ಮಂಗಳವಾರ, ಜುಲೈ 5, 2022
21 °C

ಸಾಲು ಸಾಲು ಹಬ್ಬ: ಸಾವಿರ ರೂಪಾಯಿ ದಾಟಿದ ಕನಕಾಂಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಾಲು ಸಾಲು ಹಬ್ಬಗಳು ಜನರ ಮುಖದಲ್ಲಿ ಒಂದೆಡೆ ಸಂತಸ ಮೂಡಿಸಿದರೆ, ಮತ್ತೊಂದೆಡೆ ಹಬ್ಬದ ಆಚರಣೆಗೆ ಬೇಕಾದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದೆ. 

ಮೊನ್ನೆಯಷ್ಟೇ ಭೀಮನ ಅಮವಾಸ್ಯೆ ಮುಗಿದಿದೆ. ನಾಗರಪಂಚಮಿ, ವರಮಹಾಲಕ್ಷಿ ವ್ರತ, ಬಕ್ರೀದ್‌, ಗೌರಿ ಹಬ್ಬ, ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬಗಳು ಆಗಸ್ಟ್‌–ಸೆಪ್ಟೆಂಬರ್‌ನಲ್ಲಿ ಬರಲಿವೆ. ಹಬ್ಬಗಳಿಗೂ ಮುನ್ನವೇ ಕೆ.ಆರ್‌.ಮಾರುಕಟ್ಟೆ ಗ್ರಾಹಕರಿಂದ ತುಂಬಿ ತುಳುಕಾಡುತ್ತಿದೆ. ಮಾರುಕಟ್ಟೆಯಲ್ಲಿ ಭಾನುವಾರ ಕನಕಾಂಬರ ಹೂವು ಪ್ರತಿ ಕೆ.ಜಿಗೆ ₹1,200 ಹಾಗೂ ಸೇವಂತಿಗೆ ಹೂವು ಪ್ರತಿ ಕೆ.ಜಿಗೆ ₹350ರಿಂದ ₹400ಕ್ಕೆ ಮಾರಾಟವಾಗಿದೆ. ಗುಲಾಬಿ ₹200, ಪತ್ರೆ ₹200, ತುಳಸಿ ಒಂದು ಮೊಳಕ್ಕೆ ₹200, ಸಂಪಿಗೆ ₹120, ಚೆಂಡು ಹೂವು ₹100ರಂತೆ ಮಾರಾಟ ಆಗುತ್ತಿದೆ. 

ತರಕಾರಿಗಳಲ್ಲಿ ಕ್ಯಾರೆಟ್‌ ಪ್ರತಿ ಕೆ.ಜಿಗೆ ₹60ರಂತೆ ಮಾರಾಟ ಆಗುತ್ತಿದೆ. ಬಟಾಣಿ ₹80, ಆಲೂಗಡ್ಡೆ ₹60, ಹುರುಳಿ ಕಾಯಿ ₹40, ಬದನೆಕಾಯಿ, ಬೀಟ್‌ರೂಟ್‌ ಹಾಗೂ ಹೀರೇಕಾಯಿ ₹30ರಂತೆ ಮಾರಾಟವಾಯಿತು. 

ಹಣ್ಣುಗಳಲ್ಲಿ ದ್ರಾಕ್ಷಿ ದರ ಹೆಚ್ಚಾಗಿದ್ದು ಪ್ರತಿ ಕೆ.ಜಿಗೆ ₹200ರಷ್ಟಿದೆ. ಸೇಬು ₹130ರಿಂದ ₹150, ಸೀಬೆಕಾಯಿ ₹80, ದಾಳಿಂಬೆ ₹30, ಮೂಸಂಬಿ ₹60ರಂತೆ ಮಾರಾಟವಾಯಿತು. 

‘ಮಳೆಗಾಲವಾದ ಕಾರಣ ತರಕಾರಿಗಳ ಬೆಲೆ ಏರುಪೇರು ಕಂಡಿದೆ. ವರಮಹಾಲಕ್ಷ್ಮಿ ಹಬ್ಬ ಸಮೀಪಿಸುತ್ತಿರು
ವುದರಿಂದ ಗ್ರಾಹಕರು ಹೆಚ್ಚಾಗಿ ಮಾರುಕಟ್ಟೆಗೆ ಬರುತ್ತಿದ್ದಾರೆ. ಸೋಮವಾರದಿಂದ ಬೆಲೆ ಮತ್ತಷ್ಟು ಏರಲಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ವೆಂಕಟೇಶ್‌.

‘ಹಬ್ಬಕ್ಕಾಗಿ ಹೂವು, ತರಕಾರಿ, ಹಣ್ಣು ಖರೀದಿಸಲು ಮಾರುಕಟ್ಟೆಗೆ ಬಂದೆ. ಹಬ್ಬ ಇನ್ನೂ ನಾಲ್ಕೈದು ದಿನ ಇರುವುದರಿಂದ ಬೆಲೆ ಕಡಿಮೆ ಇರಬಹುದು ಎಂದು ಭಾವಿಸಿದ್ದೆ. ಆದರೆ, ಈಗಲೇ ದರ ಏರಿಕೆ ಆಗಿದೆ’ ಎಂದು ರಾಜರಾಜೇಶ್ವರಿ ನಗರ ನಿವಾಸಿ ವಿಮಲಾ ತಿಳಿಸಿದರು. 

**

ಹಬ್ಬಗಳಿಗೆ ಹಣ್ಣು ಹಾಗೂ ಹೂವು ಅಗತ್ಯ. ಆಷಾಢದಲ್ಲಿ ವ್ಯಾಪಾರ ಸರಿಯಾಗಿ ನಡೆಯದೇ ನಷ್ಟ ಅನುಭವಿಸಿದೆವು. ಈ ತಿಂಗಳಲ್ಲಿ ತಕ್ಕಮಟ್ಟಿನ ಲಾಭ ಆಗುವ ನಿರೀಕ್ಷೆ ಇದೆ
- ಚಂದಿರಮ್ಮ, ಹಣ್ಣಿನ ವ್ಯಾಪಾರಿ

**

ಪ್ರತಿವರ್ಷ ಹಬ್ಬಕ್ಕೂ ಒಂದು ವಾರ ಮುಂಚಿತವಾಗಿ ಹೂವು, ತರಕಾರಿ ಖರೀದಿ ಮಾಡುತ್ತಿದ್ದೆ. ಈ ಬಾರಿ ಹಬ್ಬಕ್ಕೂ ಮೊದಲೇ ಬೆಲೆ ಏರಿಕೆಯಾಗಿದೆ
- ಶ್ಯಾಮ್‌, ಸಂಪಂಗಿ ರಾಮನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು