ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಕ್ಕಿ ಮಗನ ಹತ್ಯೆ: ತಂದೆ ಬಂಧನ

* ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ * ಗುಪ್ತಾಂಗದ ಬಳಿ ತಾಗಿದ್ದ ಗುಂಡು
Published 26 ಜನವರಿ 2024, 14:14 IST
Last Updated 26 ಜನವರಿ 2024, 14:14 IST
ಅಕ್ಷರ ಗಾತ್ರ

ಬೆಂಗಳೂರು: ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ನರ್ತನ್ ಬೋಪಣ್ಣ (35) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ತಂದೆ ಸುರೇಶ್ (58) ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಕರೇಕಲ್ಲು ಪ್ರದೇಶದ 2ನೇ ಅಡ್ಡರಸ್ತೆಯಲ್ಲಿರುವ ಮನೆಯಲ್ಲಿ ಗುರುವಾರ ಮಧ್ಯಾಹ್ನ ಈ ಕೃತ್ಯ ನಡೆದಿದೆ. ಗುಪ್ತಾಂಗದ ಬಳಿ ಗುಂಡು ತಾಗಿ ತೀವ್ರ ಗಾಯಗೊಂಡಿದ್ದ ನರ್ತನ್ ಬಸವೇಶ್ವರನಗರದ ಆಸ್ಪತ್ರೆಯಲ್ಲಿ ಸಂಜೆ ಮೃತಪಟ್ಟಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ತಂದೆ ಸುರೇಶ್‌ನನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಡಿಕೇರಿಯ ಸುರೇಶ್, ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಮಂಗಳೂರಿನಲ್ಲಿ ಹಲವು ವರ್ಷ ವಾಸವಿದ್ದ. ಮಕ್ಕಳ ವಿದ್ಯಾಭ್ಯಾಸಕ್ಕೆಂದು ಕೆಲ ವರ್ಷಗಳ ಹಿಂದೆಯಷ್ಟೇ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದ. ಇತ್ತೀಚೆಗೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದ. ಪತ್ನಿ ಹಾಗೂ ಮಗನ ಜೊತೆ ಸುರೇಶ್ ಸದ್ಯ ವಾಸವಿದ್ದ’ ಎಂದು ತಿಳಿಸಿದರು.

‘ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿ ಹಾಸಿಗೆ ಹಿಡಿದಿದ್ದರು. ಕೆಲ ಬ್ಯಾಂಕ್‌ಗಳಲ್ಲಿ ಭದ್ರತಾ ಸಿಬ್ಬಂದಿ ಕೆಲಸ ಮಾಡುತ್ತಿದ್ದ ಸುರೇಶ್, ಇತ್ತೀಚೆಗೆ ಕೆಲಸ ಬಿಟ್ಟಿದ್ದ. ಡಿಪ್ಲೊಮಾ ಪದವೀಧರ ನರ್ತನ್ ಎಲ್ಲಿಯೋ ಕೆಲಸಕ್ಕೆ ಹೋಗುತ್ತಿರಲಿಲ್ಲ. ತಾಯಿ ಆರೈಕೆ ಮಾಡುತ್ತಿದ್ದರು’ ಎಂದು ಹೇಳಿದರು.

ಹಣದ ವಿಚಾರಕ್ಕೆ ಗಲಾಟೆ: ‘ಆರೋಪಿ ಸುರೇಶ್, ಮದ್ಯವ್ಯಸನಿ ಎಂಬುದು ಗೊತ್ತಾಗಿದೆ. ನಿತ್ಯವೂ ಕುಡಿಯುತ್ತಿದ್ದ ಸುರೇಶ್, ಹಣ ಸಾಲದಿದ್ದಾಗ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಹಣ ನೀಡುವಂತೆ ಮಗನನ್ನು ಒತ್ತಾಯಿಸುತ್ತಿದ್ದ. ಇದೇ ವಿಚಾರಕ್ಕೆ ಜಗಳ ಆಗುತ್ತಿತ್ತು’ ಎಂದು ಪೊಲೀಸರು ತಿಳಿಸಿದರು.

‘ಗುರುವಾರ ಮಧ್ಯಾಹ್ನವೂ ತಂದೆ ಸುರೇಶ್ ಹಾಗೂ ಮಗ ನರ್ತನ್ ಬೋಪಣ್ಣ ನಡುವೆ ಜಗಳ ಶುರುವಾಗಿತ್ತು. ತಂದೆಯನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದ ಮಗ, ಹೊರಗಿನಿಂದ ಬೀಗ ಹಾಕಿದ್ದರು. ಅದೇ ಕೊಠಡಿಯಲ್ಲಿ ಪರವಾನಗಿ ಬಂದೂಕು ಇತ್ತು. ಆರೋಪಿ ಸುರೇಶ್, ಅದೇ ಬಂದೂಕಿನಿಂದ ಬಾಗಿಲಿಗೆ ಗುಂಡು ಹೊಡೆದಿದ್ದರು. ಹೊರಗಿದ್ದ ನರ್ತನ್ ಅವರ ಗುಪ್ತಾಂಗಕ್ಕೆ ಗುಂಡು ತಾಗಿ, ರಕ್ತ ಸೋರಲಾರಂಭಿಸಿತ್ತು’ ಎಂದು ಹೇಳಿದರು.

‘ಸಹೋದರಿಗೆ ಕರೆ ಮಾಡಿದ್ದ ನರ್ತನ್, ಗುಂಡು ತಾಗಿದ್ದ ವಿಷಯ ತಿಳಿಸಿದ್ದರು. ಸಹೋದರಿಯ ಸಂಬಂಧಿಕರು ಸ್ಥಳಕ್ಕೆ ಬಂದು ನರ್ತನ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

ನರ್ತನ್ ಬೋಪಣ್ಣ
ನರ್ತನ್ ಬೋಪಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT