ಬುಧವಾರ, ಅಕ್ಟೋಬರ್ 20, 2021
28 °C
‘ಬಡ್ತಿ ಬೇಡ’ ಎಂಬ ಕೋರಿಕೆ ಮನ್ನಿಸದ ಸರ್ಕಾರ * ಟೆಂಡರ್‌ ಕಡತಗಳ ಹೊಣೆ ಇನ್ನು ಪ್ರಧಾನ ಎಂಜಿನಿಯರ್‌ಗೆ

ಬಡ್ತಿ ಬೇಡ ಅಂದ್ರೂ ಬಿಬಿಎಂಪಿ ಅಧಿಕಾರಿಗೆ ಬಡ್ತಿ ನೀಡಿದ ಸರ್ಕಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನನಗೆ ಪ್ರಧಾನ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡದಿರಿ’ ಎಂಬ ಪೂರ್ವ ವಲಯದ ಮುಖ್ಯ ಎಂಜಿನಿಯರ್‌ ಎಸ್‌.ಪ್ರಭಾಕರ್‌ ಅವರ ಕೋರಿಕೆಯನ್ನು ಸರ್ಕಾರ ಮನ್ನಿಸಿಲ್ಲ. ಅವರಿಗೆ ಪ್ರಧಾನ ಎಂಜಿನಿಯರ್‌ ಆಗಿ ಸೋಮವಾರ ಬಡ್ತಿ ನೀಡಲಾಗಿದೆ. ಇನ್ನು ಮೂವರು ಸೂಪರಿಂಟೆಂಡಿಂಗ್‌ ಎಂಜಿನಿಯರ್‌ಗಳಿಗೆ ಮುಖ್ಯ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡಿ ನಗರಾಭಿವೃದ್ಧಿ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ಪ್ರಧಾನ ಎಂಜಿನಿಯರ್‌ ಸಿದ್ದೇಗೌಡ ಅವರು 2021ರ ಮೇ 31ರಂದು ನಿವೃತ್ತರಾದ ಬಳಿಕ ಪ್ರಭಾಕರ್ ಅವರಿಗೆ ಪ್ರಭಾರ ಪ್ರಧಾನ ಎಂಜಿನಿಯರ್‌ ಹೊಣೆ ವಹಿಸಲಾಗಿತ್ತು. ಈ  ಹುದ್ದೆಗೆ ಅವರಿಗೇ ಬಡ್ತಿ ನೀಡುವ ಪ್ರಸ್ತಾವ ಸಿದ್ಧವಾಗಿತ್ತು. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರಿಗೆ ಇದೇ 16ರಂದು ಪತ್ರ ಬರೆದಿದ್ದ ಪ್ರಭಾಕರ್‌, ‘ತಂದೆ ವಯೋವೃದ್ಧರಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಚಿಕಿತ್ಸೆ ಹಾಗೂ ಆರೈಕೆ ಬಗ್ಗೆ ಹೆಚ್ಚಿನ ಕ್ರಮ ವಹಿಸಬೇಕಾಗಿದೆ. ಹಾಗಾಗಿ ಪ್ರಧಾನ ಎಂಜಿನಿಯರ್‌ನಂತಹ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವುದು ಕಷ್ಟಸಾಧ್ಯ. ವೈಯಕ್ತಿಕ ಕಾರಣಗಳಿಂದಾಗಿ ನಾನು ಪೂರ್ವ ವಲಯದ ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತೇನೆ. ನನ್ನ ಬಡ್ತಿ ಪ್ರಸ್ತಾವನೆಯನ್ನು ಕೈಬಿಡಬೇಕು’ ಎಂದು ಕೋರಿದ್ದರು. ಈ ಬಗ್ಗೆ ‘ಪ್ರಜಾವಾಣಿ’ಯು ಸೋಮವಾರದ ಸಂಚಿಕೆಯಲ್ಲಿ ‘ಬೇಡವಾಯಿತು ಪಾಲಿಕೆ ಪ್ರಧಾನ ಎಂಜಿನಿಯರ್ ಹುದ್ದೆ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ಈ ಹಿಂದೆ ಟೆಂಡರ್‌ಗಳಿಗೆ ಸಂಬಧಿಸಿದ ಕಡತಗಳನ್ನೂ ಪ್ರಧಾನ ಎಂಜಿನಿಯರ್‌ ಗಮನಕ್ಕೆ ತರಬೇಕಾಗಿತ್ತು. ಅವರೂ ಅದಕ್ಕೆ ಸಂಬಂದಿಸಿದ ಟಿಪ್ಪಣಿಗಳನ್ನು ಬರೆಯುತ್ತಿದ್ದರು. ಕ್ರಮೇಣ ಪ್ರಧಾನ ಎಂಜಿನಿಯರ್‌ ಅವರ ಈ ಹೊಣೆಗಳನ್ನು ಮುಕ್ತಗೊಳಿಸಿದ ಬಗ್ಗೆ ಹಾಗೂ  ಕಾಮಗಾರಿಗಳ ಟೆಂಡರ್‌ ಕುರಿತ ಪ್ರಮುಖ ತೀರ್ಮಾನಗಳೆಲ್ಲವೂ ಮುಖ್ಯ ಎಂಜಿನಿಯರ್‌ ಹಂತದಲ್ಲೇ ನಡೆಯುತ್ತಿರುವ ಬಗ್ಗೆಯೂ ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು.

ಇದರ ಬೆನ್ನಲ್ಲೇ ನಗರಾಭಿವೃದ್ಧಿ ಇಲಾಖೆ ಪ್ರಭಾಕರ್‌ ಅವರ ಬಡ್ತಿ ಕುರಿತ ಆದೇಶ ಹೊರಡಿಸಿದೆ. ಜೊತೆಗೆ, ಟೆಂಡರ್‌ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಎಲ್ಲ ಕಡತಗಳು ಮತ್ತು ಮಾರ್ಪಾಡುಗಳಿಗೆ ಸಂಬಂಧಿಸಿದ ಕಡತಗಳನ್ನು ವ್ಯವಹರಿಸುವ ಹೊಣೆಯನ್ನೂ ಪ್ರಧಾನ ಎಂಜಿನಿಯರ್‌ಗೆ ವಹಿಸಲಾಗಿದೆ.

ಸೂಪರಿಂಟೆಂಡಿಗ್‌ ಎಂಜಿನಿಯರ್‌ ಬಿ.ಟಿ.ಮೋಹನಕೃಷ್ಣ, ಆರ್‌.ಸುಗುಣಾ ಹಾಗೂ ನರಸರಾಮರಾವ್‌ ಅವರಿಗೆ ಮುಖ್ಯಎಂಜಿನಿಯರ್‌ಹುದ್ದೆಗೆ ಬಡ್ತಿ ನೀಡಲಾಗಿದೆ. ಮೋಹನ ಕೃಷ್ಣ ಅವರಿಗೆ ಪೂರ್ವ ವಲಯ ಹಾಗೂ ನರಸರಾಮರಾವ್‌ ಅವರಿಗೆ ರಾಜರಾಜೇಶ್ವರಿನಗರ ವಲಯದ ಮುಖ್ಯ ಎಂಜಿನಿಯರ್‌ ಹೊಣೆ ವಹಿಸಲಾಗಿದೆ. ಸುಗುಣಾ ಅವರನ್ನು ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಆಗಿ ನಿಯುಕ್ತಿಗೊಳಿಸಲಾಗಿದೆ. ಆದರೆ, ಕೋರಮಂಗಲ ಕಣಿವೆ  (ಕೆ–100) ಅಭಿವೃದ್ಧಿ ಯೋಜನೆಯನ್ನು ರಾಜಕಾಲುವೆ ವಿಭಾಗದಿಂದ ಹೊರಗಿಡಲಾಗಿದೆ.

ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌ ಅವರನ್ನು ರಾಜಕಾಲುವೆ ವಿಭಾಗದ ಪ್ರಭಾರ ಮುಖ್ಯ ಎಂಜಿನಿಯರ್‌ ಹೊಣೆಯಿಂದ ಮುಕ್ತಗೊಳಿಸಲಾಗಿದೆ. ಆದರೆ, ಕೋರಮಂಗಲ ಕಣಿವೆ ಅಭಿವೃದ್ಧಿ ಯೋಜನೆಯ ಹೊಣೆಯನ್ನು ಪ್ರಹ್ಲಾದ್‌ ಅವರಿಗೆ ವಹಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು