ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೆಗಾಫೋನ್’ ಕಿತ್ತ ಪೊಲೀಸರು; ವ್ಯಾಪಾರಿಗಳ ಆಕ್ರೋಶ

‘ಅಮಾವೀಯ ವರ್ತನೆ’ ಎಂದು ಖಂಡಿಸಿದ ವ್ಯಾಪಾರಿಗಳು
Last Updated 5 ಅಕ್ಟೋಬರ್ 2021, 15:45 IST
ಅಕ್ಷರ ಗಾತ್ರ

ಬೆಂಗಳೂರು: ತಳ್ಳುಗಾಡಿ ವ್ಯಾಪಾರಿಗಳು ಬಳಸುವ ಮೆಗಾಫೋನ್‌ಗಳನ್ನು ಪೊಲೀಸರು ಏಕಾಏಕಿ ಜಪ್ತಿ ಮಾಡಿದ್ದು, ಈ ವರ್ತನೆಗೆ ನಗರದ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೆಲ ಸಾರ್ವಜನಿಕರು ದೂರು ನೀಡಿದ್ದಾರೆ’ ಎಂಬ ಕಾರಣ ನೀಡಿ ಪುಲಿಕೇಶಿನಗರ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, 15 ವ್ಯಾಪಾರಿಗಳ ಮೆಗಾಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ. ವ್ಯಾಪಾರಿಗಳನ್ನು ಠಾಣೆಗೆ ಕರೆಸಿ, ಮೆಗಾಫೋನ್‌ ಬಳಸದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಪೊಲೀಸರ ಈ ವರ್ತನೆಯನ್ನು ಖಂಡಿಸಿರುವ ತಳ್ಳುಗಾಡಿ ವ್ಯಾಪಾರಿಗಳು, ‘ಬೀದಿ ಬೀದಿ ಸುತ್ತಿ ನ್ಯಾಯಯುತವಾಗಿ ದುಡಿಯುತ್ತಿರುವ ನಮ್ಮ ಮೇಲೆ ಏಕೆ ನಿಮ್ಮ (ಪೊಲೀಸರು) ದರ್ಪ’ ಎಂದು ಪ್ರಶ್ನಿಸುತ್ತಿದ್ದಾರೆ.

ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ, ‘ತರಕಾರಿ, ಹೂವು, ಹಣ್ಣು ಹಾಗೂ ಇತರೆ ವಸ್ತುಗಳನ್ನು ಮಾರಲೆಂದು ವ್ಯಾಪಾರಿಗಳು ತಳ್ಳುಗಾಡಿಯಲ್ಲಿ ಸುತ್ತಾಡುತ್ತಿದ್ದಾರೆ. ಮೆಗಾಫೋನ್‌ಗಳನ್ನು ಬಳಸಿ ಜೋರಾಗಿ ಕೂಗುತ್ತಾರೆ. ಇದರಿಂದ ವೃದ್ಧರು, ಅನಾರೋಗ್ಯ ಪೀಡಿತರು ಹಾಗೂ ಆನ್‌ಲೈನ್ ಪಾಠ ಕೇಳುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ದೂರುಗಳು ಬಂದಿದ್ದವು' ಎಂದರು.

‘ಪುಲಿಕೇಶಿನಗರ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ 6.30 ಗಂಟೆಯಿಂದ 8.30 ಗಂಟೆವರೆಗಿನ ಅವಧಿಯಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ನಡೆಸಲಾಯಿತು. ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿ ಜಾಗೃತಿ ಮೂಡಿಸಿ, ವಾಪಸು ಕಳುಹಿಸಲಾಗಿದೆ. ಎಲ್ಲ ಠಾಣೆ ವ್ಯಾಪ್ತಿಯಲ್ಲೂ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದೂ ಹೇಳಿದರು.

ಪೊಲೀಸರದ್ದು ಅಮಾನವೀಯ ವರ್ತನೆ: ಪೊಲೀಸರ ವರ್ತನೆಯನ್ನು ಖಂಡಿಸಿರುವ ಬೆಂಗಳೂರು ಬೀದಿಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ವಿನಯ್ ಶ್ರೀನಿವಾಸ್, ‘ಇದೊಂದು ಪೊಲೀಸರ ಅಮಾನೀಯ ವರ್ತನೆ. ಇದನ್ನು ನಾವು ಸಹಿಸುವುದಿಲ್ಲ’ ಎಂದರು.

‘ಜನಸಂಪರ್ಕ ಸಭೆಯಲ್ಲಿ ಯಾರೋ ಒಬ್ಬರು ಹೇಳಿದ ಮಾತ್ರಕ್ಕೆ ತಳ್ಳುಗಾಡಿ ವ್ಯಾಪಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸುವುದು ಸರಿಯಲ್ಲ. ಅಪಾರ್ಟ್‌ಮೆಂಟ್‌ ಸಮುಚ್ಚಯ, ಬಹುಮಹಡಿ ಕಟ್ಟಡಗಳಿಂದ ಕೂಡಿರುವ ಬೆಂಗಳೂರು ಸಾಕಷ್ಟು ಬೆಳೆದಿದೆ. ಕೇವಲ ಧ್ವನಿಯಿಂದ ಕೂಗಿ ವ್ಯಾಪಾರ ಮಾಡುವುದು ಕಷ್ಟ. ಆ ರೀತಿ ಮಾಡಿದರೆ, ವ್ಯಾಪಾರಿಗಳು ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ’ ಎಂದೂ ಹೇಳಿದರು.

‘ಕೋವಿಡ್‌ ಸಂದರ್ಭದಲ್ಲಿ ತಳ್ಳುಗಾಡಿ ವ್ಯಾಪಾರಿಗಳೇ ಮನೆ ಮನೆಗೆ ಹೋಗಿ ಜನರಿಗೆ ಅಗತ್ಯವಸ್ತುಗಳನ್ನು ಪೂರೈಕೆ ಮಾಡಿದ್ದರು. ಅವರೆಲ್ಲ ಕೊರೊನಾ ಯೋಧರು. ಅವರಿಗೆ ಪ್ರೋತ್ಸಾಹ ನೀಡಬೇಕಾದ ಪೊಲೀಸರು, ಅವರ ಅನ್ನವನ್ನೇ ಕಿತ್ತುಕೊಳ್ಳುವುದು ಯಾವ ನ್ಯಾಯ’ ಎಂದೂ ಅವರು ಪ್ರಶ್ನಿಸಿದರು.

ವ್ಯಾಪಾರ ಆಗದಿದ್ದರೆ ಉಪವಾಸ: ಶಿವಾಜಿನಗರ ಹಾಗೂ ಸುತ್ತಮುತ್ತ ತಳ್ಳುಗಾಡಿಯಲ್ಲಿ ಹೂವು ಮಾರುವ ಲಕ್ಷ್ಮಮ್ಮ, ‘ನನಗೆ 50 ವರ್ಷ. ಕೂಗಲು ಧ್ವನಿ ಇಲ್ಲ. ಹೀಗಾಗಿ, ಮೆಗಾಫೋನ್ ಬಳಸುತ್ತೇನೆ. ಈಗ ಪೊಲೀಸರು, ಮೆಗಾಫೋನ್ ಜಪ್ತಿ ಮಾಡಿದರೆ ವ್ಯಾಪಾರವೇ ಬಂದ್ ಆಗುತ್ತದೆ. ಹೂವು ವ್ಯಾಪಾರವನ್ನೇ ನಂಬಿರುವ ನಾನು ಬೀದಿಗೆ ಬೀಳಬೇಕಾಗುತ್ತದೆ’ ಎಂದರು.

ಮಲ್ಲೇಶ್ವರದ ವ್ಯಾಪಾರಿ ಎಸ್. ಲೋಕೇಶ್, ‘ತಳ್ಳುಗಾಡಿಯಲ್ಲಿ ಹೋಗಿ ಮೆಗಾಫೋನ್‌ನಲ್ಲಿ ಕೂಗಿದರೆ ಜನರು ಮನೆಯಿಂದ ಹೊರಬಂದು ವ್ಯಾಪಾರ ಮಾಡುತ್ತಾರೆ. ಇದುವರೆಗೂ ಯಾರೊಬ್ಬರೂ ಮೆಗಾಫೋನ್ ಬಗ್ಗೆ ತಗಾದೆ ತೆಗೆದಿಲ್ಲ. ಪೊಲೀಸರೇ ನಮ್ಮ ಬಳಿ ಬಂದು, ಮೆಗಾಫೋನ್ ಬಳಸದಂತೆ ಎಚ್ಚರಿಸುತ್ತಿದ್ದಾರೆ’ ಎಂದರು.

‘ಯಾರಿಗಾದರೂ ತೊಂದರೆ ಆಗಿದ್ದರೆ, ಅವರ ಮನೆ ಮುಂದೆ ಮೆಗಾಫೋನ್ ಬಳಸುವುದಿಲ್ಲ. ಆದರೆ, ಮೆಗಾಫೋನ್‌ ಬಳಸುವುದನ್ನೇ ಸಂಪೂರ್ಣ ನಿಷೇಧಿಸಿದರೆ ಮನೆ ಮಂದಿಯೆಲ್ಲ ಉಪವಾಸವಿರಬೇಕಾಗುತ್ತದೆ’ ಎಂದೂ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT