ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆತ್ಮನಿರ್ಭರ್‌’ ರಾಜ್ಯ ನಂಬರ್‌ 1: ಸೋಮಶೇಖರ್‌

ನಬಾರ್ಡ್‌ನಿಂದ 644 ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಗೆ ₹198.96 ಕೋಟಿ ಸಾಲ
Last Updated 2 ಮಾರ್ಚ್ 2021, 21:38 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರದ ಆತ್ಮ ನಿರ್ಭರ್‌ ಯೋಜನೆಯಡಿ ನಬಾರ್ಡ್‌ (ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌) ಈವರೆಗೆ 644 ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಗೆ (ಪ್ಯಾಕ್ಸ್‌ಗಳು) ₹ 198.96 ಕೋಟಿ ಸಾಲ ಮಂಜೂರು ಮಾಡಿದೆ. ಈ ಯೋಜನೆ ಅನುಷ್ಠಾನದಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್ ಹೇಳಿದರು.

ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಈವರೆಗೆ 949 ಪ್ಯಾಕ್ಸ್‌ಗಳು ₹355.84 ಕೋಟಿ ಸಾಲಕ್ಕೆ ಅರ್ಜಿ ಸಲ್ಲಿಸಿವೆ. ಮಾರ್ಚ್‌ ಅಂತ್ಯದೊಳಗೆ 1,000 ಪ್ಯಾಕ್ಸ್‌ಗಳ ಯೋಜನೆಯ ಲಾಭ ಪಡೆಯುವ ಗುರಿ ಹೊಂದಲಾಗಿದೆ’ ಎಂದು ಅವರು ತಿಳಿಸಿದರು.

‘ಯೋಜನೆಯಲ್ಲಿ ರೈತರ ಜಮೀನುಗಳಿಗೆ ಕೊಯ್ಲು ನಂತರ ಮೂಲಸೌಕರ್ಯವನ್ನು ಪ್ಯಾಕ್ಸ್‌, ರೈತ ಉತ್ಪಾದಕ ಸಂಘಗಳು, ಅಗ್ರಿ ಎಂಟರ್‌ಪ್ರೈಸಸ್‌ಗಳ ಮೂಲಕ ಒದಗಿಸಲು ಉದ್ದೇಶಿಸಲಾಗಿದೆ. ಪ್ರತಿ ಪ್ಯಾಕ್ಸ್‌ಗಳಿಗೆ ತಲಾ ₹ 2 ಕೋಟಿ ಸಾಲ ನೀಡಲಾಗುತ್ತದೆ. ಆ ಮೂಲಕ,
ಪ್ಯಾಕ್ಸ್‌ಗಳನ್ನು ಬಹುಪಯೋಗಿ ಸೇವಾ ಕೇಂದ್ರಗಳಾಗಿ ಪರಿವರ್ತಿಸಲು ಬ್ಯಾಂಕುಗಳಿಂದ ಶೇ 4ರ ಬಡ್ಡಿ ದರದಲ್ಲಿ ಕೇಂದ್ರ ಸಾಲ ಮಂಜೂರು ಮಾಡುತ್ತದೆ. ಅದರಲ್ಲಿ ಕೇಂದ್ರದಿಂದ ಶೇ 3 ಬಡ್ಡಿ ದರ ಸಹಾಯಧನ ಸಿಗುತ್ತದೆ. ಪ್ಯಾಕ್ಸ್‌ಗಳಿಗೆ ಕೇವಲ ಶೇ 1 ಬಡ್ಡಿದರದಲ್ಲಿ ಸಾಲ ಸಿಕ್ಕಂತಾಗುತ್ತದೆ’ ಎಂದು ಅವರು ವಿವರಿಸಿದರು.

‘ಪ್ರಸಕ್ತ ಸಾಲಿನಲ್ಲಿ ಮಾರ್ಚ್‌ ಅಂತ್ಯದ ವೇಳೆಗೆ 24.50 ಲಕ್ಷ ರೈತರಿಗೆ
₹ 1,450 ಕೋಟಿ ಅಲ್ಪಾವಧಿ ಬೆಳೆಸಾಲ, 70 ಲಕ್ಷ ರೈತರಿಗೆ ₹1,200 ಕೋಟಿ ಮಧ್ಯಮಾವಧಿ, ದೀರ್ಘಾವಧಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಅದರಲ್ಲಿ ಈವರೆಗೆ 21.64 ಲಕ್ಷ ರೈತರಿಗೆ ₹ 14,979.73 ಕೋಟಿ ಅಲ್ಪಾವಧಿ ಸಾಲ ವಿತರಿಸಲಾಗಿದೆ. 36 ಲಕ್ಷ ರೈತರಿಗೆ ₹800.51 ಕೋಟಿ ಮಧ್ಯಮಾವಧಿ, ದೀರ್ಘಾವಧಿ ಸಾಲ ವಿತರಿಸಲಾಗಿದೆ. ತಿಂಗಳ ಅಂತ್ಯದೊಳಗೆ ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

‘36 ಲಕ್ಷ ಸ್ವಸಹಾಯ ಸಂಘಗಳಿಗೆ ₹ 1,200 ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿತ್ತು. ಅದರಲ್ಲಿ 21 ಲಕ್ಷ ಗುಂಪುಗಳಿಗೆ ₹ 754.39 ಕೋಟಿ (ಶೇ 62.86) ಗುರಿ ಸಾಧಿಸಲಾಗಿದೆ. ‘ಬಡವರ ಬಂಧು’ ಯೋಜನೆಯಡಿ 8,778 ಬೀದಿ ವ್ಯಾಪಾರಿಗಳಿಗೆ
₹ 7.69 ಕೋಟಿ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸಲಾಗಿದೆ’ ಎಂದರು.

‘ಕಾಯಕ’ ಯೋಜನೆಯಲ್ಲಿ 2,500 ಸ್ವಸಹಾಯ ಗುಂಪುಗಳ ಪೈಕಿ 245 ಗುಂಪುಗಳಿಗೆ ₹ 10.81 ಕೋಟಿ ಸಾಲ ನೀಡಲಾಗಿದೆ’ ಎಂದೂ ಸಚಿವ ಸೋಮಶೇಖರ್‌ ವಿವರಿಸಿದರು.

‘ಕೋವಿಡ್‌ ಸಾಂಕ್ರಾಮಿಕ ರೋಗದ ಕಾರಣದಿಂದ ರೈತರಿಗೆ ನೆರವು ನೀಡುವ ಉದ್ದೇಶದಿಂದ ನಾಲ್ಕೂ ವಿಭಾಗಗಳಲ್ಲಿ ಈಗಾಗಲೇ ‘ಆರ್ಥಿಕ ಸ್ಪಂದನ’ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಉದ್ದೇಶಗಳಿಗೆ ₹37,366 ಕೋಟಿ ಸಾಲವನ್ನು
ವಿತರಿಸಲಾಗಿದೆ’ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT