ಬೆಂಗಳೂರು: ‘ಬೆಂಗಳೂರು ಧರ್ಮಪ್ರಾಂತ್ಯದ ಚರ್ಚ್‌ಗಳಲ್ಲಿ ಕನ್ನಡವನ್ನು ತಿರಸ್ಕಾರದಿಂದ ನೋಡುವ ಕಾಲದಲ್ಲಿ ಧರ್ಮಗುರು ಸ್ಟ್ಯಾನಿ ಬ್ಯಾಪ್ಟಿಸ್ಟ್ ಅವರು ಕನ್ನಡಕ್ಕಾಗಿ ನಿರಂತರ ಹೋರಾಟ ನಡೆಸಿದ್ದಲ್ಲದೇ, ಬೈಬಲ್ ಗ್ರಂಥವನ್ನೂ ಕನ್ನಡದಲ್ಲಿ ಪ್ರಕಟಿಸಿದ್ದರು’ ಎಂದು ಲೇಖಕಿ ರೀಟಾರೀನಿ ತಿಳಿಸಿದರು.
ಅಖಿಲ ಕರ್ನಾಟಕ ಕೆಥೋಲಿಕ್ ಕ್ರೈಸ್ತರ ಕನ್ನಡ ಸಂಘ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಫಾ. ಸ್ಟ್ಯಾನಿ ಬ್ಯಾಪ್ಟಿಸ್ಟ್ ಸಂಸ್ಮರಣೆ ಮತ್ತು ಕನ್ನಡ ರಣಧೀರರಿಗೆ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಫ್ರೆಂಚ್ ಮಿಷನರಿಗಳ ಆಡಳಿತದ ವ್ಯಾಪ್ತಿಯಲ್ಲಿ ಬೆಂಗಳೂರು ಇತ್ತು. 1953ರಲ್ಲಿ ಬೆಂಗಳೂರು ಧರ್ಮಪ್ರಾಂತ್ಯ ಆರಂಭವಾಯಿತು. ಆದರೂ ಪಾಂಡಿಚೇರಿಯಿಂದಲೇ ಈ ಧರ್ಮಪ್ರಾಂತ್ಯವನ್ನು ನಿಯಂತ್ರಿಸಲಾಗುತ್ತಿತ್ತು. ಬೆಂಗಳೂರು ಕಂಟೋನ್ಮೆಂಟ್ ವ್ಯಾಪ್ತಿಯನ್ನು ಹೊರತುಪಡಿಸಿ ಈ ಧರ್ಮಪಾಂತ್ಯದಲ್ಲಿದ್ದವರೆಲ್ಲ ಕನ್ನಡಿಗರೇ ಆಗಿದ್ದರೂ, ಅವರನ್ನು ತಿರಸ್ಕಾರದಿಂದ ನೋಡಲಾಗುತ್ತಿತ್ತು. ಇಂಥ ಸನ್ನಿವೇಶದಲ್ಲಿ 1969ರಲ್ಲಿ ಸ್ಟ್ಯಾನಿ ಬ್ಯಾಪ್ಟಿಸ್ಟ್ ಆರಂಭಿಸಿದ ಚಳವಳಿ, 80ರ ದಶಕದಲ್ಲಿ ತೀವ್ರಹಂತ ತಲುಪಿತು. ಬೀದಿಗಿಳಿದು ಹೋರಾಟ ಮಾಡಲಾಯಿತು. ಇಲ್ಲಿನ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಬೆಂಬಲಿಸಿದರು’ ಎಂದು ನೆನಪು ಮಾಡಿಕೊಂಡರು.
ಹೋರಾಟದ ಫಲವಾಗಿ ಸ್ಟ್ಯಾನಿ ಬ್ಯಾಪ್ಟಿಸ್ಟ್ ಅವರಿಗೆ ನೆಮ್ಮದಿಯ ಜೀವನ ಸಿಗಲಿಲ್ಲ. ಎಲ್ಲಿಯೂ ನೆಲೆ ಕಂಡುಕೊಳ್ಳದಂತೆ ಮಾಡಲು ಬೇರೆ ಬೇರೆ ಚರ್ಚ್‌ಗಳಿಗೆ ನಿರಂತರ ವರ್ಗಾವಣೆ ಮಾಡಲಾಯಿತು. ಕೊನೆಗೆ ನೆಮ್ಮದಿಯ ಸಾವು ಕೂಡ ಸಿಗಲಿಲ್ಲ. ಅನಾರೋಗ್ಯ ಇದ್ದಾಗಲೂ ಉತ್ತಮ ಆಸ್ಪತ್ರೆ ಇಲ್ಲದ ಊರಿಗೆ ಕಳುಹಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಲೇಖಕಿ ಎಂ.ಎಸ್. ಆಶಾದೇವಿ ಮಾತನಾಡಿ, ‘ಆಧುನಿಕ ಕನ್ನಡಕ್ಕೆ ಅಡಿಪಾಯ ಹಾಕಿಕೊಟ್ಟವರು ಕ್ರೈಸ್ತರು. ಅದಕ್ಕಾಗಿ ಇಂದಿಗೂ ಫರ್ಡಿನೆಂಡ್ ಕಿಟೆಲ್, ಬಿ.ಎಲ್. ರೈಸ್ ಮುಂತಾದವರನ್ನು ಸ್ಮರಿಸಲಾಗುತ್ತಿದೆ’ ಎಂದು ತಿಳಿಸಿದರು.
ಕಮಲಾ ಹಂಪನಾ ಅವರನ್ನು ಸ್ಮರಿಸಿದ ಅವರು, ‘ಕಮಲಾ ಹಂಪನಾ ಸಂಶೋಧಕಿಯಾಗಿ, ಅಧ್ಯಾಪಕಿಯಾಗಿ, ಗೃಹತಪಸ್ವಿಯಾಗಿ (ಗೃಹಿಣಿ) ನಿಭಾಯಿಸಿದ ರೀತಿ ಇಂದಿನ ಮಹಿಳೆಯರಿಗೆ ಮಾದರಿಯಾದುದು. ಜೀವನ ಪ್ರೀತಿ ಮತ್ತು ಮನುಷ್ಯ ಪ್ರೀತಿ ಅವರ ಮೂಲಧಾತುವಾಗಿತ್ತು’ ಎಂದರು.
ಹೋರಾಟಗಾರ ರಫಾಯಲ್ ರಾಜ್ ಮಾತನಾಡಿ, ‘ಕನ್ನಡ ಕೆಥೋಲಿಕರ ಹೋರಾಟ ಇನ್ನೂ ಮುಗಿದಿಲ್ಲ. ಉಳಿವಿಗಾಗಿ, ಅಸ್ತಿತ್ವಕ್ಕಾಗಿ ನಿತ್ಯ ಹೋರಾಟ ಮಾಡಬೇಕಿದೆ. ಸ್ಟ್ಯಾನಿ ಬ್ಯಾಪ್ಟಿಸ್ಟ್ ಕೊಂಕಣಿ ಮನೆಮಾತಿನವರಾದರೂ ಕನ್ನಡಕ್ಕಾಗಿ ಹೋರಾಡಿದವರು. ವ್ಯವಸ್ಥೆ ಅವರನ್ನು ನಡೆಸಿಕೊಂಡ ರೀತಿಯಲ್ಲಿಯೇ ಇಂದಿನ ಹೋರಾಟಗಾರರನ್ನೂ ನಡೆಸಿಕೊಳ್ಳುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸ್ಟ್ಯಾನಿ ಬ್ಯಾಪ್ಟಿಸ್ಟ್, ಕಮಲಾ ಹಂಪನಾ, ಫಾ.ಅಂತೋಣಿ ಪೀಟರ್, ಪ್ರೆಸಿಲ್ಲಾ ಪೆರೇರಾ, ಜೆ. ಸಂಧ್ಯಾಗಪ್ಪ, ಜ್ಞಾನಶೇಖರ್, ಎ.ಜಯಕುಮಾರ್, ಅಲ್ಬರ್ಟ್ ಡೇವಿಡ್, ವಿಜಯಕುಮಾರ್, ಶಾಂತರಾಜು, ಎಕ್ಸ್. ಪ್ರಜ್ವಲ್ ರೆಡ್ಡಿ ಅವರಿಗೆ ನಮನ ಸಲ್ಲಿಸಲಾಯಿತು. ಧರ್ಮಗುರು ಸೈಮನ್ ಬರ್ತಲೋಮ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾದ ಹಂಪ ನಾಗರಾಜಯ್ಯ, ಚಂದ್ರಮೋಹನ್, ವ.ಚ. ಚನ್ನೇಗೌಡ, ಆರೋಗ್ಯಸ್ವಾಮಿ, ಧರ್ಮಗುರು ಸ್ಟ್ಯಾನ್ಲಿ ಮರಿಯಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.