ಗುರುವಾರ , ಮಾರ್ಚ್ 30, 2023
32 °C
ಗಿಜಿಗುಡುತ್ತಿದ್ದ ಬೀದಿಗಳಲ್ಲಿ ಈಗಿಲ್ಲ ಜನಜಂಗುಳಿ *ಕೋವಿಡ್‌ ಲಾಕ್‌ಡೌನ್‌ ಏಟು– ಚೇತರಿಸಿಲ್ಲ ವಹಿವಾಟು

ಬೀದಿ ಬದಿ ವ್ಯಾಪಾರ: ಗ್ರಾಹಕರ ಬರ– ವರ್ತಕ ತತ್ತರ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಒಂದರ ಮೇಲೊಂದು ಲಾಕ್‌ಡೌನ್‌ನಿಂದ ಕಂಗಾಲಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯೂ ಬರಸಿಡಿಲಾಗಿ ಎರಗಿದೆ. ಗ್ರಾಹಕರ ಬರಗಾಲ ಎದುರಿಸುತ್ತಿರುವ ಈ ವ್ಯಾಪಾರಿಗಳಿಗೆ ಇಂದಿಗೂ ಅರೆಹೊಟ್ಟೆಯೇ ಗತಿಯಾಗಿದೆ.

ಲಾಕ್‌ಡೌನ್‌ಗಳು ತೆರವಾದರೂ ಬೀದಿ ಬದಿ ವ್ಯಾಪಾರವಿನ್ನೂ ಕಳೆಗಟ್ಟಿಲ್ಲ. ಕೋವಿಡ್ ತಂದೊಡ್ಡಿದ ಆರ್ಥಿಕ ಮುಗ್ಗಟ್ಟು ಇನ್ನೂ ಹಳಿಗೆ ಮರಳಿಲ್ಲ. ದುಡಿಯುವ ಕೈಗಳಿಗೆ ಕೈ ತುಂಬ ಕೆಲಸ ಇನ್ನೂ ಸಿಕ್ಕಿಲ್ಲ. ಬೇರೆ ಉದ್ಯಮಗಳು ಸೊರಗಿರುವುದು ಕೂಡ ಬೀದಿ ಬದಿ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ವಸ್ತುಗಳನ್ನು ಖರೀದಿಸುವ ಶಕ್ತಿ ಸಾಮಾನ್ಯ ಜನರಲ್ಲಿ ಇಲ್ಲದಿರುವುದು ಬೀದಿ ಬದಿ ವಹಿವಾಟು ಕ್ಷೀಣಿಸುವಂತೆ ಮಾಡಿದೆ.

ಸದಾ ಗಿಜಿಗುಡುತ್ತಿದ್ದ ಗಾಂಧಿನಗರ, ಗಾಂಧಿ ಬಜಾರ್, ಶಿವಾಜಿನಗರದಂತಹ ಬೀದಿ ಬದಿ ಮಾರುಕಟ್ಟೆಗಳೂ ಗ್ರಾಹಕರಿಲ್ಲದೆ ಬಣಗುಡುತ್ತಿವೆ. ಹಬ್ಬದ ಸಂದರ್ಭಗಳಲ್ಲಿ ಹೂವು, ಹಣ್ಣಿನ ವ್ಯಾಪಾರ ಸ್ವಲ್ಪ ಕಳೆಗಟ್ಟುತ್ತದೆ. ಉಳಿದ ದಿನಗಳಲ್ಲಿ ಗಾಂಧಿ ಬಜಾರ್‌ನಲ್ಲಿ ವ್ಯಾಪಾರವಿಲ್ಲದೆ ಅಂಗಡಿಗಳನ್ನು ಮುಚ್ಚಿರುವ ಉದಾಹರಣೆಗಳು ಇವೆ.

ಅಂದಿನ ತುತ್ತನ್ನು ಅಂದೇ ದುಡಿದು ತಿನ್ನಬೇಕಾದ ಸ್ಥಿತಿಯಲ್ಲಿರುವ ಕುಟುಂಬಗಳೇ ಈ ಬೀದಿ ಬದಿ ವ್ಯಾ‍ಪಾರದಲ್ಲಿ ಹೆಚ್ಚಿನದಾಗಿ ತೊಡಗಿಸಿಕೊಂಡಿವೆ. ವಿಶೇಷವಾಗಿ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಹೊಟ್ಟೆಪಾಡಿಗೆ ಈ ವಹಿವಾಟನ್ನೇ ನಂಬಿಕೊಂಡಿದ್ದಾರೆ. ದಿನದ ತುತ್ತಿನ ಚೀಲ ತುಂಬಿಸಿಕೊಳ್ಳಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

‘ಎರಡು ವರ್ಷಗಳಿಂದ ಪಡಬಾರದ ಕಷ್ಟಪಡುತ್ತಿದ್ದೇವೆ. ಮನೆ ಬಾಡಿಗೆ ಕಟ್ಟಿಲ್ಲ, ತಿನ್ನಲು ಗತಿ ಇಲ್ಲದ ಸ್ಥಿತಿಗೆ ಬಂದು ತಲುಪಿದ್ದೇವೆ. ಕೈ ಸಾಲ ಮತ್ತು ಬ್ಯಾಂಕ್‌ ಸಾಲಗಳು ಶೂಲವಾಗಿ ಬೆಳೆಯುತ್ತಿವೆ. ಶಾಲೆಗಳು ತೆರೆದಿವೆಯಾದರೂ ಮಕ್ಕಳನ್ನು ಕಳುಹಿಸಲು ಆಗುತ್ತಿಲ್ಲ. ಬಿಡಿಗಾಸೂ ಇಲ್ಲದಿರುವಾಗ ಶಾಲೆಯ ಶುಲ್ಕ ಪಾವತಿಸುವುದಾದರೂ ಹೇಗೆ’ ಎಂದು ಗಾಂಧಿ ಬಜಾರ್ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷೆ ವನಜಾಕ್ಷಿ ಪ್ರಶ್ನಿಸಿದರು.

‘ಪಾತ್ರೆ ಉಜ್ಜುವ ಸ್ಕ್ರಬ್ಬರ್‌ಗಳನ್ನು ಶಿವಾಜಿನಗರದ ರಸ್ತೆ ಬದಿಯಲ್ಲಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಒಂದು ಸ್ಕ್ರಬ್ಬರ್ ಮಾರಾಟ ಮಾಡಿದರೆ ₹4 ಲಾಭ ಸಿಗುತ್ತದೆ. ಬೆಳಿಗ್ಗೆಯಿಂದ ಸಂಜೆ ತನಕ ಮಾರಾಟ ಮಾಡಿದರೂ ₹100 ದುಡಿದರೆ ಹೆಚ್ಚು ಎನ್ನುವ ಸ್ಥಿತಿ ಇದೆ’ ಎಂದು ಶಿವಾಜಿನಗರದ ಅಯಾಸ್ ತಿಳಿಸಿದರು.

‘ನನ್ನ ಈ ಸ್ಥಿತಿ ಗಮನಿಸಿ ಅಕ್ಕ–ಪಕ್ಕದ ಅಂಗಡಿಯವರು, ಅಣ್ಣ–ತಮ್ಮಂದಿರು ಕೈಲಿದ್ದಷ್ಟು ಹಣ ಕೊಡುತ್ತಾರೆ. ಎಲ್ಲವನ್ನೂ ಒಗ್ಗೂಡಿಸಿ ಅಕ್ಕಿ, ಬೇಳೆ ತೆಗೆದುಕೊಂಡು ಹೋದರಷ್ಟೇ ಮಕ್ಕಳ ಹೊಟ್ಟೆ ತುಂಬುತ್ತದೆ. ಇಲ್ಲದಿದ್ದರೆ ಅರೆಹೊಟ್ಟೆಯೇ ಗತಿ’ ಎಂದು ಅವರು ಗದ್ಗದಿತರಾದರು.

‘ಮನೆಯಲ್ಲಿ ನಮಗಾಗಿ ಕಾಯುವ ಹೆಂಡತಿ– ಮಕ್ಕಳಿಗೆ ‌ಬರಿಗೈನಲ್ಲಿ ಹೋಗಿ ಮುಖ ತೋರಿಸುವಾಗ ಆಗುವ ಸಂಕಟ ಯಾರಿಗೂ ಬೇಡ’ ಎನ್ನುವಾಗ ಅವರ ಕಣ್ಣಾಲಿಗಳು ತುಂಬಿದ್ದವು.

ಬೋಣಿಯೇ ಆಗದ ದಿನಗಳು

‘ದಿನವಿಡೀ ಬೀದಿ ಬದಿಯಲ್ಲಿ ನಿಂತು ಗ್ರಾಹಕರನ್ನು ಕೂಗಿ ಕರೆದು ಗಂಟಲು ಕಟ್ಟಿಹೋದರೂ ಬೋಣಿಯೇ ಆಗದೆ ದಿನಗಳನ್ನು ಎಣಿಸುತ್ತಿದ್ದೇವೆ’ ಎಂದು ಗಾಂಧಿ ನಗರದ ಬೀದಿ ಬದಿ ವ್ಯಾಪಾರಿ ರಮೇಶ್ ತಿಳಿಸಿದರು.

‘ಗಾಂಧಿನಗರ ಎಂದರೆ ಸದಾ ಜನರಿಂದ ಗಿಜಿಗುಡುವ ಜಾಗ. ಆ ದಿನಗಳು ಈಗ ಮರೆಯಾಗಿವೆ. ಪೆಟ್ರೋಲ್ ಖರ್ಚು ಮಾಡಿಕೊಂಡು ಬಂದು ಅಂಗಡಿ ತೆರೆದರೆ ಊಟ, ತಿಂಡಿ, ಕಾಫಿ ಖರ್ಚಿಗೂ ಹಣ ಇಲ್ಲದಾಗಿದೆ. ಜೇಬುಗಳಲ್ಲಿ ತಡಕಾಡಿದರೂ ₹5 ಸಿಗುವುದು ಕಷ್ಟವಾಗಿದೆ. ಸಂಜೆ ತನಕ ಬೋಣಿಯೇ ಆಗದ ಅನೇಕ ದಿನಗಳನ್ನು ಕಂಡಿದ್ದೇವೆ’ ಎಂದು ಬೇಸರ ತೋಡಿಕೊಂಡರು.

‘ರಸ್ತೆ ಬದಿಯಲ್ಲಿ ಸಣ್ಣ ಸಣ್ಣ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದೇನೆ. ಒಂದೇ ಒಂದು ಬಟ್ಟೆಯೂ ಮಾರಾಟವಾಗದ ದಿನಗಳಿವೆ. ಸರ್ಕಾರದ ಪರಿಹಾರಗಳು ಎಲ್ಲರಿಗೂ ತಲುಪಿಲ್ಲ. ಹೊಟ್ಟೆ ಹೊರೆಯುವುದೇ ಕಷ್ಟವಾಗಿದೆ’ ಎಂದರು.

ಸಗಟು ಬೆಲೆ ಹೆಚ್ಚಳವೂ ಬರೆ

‘ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದು ಕೂಡ ನಮ್ಮ ವ್ಯಾಪಾರ ವಹಿವಾಟಿನ ಮೇಲೆ ಬರೆ ಎಳೆದಿದೆ’ ಎಂದು ಶಿವಾಜಿನಗರದ ಬೀದಿ ಬದಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಜಮೀರ್ ಹೇಳುತ್ತಾರೆ.

‘ಬಡ ಮತ್ತು ಮಧ್ಯಮ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ಬದಿ ವಸ್ತುಗಳನ್ನು ಖರೀದಿಸುತ್ತಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದು ಅವರ ಜೇಬುಗಳನ್ನು ಖಾಲಿ ಆಗಿಸಿದೆ. ಇನ್ನೊಂದೆಡೆ, ನಾವು ಸಗಟು ರೂಪದಲ್ಲಿ ಖರೀದಿ ಮಾಡುತ್ತಿದ್ದ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಇವೆಲ್ಲದರ ಪರಿಣಾಮ ವ್ಯಾಪಾರ ಕುಸಿದಿದೆ’ ಎಂದು ವಿವರಿಸಿದರು.

‘₹100ಕ್ಕೆ ನಾಲ್ಕರಿಂದ ಐದು ಬನಿಯನ್ ಮಾರಾಟ ಮಾಡುತ್ತಿದ್ದೆ. ಈಗ ಸಗಟು ಬೆಲೆ ಜಾಸ್ತಿ ಆಗಿರುವುದರಿಂದ ₹100ಕ್ಕೆ ಮೂರು ಬನಿಯನ್ ಅಷ್ಟೇ ಕೊಡಲು ಸಾಧ್ಯ. ಇನ್ನಷ್ಟು ದಿನಗಳು ಕಳೆದರೆ ₹100ಕ್ಕೆ ಎರಡು ಬನಿಯನ್ ಅಷ್ಟೇ ಕೊಡಲು ಸಾಧ್ಯ. ಅಷ್ಟು ಹಣ ಕೊಟ್ಟು ಖರೀದಿಸುವ ಶಕ್ತಿ ಜನರಿಗಿಲ್ಲ. ಕಡಿಮೆ ಬೆಲೆಗೆ ಮಾರಾಟ ಮಾಡುವ ಸ್ಥಿತಿಯಲ್ಲಿ ನಾವಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು