ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಸಾಯಿಲ್ ಸ್ಟೆಬಿಲೈಸೇಷನ್ ಟೆಕ್ನಾಲಜಿ (ಮಣ್ಣು ಸ್ಥಿರೀಕರಣ ತಂತ್ರಜ್ಞಾನ) ಬಳಸಿ ₹40 ಕೋಟಿ ವೆಚ್ಚದಲ್ಲಿ 15 ಕಿ.ಮೀ ರಸ್ತೆ ನಿರ್ಮಿಸಲು ಬಿಡಿಎ ನಿರ್ಧರಿಸಿದೆ.
ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ನಿಂದ ಕಾಚೋಹಳ್ಳಿವರೆಗಿನ ರಸ್ತೆ ನಿರ್ಮಾಣಕ್ಕೆ ಮಂಗಳವಾರ ಚಾಲನೆ ನೀಡಿದರು.
ಜರ್ಮನ್ ಮೂಲದ ಐದು ಯಂತ್ರಗಳನ್ನು ಬಳಸಿ ಈ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತದೆ. ಈ ಯಂತ್ರಗಳ ಸಹಾಯದಿಂದ ದಿನಕ್ಕೆ ಸುಮಾರು ಅರ್ಧ ಕಿಲೋಮೀಟರ್ ಉದ್ದದ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಾಮಾನ್ಯ ಡಾಂಬರು ರಸ್ತೆಗಿಂತ ಈ ರಸ್ತೆ ಗಟ್ಟಿಮುಟ್ಟಾಗಿರಲಿದ್ದು, ಇದಕ್ಕೆ ಕಾಂಕ್ರೀಟ್ ರಸ್ತೆಗೆ ಆಗುವುದಕ್ಕಿಂತ ಕಡಿಮೆ ವೆಚ್ಚವಾಗಲಿದೆ. ಜನವರಿ ಅಂತ್ಯಕ್ಕೆ ಕಾಮಗಾರಿ ಮುಗಿಯಲಿದೆ. ಪ್ರಾಯೋಗಿಕವಾಗಿ ಈ ರಸ್ತೆ ನಿರ್ಮಿಸಿ, ಅದರ ಕಾರ್ಯಕ್ಷಮತೆ ಪರಿಶೀಲಿಸದ ನಂತರ ಇತರೆ ರಸ್ತೆಗಳನ್ನೂ ಇದೇ ತಂತ್ರಜ್ಞಾನದಲ್ಲಿ ನಿರ್ಮಿಸಲು ಯೋಜಿಸಲಾಗುವುದು ಎಂದು ಹೇಳಿದರು.
ಬಿಡಿಎ ಎಂಜಿನಿಯರ್ ಸದಸ್ಯ ಶಾಂತರಾಜಣ್ಣ, ಎಂಜಿನಿಯರ್‌ಗಳಾದ ಸುಷ್ಮಾ, ಸುರೇಶ್, ಪ್ರಕಾಶ್ ಇದ್ದರು.
ಟೆಕ್ನಾಲಜಿ ಏನು?
ಒಂದು ಅಡಿ ಆಳದವರೆಗೆ ಡಾಂಬರ್, ಜಲ್ಲಿ ಮತ್ತು ಮಣ್ಣನ್ನು ಜರ್ಮನ್‌ನಿಂದ ತರಿಸಿರುವ ಯಂತ್ರಗಳಿಂದ ಪುಡಿ ಮಾಡಿ ಪೇಸ್ಟ್ ರೀತಿಯಲ್ಲಿ ಮಾರ್ಪಡಿಸಿ ಅದಕ್ಕೆ ಸಿಮೆಂಟ್, ರಾಸಾಯನಿಕ ಮತ್ತು ನೀರನ್ನು ಸೇರಿಸಿ ಮಣ್ಣನ್ನು ಸ್ಥಿರೀಕರಿಸಲಾಗುತ್ತದೆ. ಇದನ್ನು ಮೂರು ದಿನ ಕ್ಯೂರಿಂಗ್ ಮಾಡಲಾಗುತ್ತದೆ. ಅದರ ಮೇಲೆ ಜಿಯೋ ಟೆಕ್ಸ್‌ಟೈಲ್‌ನ ತೆಳುವಾದ ಪ್ಲಾಸ್ಟಿಕ್ ಶೀಟ್ ಹಾಕಲಾಗುತ್ತದೆ. ಅದರ ಮೇಲೆ ಡಾಂಬರ್ ಹಾಕಲಾಗುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.