ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ | 4 ತಿಂಗಳು; 430 ಕೊಲೆ, 198 ಅತ್ಯಾಚಾರ

ಎನ್‌ಸಿಆರ್‌ಬಿ ಅಂಕಿ– ಅಂಶ l ಲೈಂಗಿಕ ದೌರ್ಜನ್ಯ, ಪೋಕ್ಸೊ ಪ್ರಕರಣ ಮಾಹಿತಿ
Published 17 ಮೇ 2024, 20:31 IST
Last Updated 17 ಮೇ 2024, 20:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಈ ವರ್ಷದ ಜನವರಿಯಿಂದ ಏಪ್ರಿಲ್‌ 30ರವರೆಗೆ ಸುಮಾರು 430 ಕೊಲೆಗಳು ಹಾಗೂ 198 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

ಹುಬ್ಬಳ್ಳಿಯ ವಿದ್ಯಾರ್ಥಿನಿಯರಾದ ನೇಹಾ ಹಿರೇಮಠ, ಅಂಜಲಿ ಅಂಬಿಗೇರ, ಸೋಮವಾರಪೇಟೆ ತಾಲ್ಲೂಕಿನ ಬಾಲಕಿ ಮೀನಾ ಸೇರಿದಂತೆ ಹಲವು ಕೊಲೆ ಪ್ರಕರಣಗಳು ಈಚೆಗೆ ವರದಿಯಾಗಿವೆ. ನೇಹಾ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ನಡೆಸುತ್ತಿದ್ದು, ಉಳಿದ ಪ್ರಕರಣಗಳ ತನಿಖೆಯನ್ನು ಆಯಾ ಠಾಣೆ ಪೊಲೀಸರು ಮುಂದುವರಿಸಿದ್ದಾರೆ.

ಕೊಲೆ, ಅತ್ಯಾಚಾರ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಸೈಬರ್ ಕ್ರೈಂ ಹಾಗೂ ಇತರೆ ಪ್ರಕಾರದ ಅಪರಾಧಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಅಂಕಿ–ಅಂಶಗಳಿಂದ ಗೊತ್ತಾಗುತ್ತಿದೆ.

ಡ್ರಗ್ಸ್ ಸಾಗಣೆ ಹಾಗೂ ಮಾರಾಟ ಪ್ರಕರಣಗಳೂ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಯುವ ಸಮೂಹ, ಡ್ರಗ್ಸ್ ವ್ಯಸನಿಗಳಾಗಿ ಅಪರಾಧ ಎಸಗುತ್ತಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿಯಿದೆ. ಪೊಲೀಸರು, ನಿರಂತರವಾಗಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಸಾಗಾಟಗಾರರು ಹಾಗೂ ಮಾರಾಟಗಾರರನ್ನು ಬಂಧಿಸುತ್ತಿ
ದ್ದಾರೆ. ಅಷ್ಟಾದರೂ, ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ಮಟ್ಟಹಾಕಲು ಪೊಲೀಸರಿಂದ ಸಾಧ್ಯವಾಗಿಲ್ಲ.

ಮಾಹಿತಿ ಇದ್ದರೂ ನಿರ್ಲಕ್ಷ್ಯ: ‘ಕೆಲ ಅಪರಾಧಗಳ ಬಗ್ಗೆ ಪೊಲೀಸರಿಗೆ ಪೂರ್ವ ಮಾಹಿತಿ ಲಭ್ಯವಾಗಿರುತ್ತದೆ. ಇಂಥ ಪ್ರಕರಣಗಳಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದು, ಇದರಿಂದಾಗಿ ಅಪರಾಧಗಳು ಘಟಿಸುತ್ತಿವೆ. ಪೂರ್ವ ಮಾಹಿತಿಯನ್ನು ನಿರ್ಲಕ್ಷಿಸುವ ಅಧಿಕಾರಿಗಳ ಮೇಲೆ ಕಠಿಣ ಕ್ರಮಗಳನ್ನು ಜರುಗಿಸಿದರೆ ಮಾತ್ರ ಕೆಲ ಅಪರಾಧಗಳನ್ನು ನಿಯಂತ್ರಿಸಬಹುದು’ ಎಂದು ಪೊಲೀಸ್ ನಿವೃತ್ತ ಅಧಿಕಾರಿಯೊಬ್ಬರು ಹೇಳಿದರು.

ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಅವರಿಗೆ ಆರೋ‍ಪಿ ಕಿರುಕುಳ ನೀಡುತ್ತಿದ್ದ ಬಗ್ಗೆ ಪೋಷಕರು ಠಾಣೆಗೆ ಮಾಹಿತಿ ನೀಡಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಜರುಗಿಸಿರಲಿಲ್ಲವೆಂಬ ಆರೋಪವಿದೆ. ಇದೇ ಕಾರಣಕ್ಕೆ, ಠಾಣೆ ಇನ್‌ಸ್ಪೆಕ್ಟರ್ ಚಂದ್ರಶೇಖರ ಚಿಕ್ಕೋಡಿ ಹಾಗೂ ಹೆಡ್ ಕಾನ್‌ಸ್ಟೆಬಲ್ ರೇಖಾ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಕರ್ತವ್ಯಲೋಪದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆಯೂ ಗೃಹ ಸಚಿವ ಜಿ. ಪರಮೇಶ್ವರ ಅವರು ಹುಬ್ಬಳ್ಳಿ–ಧಾರವಾಡ ಕಮಿಷನರ್ ಅವರಿಗೆ ಸೂಚನೆ ನೀಡಿದ್ದಾರೆ.

‘ಪೊಲೀಸರ ಅಸಡ್ಡೆ’

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಥಾಪ್ರಕಾರವಿದೆ. ಸಿಬ್ಬಂದಿ ಕೊರತೆ ಇದ್ದರೂ ಪೊಲೀಸರು, ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಚಿಕ್ಕಮಗಳೂರು ಹಾಗೂ ರಾಮನಗರದಲ್ಲಿ ವಕೀಲರು ಹಾಗೂ ಪೊಲೀಸರ ನಡುವೆ ಇತ್ತೀಚೆಗೆ ಗಲಾಟೆಗಳು ನಡೆದಿದ್ದವು. ಪೊಲೀಸರ ಮೇಲೆಯೇ ಪ್ರಕರಣಗಳು ದಾಖಲಾಗಿದ್ದವು. ಸಂತ್ರಸ್ತ ಪೊಲೀಸರು ದೂರು ನೀಡಿದರೂ ಹಿರಿಯ ಅಧಿಕಾರಿಗಳು ಕ್ರಮ ಜರುಗಿಸಿರಲಿಲ್ಲ. ಈ ಘಟನೆಯಿಂದ ಬಹುತೇಕ ಪೊಲೀಸರು ನೊಂದಿದ್ದಾರೆ. ‘ನಮ್ಮ ಮೇಲೆ ಆದ ಅನ್ಯಾಯಕ್ಕೆ ನ್ಯಾಯ ಸಿಗಲಿಲ್ಲ. ಹೆಚ್ಚು ಕೆಲಸ ಮಾಡಿ ಏನು ಮಾಡುವುದು. ಸಂಬಳ ಬಂದರೆ, ಸಾಕು’ ಎಂಬ ಮನಃಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆಯೇ ವಾಟ್ಸ್‌ಆ್ಯಪ್ ಹಾಗೂ ಇತರೆಡೆ ನಿತ್ಯವೂ ಚರ್ಚೆ ನಡೆಯುತ್ತಿದೆ’ ಎಂದು ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿ ಹೇಳಿದರು.

‘ಅಪರಾಧಿಯ ಮನಃಸ್ಥಿತಿ ಪ್ರಶ್ನೆ’

‘ಕಾನೂನು ಸುವ್ಯವಸ್ಥೆ ಹಾಗೂ ಅಪರಾಧಗಳು ಎರಡೂ ಬೇರೆ ಬೇರೆ. ವರ ನಟ ರಾಜಕುಮಾರ್ ಅವರು ತೀರಿಕೊಂಡಾಗ ನಡೆದ ಘಟನೆಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಘಟನೆಗಳು ಎನ್ನಬಹುದು. ಆದರೆ ಕೊಲೆ ಹಾಗೂ ಇತರೆ ಅಪರಾಧಗಳು ಆಯಾ ಆರೋಪಿಯ ಮನಃಸ್ಥಿತಿಗೆ ಸಂಬಂಧಪಟ್ಟವು. ಕೊಲೆಗಳು ನಡೆಯುತ್ತಿವೆ ಎಂಬ ಮಾತ್ರಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಲಾಗದು. ಆದರೆ ಅಪರಾಧದ ಬಗ್ಗೆ ಪೂರ್ವ ಮಾಹಿತಿ ಇದ್ದರೂ ಅದನ್ನು ತಡೆಯದಿದ್ದರೆ ಸಂಬಂಧಪಟ್ಟ ಪೊಲೀಸರ ಕರ್ತವ್ಯಲೋಪವಾಗುತ್ತದೆ

- ಎಸ್‌.ಟಿ. ರಮೇಶ್ ರಾಜ್ಯ ಪೊಲೀಸ್ ಮಹಾನಿರ್ದೇಶಕ (ನಿವೃತ್ತ)

ಯುವತಿಯರು ಗುರಿ: ಪೋಷಕರಲ್ಲಿ ಆತಂಕ’ ಇತ್ತೀಚಿನ ದಿನಗಳಲ್ಲಿ ಯುವತಿಯರನ್ನು ಗುರಿಯಾಗಿಸಿಕೊಂಡು ಕೊಲೆ ಹಾಗೂ ಹಲ್ಲೆಯಂಥ ಘಟನೆಗಳು ನಡೆಯುತ್ತಿದ್ದು ಇದರಿಂದ ಪೋಷಕರು ಆತಂಕಗೊಂಡಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ‘ನೇಹಾ ಹಿರೇಮಠ ಅಂಜಲಿ ಅಂಬಿಗೇರ ಬಾಲಕಿ ಮೀನಾ ಸಾವಿಗೆ ಕಾರಣರಾದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು’ ಎಂಬ ಆಗ್ರಹಗಳು ವ್ಯಕ್ತವಾಗಿವೆ. ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ವಿದ್ಯಾರ್ಥಿನಿ ಪ್ರಭುದ್ಯಾ (21) ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು ಇದೊಂದು ಕೊಲೆ ಎಂಬುದಾಗಿ ಹಲವರು ಆರೋಪಿಸುತ್ತಿದ್ದಾರೆ. ‘ಹೆಣ್ಣು ಮಕ್ಕಳ ಮೇಲೆ ಮೇಲಿಂದ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಹೆಣ್ಣು ಮಕ್ಕಳನ್ನು ಸಂವೇದನಾಶೀಲರನ್ನಾಗಿಸಬೇಕಿದೆ. ಜೊತೆಗೆ ಪುರುಷ ಪ್ರಧಾನ ವ್ಯವಸ್ಥೆಯ ಕ್ರೌರ್ಯದ ಮುಖದ ಬಗ್ಗೆ ತಿಳಿವಳಿಕೆ ಮೂಡಿಸಬೇಕಿದೆ. ಆತ್ಮರಕ್ಷಣಾ ಕಲೆಗಳನ್ನು ಕಲಿಸಬೇಕಿದೆ’ ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ.

‘ಹೆಡೆ ಬಿಚ್ಚಿದ ಪಾತಕ – ಭೂಗತ ಲೋಕ’

ಠಾಣೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಸಿಬ್ಬಂದಿ ಮೈ ಮೇಲೆ ಬಾಡಿವೋರ್ನ್‌ ಕ್ಯಾಮೆರಾ ಹಾಗೂ ಆರೋಪಿಗಳಿಗೆ ಹೊಡೆದರೆ ನೂರೆಂಟು ತನಿಖೆಗಳು... ಇಂಥ ಸನ್ನಿವೇಶದಲ್ಲಿರುವ ಪೊಲೀಸರು ತಮ್ಮತನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ದಂಡ ಪ್ರಯೋಗವನ್ನೇ ಕೈಬಿಟ್ಟಿದ್ದಾರೆ. ಇದರಿಂದಲೇ ಪಾತಕ–ಭೂಗತ ಲೋಕ ಹೆಡೆ ಬಿಚ್ಚುತ್ತಿದೆ. ಪೊಲೀಸರು ಎಂದರೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಲಾಭದಾಯಕ ಹುದ್ದೆ ಕೊಡಿಸಿದ ರಾಜಕಾರಣಿಗಳಿಗೆ ಪೊಲೀಸರು ಸಲಾಂ ಎನ್ನುತ್ತಿದ್ದಾರೆ. ಹಿರಿಯ ಅಧಿಕಾರಿಗಳ ಮಾತು ಕೇಳುತ್ತಿಲ್ಲ. ಇದು ಹೀಗೆ ಮುಂದುವರಿದರೆ ಕಾನೂನು ಸುವ್ಯವಸ್ಥೆ ಅಧೋಗತಿಗೆ ಹೋಗಲಿದೆ.

ಎಸ್‌.ಕೆ. ಉಮೇಶ್ ನಿವೃತ್ತ ಎಸ್‌ಪಿ   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT