ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ‘ಪತ್ರಿಕಾ ವಿತರಕರ’ ದಿನ: ಮುಂಜಾನೆಯ ಶ್ರಮ ಜೀವಿಗಳು...

Published 4 ಸೆಪ್ಟೆಂಬರ್ 2023, 0:30 IST
Last Updated 4 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

‘ಪತ್ರಿಕಾ ವಿತರಕರ’ ದಿನ ಇಂದು ಓದುಗರು ಹಾಗೂ ಸುದ್ದಿಮನೆಯ ಕೊಂಡಿಯಂತೆ ಕೆಲಸ ಮಾಡುವ ಪತ್ರಿಕಾ ವಿತರಕರ ಕೈಂಕರ್ಯವನ್ನು ಸ್ಮರಿಸುವ ದಿನ ಇಂದು. ಮುಂಜಾನೆಯ ಚಹಾದೊಂದಿಗೆ ಪತ್ರಿಕೆ ಓದುವಂತೆ ಮಾಡುವ ಇವರು ಎದುರಿಸುವ ಸಂಕಷ್ಟಗಳು ಹಲವು. ಮಳೆ, ಚಳಿ ಎನ್ನದೆಯೇ ಎಂತಹ ಪರಿಸ್ಥಿತಿಗೂ ಎದೆಗುಂದದೆ ಪ್ರತಿನಿತ್ಯವೂ ಬೆವರು ಸುರಿಸಿ  ತಮ್ಮ ಕಾಯಕ ನಿಷ್ಠೆ ತೋರುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ.

***

ಬೆಂಗಳೂರು: ಸೂರ್ಯನ ಕಿರಣಗಳು ಭೂಮಿಗೆ ಮುತ್ತಿಕ್ಕುವ ಮುನ್ನವೇ ಇವರು ಪ್ರತಿನಿತ್ಯವೂ ಕಾಯಕಕ್ಕೆ ಹಾಜರು. ಮಳೆ, ಚಳಿ, ಗಾಳಿ ಇದ್ಯಾವುದನ್ನೂ ಲೆಕ್ಕಿಸುವುದಿಲ್ಲ. ಎಷ್ಟೇ ತಾಪತ್ರಯಗಳು ಎದುರಾದರೂ ಇವರು ಕಾಯಕವನ್ನು ಮರೆಯುವುದಿಲ್ಲ... – ಅವರೇ ದಿನ ಪತ್ರಿಕೆಗಳ ಬೆನ್ನೆಲುಬು ಪತ್ರಿಕಾ ವಿತರಕರು; ಮುಂಜಾನೆಯ ಕಾಯಕ ಜೀವಿಗಳು.

ನಗರದಲ್ಲಿ ಬಹುತೇಕರು ಎದ್ದೇಳುವ ಹೊತ್ತಿಗೆ ಸೇನಾನಿಗಳಂತೆ ಇವರೆಲ್ಲರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿರುತ್ತಾರೆ.

ಕೋವಿಡ್‌ನ ದುರಿತ ಸಮಯದಲ್ಲೂ ತಮ್ಮ ವೃತ್ತಿ ಮರೆಯಲಿಲ್ಲ. ಲಾಕ್‌ಡೌನ್‌ ನೆಪದಲ್ಲಿ ಎಲ್ಲರೂ ಮನೆಯಲ್ಲಿಯೇ ಉಳಿದರೂ ವಿತರಕರು ಮಾತ್ರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಲೇ ಯೋಧರಂತೆ ಕರ್ತವ್ಯ ನಿಭಾಯಿಸಿದರು. ನಿತ್ಯದ ನೈಜ ಸಂಗತಿಗಳನ್ನು ಮನೆಮನೆಗೆ ತಲುಪಿಸಿ ತಮ್ಮ ವೃತ್ತಿ ನಿಷ್ಠೆ ಮೆರೆದು ಮೆಚ್ಚುಗೆಗೆ ಪಾತ್ರರಾದರು.

‘ಸಿಲಿಕಾನ್‌ ಸಿಟಿ’ಯ ವಿಜಯನಗರ, ಇಂದಿರಾನಗರ, ಜಯನಗರ, ಹೆಬ್ಬಾಳ, ಜೆ.ಪಿ.ನಗರ, ಚಾಮರಾಜಪೇಟೆ, ಬಸವನಗುಡಿ, ಮೆಜೆಸ್ಟಿಕ್‌, ರಾಜಾಜಿನಗರ... ಹೀಗೆ ನಗರದ ಎಲ್ಲೆಡೆಯ ಮನೆಗಳಿಗೆ ನಿರಂತರ ಪತ್ರಿಕೆ ತಲುಪಿಸುವ ಕಾರ್ಯದಲ್ಲಿ ತೊಡಗುತ್ತಾರೆ.

ಬೆಳ್ಳಂಬೆಳಿಗ್ಗೆ ಕೆಲಸ ಆರಂಭಿಸುವ ಇವರು ದಿನಪತ್ರಿಕೆಗಳ ಜತೆ ತಮ್ಮ ಬದುಕು ರೂಪಿಸಿಕೊಂಡಿದ್ದಾರೆ. ಪತ್ರಿಕೆ ವಿತರಿಸುವ ಮೂಲಕ ಪ್ರಚಲಿತ ಘಟನೆಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿರುವ ವಿತರಕರ ಬದುಕು ಸಹ ಸುಧಾರಣೆ ಕಾಣಬೇಕಿದೆ.

ದಿನಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಹುಡುಗರು ವಿತರಕರಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಪತ್ರಿಕೆಗಳ ಬೆನ್ನೆಲುಬಾಗಿರುವ ಪತ್ರಿಕಾ ವಿತರಕರು ಎದುರಿಸುತ್ತಿರುವ ತಾಪತ್ರಯಗಳು ಸಾಕಷ್ಟಿವೆ. ವಿತರಕರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಘಟಿತರಾಗಿ, ತಮ್ಮ ಹಕ್ಕುಗಳಿಗೆ ಹೋರಾಟ ರೂಪಿಸಬೇಕು ಎಂದು ಸಂಘದ ಪ್ರತಿನಿಧಿಗಳು ಆಗ್ರಹಿಸುತ್ತಾರೆ.

‘ವಿಮಾ ಸೌಲಭ್ಯ ಕಲ್ಪಿಸಬೇಕು, ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು, ಕೆಲಸದ ವೇಳೆಯಲ್ಲಿ ಮೃತಪಟ್ಟರೆ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಬೇಕು, ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡಬೇಕು ಹಾಗೂ ಶೂನ್ಯ ಬಡ್ಡಿದರಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕೆಂದು ಬಹಳ ವರ್ಷಗಳಿಂದ ಹೋರಾಡುತ್ತಿದ್ದೇವೆ. ಆದರೆ, ಇನ್ನೂ ಬೇಡಿಕೆ ಈಡೇರಿಲ್ಲ’ ಎಂದು ಸಂಘದ ಪ್ರತಿನಿಧಿಗಳು ಹೇಳುತ್ತಾರೆ.

‘ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು. ಹಲವು ದಶಕಗಳ ಬೇಡಿಕೆಗೆ ಪರಿಹಾರ ದೊರೆಯದೆ ಬೇಡಿಕೆಯಾಗಿಯೇ ಉಳಿದಿವೆ’ ಎಂದು ಅಳಲು ತೋಡಿಕೊಳ್ಳುತ್ತಾರೆ.

ವಿಜಯನಗರದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುತ್ತಿರುವ ಪತ್ರಿಕಾ ವಿತರಕ ವೆಂಕಟರಾಮು.
ವಿಜಯನಗರದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುತ್ತಿರುವ ಪತ್ರಿಕಾ ವಿತರಕ ವೆಂಕಟರಾಮು.
ಚಾಮರಾಜಪೇಟೆಯ ಪತ್ರಿಕಾ ವಿತರಕ ರಮೇಶ್ ಅವರು ಮುಂಜಾನೆ ವಿವಿಧ ಪತ್ರಿಕೆಗಳನ್ನು ಬೇರ್ಪಡಿಸುತ್ತಿರುವುದು. ಪ್ರಜಾವಾಣಿ ಚಿತ್ರ/ ಪ್ರಶಾಂತ್‌ ಎಚ್‌.ಜಿ.
ಚಾಮರಾಜಪೇಟೆಯ ಪತ್ರಿಕಾ ವಿತರಕ ರಮೇಶ್ ಅವರು ಮುಂಜಾನೆ ವಿವಿಧ ಪತ್ರಿಕೆಗಳನ್ನು ಬೇರ್ಪಡಿಸುತ್ತಿರುವುದು. ಪ್ರಜಾವಾಣಿ ಚಿತ್ರ/ ಪ್ರಶಾಂತ್‌ ಎಚ್‌.ಜಿ.
ಭುವನೇಶ್ವರ ನಗರದಲ್ಲಿ ಪತ್ರಿಕೆಗಳನ್ನು ಜೋಡಿಸುವ ಕಾರ್ಯದಲ್ಲಿ ನಿರತರಾಗಿರುವ ಸಿದ್ದಲಿಂಗಪ್ಪ ಮತ್ತು ತಂಡ. ಪ್ರಜಾವಾಣಿ ಚಿತ್ರ/ಕಿಶೋರ್‌ಕುಮಾರ್ ಬೋಳಾರ್‌
ಭುವನೇಶ್ವರ ನಗರದಲ್ಲಿ ಪತ್ರಿಕೆಗಳನ್ನು ಜೋಡಿಸುವ ಕಾರ್ಯದಲ್ಲಿ ನಿರತರಾಗಿರುವ ಸಿದ್ದಲಿಂಗಪ್ಪ ಮತ್ತು ತಂಡ. ಪ್ರಜಾವಾಣಿ ಚಿತ್ರ/ಕಿಶೋರ್‌ಕುಮಾರ್ ಬೋಳಾರ್‌
ಪ್ಯಾಲೇಸ್ ಗುಟ್ಟಹಳ್ಳಿ ಬಳಿ ಪತ್ರಿಕೆ ವಿತರಿಸುತ್ತಿರುವ ಕೆ.ವೆಂಕಟೇಶ್. – ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್‌
ಪ್ಯಾಲೇಸ್ ಗುಟ್ಟಹಳ್ಳಿ ಬಳಿ ಪತ್ರಿಕೆ ವಿತರಿಸುತ್ತಿರುವ ಕೆ.ವೆಂಕಟೇಶ್. – ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್‌

ಪತ್ರಿಕಾ ವಿತರಕರು ತಮ್ಮ ಜೀವನಾನುಭವಗಳನ್ನು ‘ಪ್ರಜಾವಾಣಿ’ ಮುಂದೆ ಇಟ್ಟಿದ್ದಾರೆ.  

‘ಬದುಕು ಕೊಟ್ಟ ಪತ್ರಿಕೆ’

38 ವರ್ಷಗಳಿಂದ ಏಜೆಂಟ್‌ ವೃತ್ತಿ ಮಾಡುತ್ತಿದ್ದೇನೆ. ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ಹೆರಾಲ್ಡ್‌’ ಪತ್ರಿಕೆಯಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ. ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ನಿರ್ವಹಣೆಗೆ ಪತ್ರಿಕೆ ನೆರವಾಗಿದೆ. ಇದೇ ನನಗೆ ಮುಖ್ಯವೃತ್ತಿ. ಇದನ್ನು ಹೊರತು ಪಡಿಸಿ ಬೇರೆ ಯಾವ ಕೆಲಸವನ್ನೂ ನಾನು ಮಾಡಲೇ ಇಲ್ಲ. ಈಗಲೂ ಮುಂಜಾನೆ 3.45ಕ್ಕೆ ಎದ್ದು ಚಾಮರಾಜಪೇಟೆ ವಿಶಾಲ್‌ ಮಾರ್ಟ್‌ ಬಳಿಗೆ 4.15ಕ್ಕೆ ತಲುಪಿರುತ್ತೇನೆ. ಇದು ಅಭ್ಯಾಸವಾಗಿ ಹೋಗಿದೆ. ಕೋವಿಡ್‌ ಬಳಿಕ ಈ ವೃತ್ತಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದ್ದರೂ ನೆಮ್ಮದಿ ಇದೆ.

-ಬಿ.ರಮೇಶ್‌ ಚಾಮರಾಜಪೇಟೆ

**

‘ಪತ್ರಿಕೆ ಹಾಕುವ ಕೆಲಸದಿಂದ ಏಜೆಂಟ್‌ ತನಕ...’

ಬ್ಯಾಟರಾಯಪುರದಲ್ಲಿ ಅಕ್ಕನ ಮನೆಗೆ ವಿದ್ಯಾಭ್ಯಾಸಕ್ಕೆಂದು ಬಂದವನು ನಾನು. 1986ರಲ್ಲಿ ಸೈಕಲ್‌ನಲ್ಲಿ ತೆರಳಿ ಮನೆ ಮನೆಗೆ ಪತ್ರಿಕೆ ಹಂಚುವ ಕೆಲಸ ಆರಂಭಿಸಿದ್ದೆ. ಅದಾದ ಮೇಲೆ ಆಸಕ್ತಿ ಬೆಳೆದು 2000ನೇ ಇಸವಿಯಲ್ಲಿ ಸ್ವಂತ ಏಜೆನ್ಸಿ ತೆಗೆದುಕೊಂಡೆ. ‘ಪ್ರಜಾವಾಣಿ’ಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದೇನೆ. ಪತ್ರಿಕಾ ವಿತರಕರಿಗೆ ವಿಮಾ ಸೌಲಭ್ಯ ನೀಡಬೇಕು.

-ಎಂ.ರಾಜಣ್ಣ, ಬ್ಯಾಟರಾಯನಪುರ

**

‘ನಮ್ಮತ್ತ ಸರ್ಕಾರ ಗಮನ ಹರಿಸಲಿ...’ ಮನೆ ಮನೆಗೆ ಪತ್ರಿಕೆ ಹಾಕುವ ಹುಡುಗರು ಸಿಗುತ್ತಿಲ್ಲ. ಹಿಂದೆ ಸ್ವಯಂ ಪ್ರೇರಣೆಯಿಂದ ಹುಡುಗರೆ ಕೆಲಸಕ್ಕೆ ಬರುತ್ತಿದ್ದರು. ಇದು ಸಮಸ್ಯೆಯಿದೆ. ಅದನ್ನು ಹೊರತುಪಡಿಸಿದರೆ ಬಹಳ ಉತ್ತಮ ವೃತ್ತಿ ಇದಾಗಿದೆ. 25 ವರ್ಷದಿಂದ ಏಜೆಂಟ್ ಕೆಲಸ ಮಾಡುತ್ತಿದ್ದೇನೆ. ಸರ್ಕಾರ ಯಾವ ಸೌಲಭ್ಯವನ್ನೂ ಕಲ್ಪಿಸಿಲ್ಲ.

-ಪಿ.ದಾಮೋಧರ್‌, ಕಾಕ್ಸ್‌ಟೌನ್

**

ಆರೋಗ್ಯ ಸೌಲಭ್ಯ ಕಲ್ಪಿಸಲಿ 1988ರಲ್ಲಿ ಚಿಪ್ರಿ ಎಂಬುವರು ನಡೆಸುತ್ತಿದ್ದ ಏಜೆನ್ಸಿಯಲ್ಲಿ ಪತ್ರಿಕಾ ವಿತರಣಾ ಕೆಲಸಕ್ಕೆ ಸೇರಿಕೊಂಡಿದ್ದೆ. ಅಂದು ತಿಂಗಳಿಗೆ ₹ 100 ಸಿಗುತ್ತಿತ್ತು. ಅದಾದ ಮೇಲೆ ನಾನೇ ಪ್ರತ್ಯೇಕವಾಗಿ ಏಜೆನ್ಸಿ ತೆಗೆದುಕೊಂಡೆ. ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಇಂದು ತಿಂಗಳಿಗೆ ₹ 4ರಿಂದ ₹ 5 ಸಾವಿರ ನೀಡಿದರೂ ಪತ್ರಿಕೆ ವಿತರಿಸಲು ಹುಡುಗರು ಸಿಗುವುದಿಲ್ಲ. ಪತ್ರಿಕೆ ವಿತರಣೆ ಮಾಡುವುದರಿಂದ ವಿದ್ಯಾಭ್ಯಾಸಕ್ಕೆ ಸ್ವಲ್ಪ ಹಣ ಸಿಗುತ್ತದೆ. ಆದರೆ ಹುಡುಗರಲ್ಲಿ ಆಸಕ್ತಿ ಇಲ್ಲ. ಸರ್ಕಾರವು ಏಜೆಂಟರ ಆರೋಗ್ಯಕ್ಕೆ ಸೌಲಭ್ಯ ಕಲ್ಪಿಸುವ ಅಗತ್ಯವಿದೆ.

-ಬಿ.ರಾಘವಪ್ಪ, ಕೆಆರ್‌ ಪುರಂ

**

ಸರ್ಕಾರ ವಿತರಕರ ಕಷ್ಟಕ್ಕೆ ಸ್ಪಂದಿಸಲಿ ದಿನಪತ್ರಿಕೆಗಳ ವಿತರಣೆಯಿಂದಲೇ ಜೀವನವನ್ನು ಕಟ್ಟಿಕೊಂಡಿದ್ದೇನೆ. ನನ್ನ ಮಕ್ಕಳಿಬ್ಬರನ್ನು ಎಂಜಿನಿಯರಿಂಗ್‌ ಓದಿಸುತ್ತಿದ್ದೇನೆ. ಕಳೆದ 38 ವರ್ಷಗಳಿಂದ ಇದೇ ವೃತ್ತಿ ನಂಬಿಕೊಂಡು ಜೀವನ ನಡೆಸುತ್ತಿದ್ದೇನೆ. ವೃತ್ತಿ ಉತ್ತಮವಾಗಿದೆ. ಸರ್ಕಾರ ಪತ್ರಿಕಾ ವಿತರಕರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಮಾಡಬೇಕು.

–ಸಿದ್ದಲಿಂಗಪ್ಪ ಆರ್., ಪತ್ರಿಕಾ ವಿತರಕ, ಬಸವೇಶ್ವರನಗರ

**

ಸರ್ಕಾರಿ ನೌಕರಿಯ ಜತೆಗೆ ಪತ್ರಿಕೆಗಳ ವಿತರಣೆ 1976ರಿಂದಲೇ ಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದೇನೆ. ‘ಪ್ರಜಾವಾಣಿ’ಯ ಒಂದು ತಿಂಗಳ ಬಿಲ್‌ ₹ 8.50 ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಯ ಒಂದು ತಿಂಗಳ ಬಿಲ್‌ ₹ 10.80 ಬರುತ್ತಿತ್ತು. 1996ರಲ್ಲಿ ನಾನು ಬಿಎಸ್‌ಎನ್‌ಎಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೆ. ಆದರೂ ಪತ್ರಿಕೆಗಳ ವಿತರಣೆ ಕೆಲಸ ಬಿಡಲಿಲ್ಲ. ಕೋವಿಡ್‌ ಸಂದರ್ಭದಲ್ಲೂ ನಿರ್ಭೀತಿಯಿಂದ ಪತ್ರಿಕೆಗಳನ್ನು ವಿತರಿಸಿದ್ದೇವೆ. ಪತ್ರಿಕಾ ವಿತರಿಕರಿಗೆ ಸರ್ಕಾರ ವಿಮಾ ಸೌಲಭ್ಯ ಕಲ್ಪಿಸಬೇಕು.

– ವೆಂಕಟೇಶ್, ಪತ್ರಿಕಾ ವಿತರಕ, ಜೆ.ಪಿ. ನಗರ

**

ಜೀವನ ಕೊಟ್ಟ ಪೇಪರ್‌ ಏಜೆನ್ಸಿ ಕಳೆದ 50 ವರ್ಷಗಳಿಂದ ಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದೇನೆ. ಪೇಪರ್‌ ಏಜೆನ್ಸಿ ಮೂಲಕವೇ ಜೀವನ ಕಟ್ಟಿಕೊಂಡಿದ್ದೇನೆ. ಜತೆಗೆ ಇಎಸ್‌ಐ ಆಸ್ಪತ್ರೆಯಲ್ಲಿ ವಾರ್ಡ್‌ ಬಾಯ್‌ ಆಗಿ ಕೆಲಸಕ್ಕೆ ಸೇರಿಕೊಂಡಿದ್ದೇನೆ. ಪತ್ರಿಕಾ ವಿತರಕರಿಗೆ ಅಪಘಾತ ಸಂಭವಿಸಿದಾಗ ಪತ್ರಿಕಾ ವಿತರಕರ ಸಂಘದಿಂದ ಪರಿಹಾರ ನೀಡಲಾಗುತ್ತಿದೆ. ಸರ್ಕಾರವೂ ಹೆಚ್ಚಿನ ಸೌಲಭ್ಯ ಕಲ್ಪಿಸಲಿ.

– ನಿಂಗಪ್ಪ, ಪತ್ರಿಕಾ ವಿತರಕ, ಮಹಾಲಕ್ಷ್ಮಿ ಲೇಔಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT