದು, ಇದುವರೆಗೂ ಸುಮಾರು 1,43,100 ಮರಗಳನ್ನು ಗುರುತಿಸಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಗಣತಿ ಮುಗಿಯಲಿದೆ ಎಂದು ಹೇಳಿದರು.