ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೌಲ್ಯಮಾಪನದಲ್ಲಿ ಲೋಪದ ಆರೋಪ

Published 25 ಮೇ 2024, 15:07 IST
Last Updated 25 ಮೇ 2024, 15:07 IST
ಅಕ್ಷರ ಗಾತ್ರ

ಬೆಂಗಳೂರು: ‘ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನದಲ್ಲಿ ಸಾಕಷ್ಟು ಲೋಪವಾಗಿದ್ದು, ಸರಿ ಉತ್ತರಗಳಿಗೂ ಅಂಕ ಕಡಿತ ಮಾಡಲಾಗಿದೆ. ಉತ್ತರ ಪತ್ರಿಕೆಯ ಛಾಯಾ ಪ್ರತಿ ಪರಿಶೀಲನೆಯಿಂದ ಇದು ದೃಢಪಟ್ಟಿದೆ’ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ದೂರಿದರು. 

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೋಷಕ ವೇಣುಗೋಪಾಲ್, ‘ನನ್ನ ಮಗ ಆಕಾಶ್‌ಗೆ ಎಸ್ಸೆಸ್ಸೆಲ್ಸಿ ವಿಜ್ಞಾನ ವಿಷಯದಲ್ಲಿ ಕೇವಲ 5 ಅಂಕ ನೀಡಲಾಗಿತ್ತು. ಉಳಿದ ವಿಷಯಗಳಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದನು. ಉತ್ತರ ಪತ್ರಿಕೆಯ ಛಾಯಾಪ್ರತಿ ತರಿಸಿದಾಗ ಅದರಲ್ಲಿ 70 ಅಂಕ ನಮೂದಿಸಲಾಗಿತ್ತು. ಅಂತಿಮ ಫಲಿತಾಂಶ ಪಟ್ಟಿಯಲ್ಲಿ 5 ಅಂಕ ದಾಖಲಿಸಿ, ಅನುತ್ತೀರ್ಣ ಎಂದು ನಮೂದಿಸಲಾಗಿದೆ. ಈ ನಡುವೆ ಮಗ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಈ ಪ್ರಮಾದ ಎಸಗಿದವರ ವಿರುದ್ಧ ಶಿಕ್ಷಣ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

ಖಾಸಗಿ ಶಾಲೆಯೊಂದರ ವಿದ್ಯಾರ್ಥಿ ಕುಶಾಲ್ ಆರ್., ‘ಉತ್ತರ ಪತ್ರಿಕೆಯ ಛಾಯಾಪ್ರತಿಯನ್ನು ಕೀ ಉತ್ತರ ಪತ್ರಿಕೆ ಜತೆಗೆ ಹೋಲಿಸಿ ನೋಡಿದಾಗ ಗಣಿತ ವಿಷಯದಲ್ಲಿ ನನಗೆ 51 ಅಂಕಗಳು ಬರಬೇಕಿದೆ. ಆದರೆ, ಉತ್ತರ ಪತ್ರಿಕೆಯಲ್ಲಿ 41 ಅಂಕ ಎಂದು ನಮೂದಿಸಲಾಗಿದೆ. ಅನಗತ್ಯವಾಗಿ 10 ಅಂಕಗಳನ್ನು ಕಡಿಮೆ ಮಾಡಿರುವುದು ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ತೊಡಕಾಗಲಿದೆ. ನಾನು ಬಯಸಿದ ಶಾಲೆಯಲ್ಲಿ ದಾಖಲಾತಿ ಸಿಗುತ್ತಿಲ್ಲ’ ಎಂದು ನೋವು ತೋಡಿಕೊಂಡರು.

ಖಾಸಗಿ ಶಾಲೆಯೊಂದರ ಶಿಕ್ಷಕಿ ರೇಖಾ, ‘ಈ ಹಿಂದೆ ಪ್ರತಿ ದಿನ 15 ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಪ್ರತಿ ದಿನ 30 ಪತ್ರಿಕೆಗಳ ಮೌಲ್ಯಮಾಪನ ಮಾಡಬೇಕು ಎಂಬ ಗುರಿ ನಿಗದಿಪಡಿಸಲಾಗಿತ್ತು. ಇದರಿಂದಾಗಿ ಮೌಲ್ಯಮಾಪಕರು ಅತೀವ ಒತ್ತಡಕ್ಕೆ ಸಿಲುಕಿಕೊಂಡು ಸಾಕಷ್ಟು ಎಡವಟ್ಟುಗಳನ್ನು ಮಾಡಿದ್ದಾರೆ. ನನ್ನ ಶಾಲೆಯ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಛಾಯಾಪ್ರತಿ ಪರಿಶೀಲಿಸಿದಾಗ ಮೌಲ್ಯಮಾಪನ ಸರಿಯಾಗಿ ನಡೆದಿಲ್ಲ ಎಂಬುದು ಗಮಕ್ಕೆ ಬಂದಿದೆ’ ಎಂದು ಹೇಳಿದರು.

‘ಗಣಿತ ವಿಷಯದಲ್ಲಿ ಪ್ರತಿ ಹಂತಕ್ಕೂ ಅಂಕ ನಿಗದಿ ಆಗಿರುತ್ತದೆ. ಆದರೆ, ಹಂತಕ್ಕೆ ಅನುಗುಣವಾಗಿ ಅಂಕ ನೀಡಿಲ್ಲ. ಅಂಕ ಕಡಿತ ಮಾಡುವಾಗ ಉತ್ತರ ಪತ್ರಿಕೆಯಲ್ಲಿ ತಪ್ಪಾದ ಭಾಗಕ್ಕೆ ಅಡಿಗೆರೆ, ಸುತ್ತು ಅಥವಾ ಪ್ರಶ್ನಾ ಚಿಹ್ನೆ ಹಾಕಿಲ್ಲ. ಅಂಕಗಳನ್ನು ಒಟ್ಟುಗೂಡಿಸುವಾಗ ಮತ್ತು ನಮೂದಿಸುವಾಗ ಸಾಕಷ್ಟು ಲೋಪಗಳಾಗಿವೆ’ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT