ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನಗರ ರೈಲು ಯಾನ: ನಗರಕ್ಕೇನು ಬೇಕು? ಚುಕುಬುಕು ಬೇಕು!

Last Updated 31 ಆಗಸ್ಟ್ 2018, 19:50 IST
ಅಕ್ಷರ ಗಾತ್ರ

ಬೆಂಗಳೂರು: ನಗರಕ್ಕೆ ಏನು ಬೇಕು?... ಹಸಿರು ಬೇಕು, ಉಸಿರು ಬೇಕು, ಮೊದಲು ರೈಲು ಬೇಕು!

– ಉಪನಗರ ರೈಲು ಯೋಜನೆ ಜಾರಿಗೆ ಆಗ್ರಹಿಸಿ ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆ ಶುಕ್ರವಾರ ಹಮ್ಮಿಕೊಂಡ ಜಾಗೃತಿ ಅಭಿಯಾನದಲ್ಲಿ ಕೇಳಿಬಂದ ಘೋಷವಾಕ್ಯ. ಯಶವಂತಪುರದಿಂದ ಆರಂಭವಾದ ಈ ಅಭಿಯಾನ ಬೈಯಪ್ಪನಹಳ್ಳಿ ಹಾದು ದಂಡು ನಿಲ್ದಾಣದಲ್ಲಿ ಕೊನೆಗೊಂಡಿತು. 13 ನಿಲ್ದಾಣಗಳಲ್ಲಿ ಬೇಡಿಕೆ ಕುರಿತ ಬರಹಗಳ ಫಲಕ, ರೈಲಿನ ಮಾದರಿ ಹಿಡಿದ ಸಂಘಟನೆಯ ಸದಸ್ಯರು, ಸ್ಥಳೀಯ ನಾಗರಿಕರು ಜಾಗೃತಿ ಮೂಡಿಸಿದರು.

ಯಶವಂತಪುರ ನಿಲ್ದಾಣದಲ್ಲಿ 2.30ಕ್ಕೆ ಸೇರಿದ ಸದಸ್ಯರು ಯಶವಂತಪುರ– ಹೊಸೂರು ರೈಲು ಹತ್ತಿದರು. 2.55ರ ವೇಳೆಗೆ ಯಾನ ಆರಂಭವಾಯಿತು. ಈ ಮಾರ್ಗದಲ್ಲಿ ನಿತ್ಯ ಓಡಾಡುವ ಉದ್ಯೋಗಿಗಳು, ನಿವಾಸಿಗಳು, ಯುವಜನರುಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಹೊರವರ್ತುಲ ರಸ್ತೆಯ ಸುತ್ತಮುತ್ತಲಿನ ಉದ್ಯೋಗಿಗಳಿಗೆ ಉಪನಗರ ರೈಲಿನ ಅಗತ್ಯತೆ ಬಗ್ಗೆ ಅರಿವು ಮೂಡಿಸುವುದು, ದೀರ್ಘಾವಧಿಯಿಂದ ಇರುವ ಬೇಡಿಕೆಯನ್ನು ಈಡೇರಿಸುವ ಬಗ್ಗೆ ರೈಲ್ವೆ ಇಲಾಖೆಗೆ ಒತ್ತಡ ಹೇರುವುದು,ಸರ್ಕಾರ ಹಾಗೂ ವಿವಿಧ ಪಾಲುದಾರರ ಮನವೊಲಿಸುವುದು ಅಭಿಯಾನದ ಉದ್ದೇಶ ಎಂದು ಸಂಘಟನೆಯ ಸದಸ್ಯರು ಹೇಳಿದರು.

‘ಇಂದಿನ ಯಾತ್ರೆ ಬಹುತೇಕ ಐಟಿ ಕ್ಯಾಂಪಸ್‌ಗಳಿಗೆ ಹತ್ತಿರವಿರುವ ಮಾರ್ಗದಲ್ಲೇ ಹಾದು ಹೋಗಿದೆ. ಈ ಮಾರ್ಗವನ್ನು ಲಕ್ಷಾಂತರ ಐಟಿ ಉದ್ಯೋಗಿಗಳು ಬಳಸಿಕೊಳ್ಳಬಹುದು. ಸಂಚಾರ ದಟ್ಟಣೆ ನಿಭಾಯಿಸಲು ಉಪನಗರ ರೈಲು ಸಂಚಾರ ಸರಿಯಾದ ಆಯ್ಕೆ.ನಗರದ ಮಿತಿಗಳಲ್ಲಿ 200 ಕಿಲೋಮೀಟರ್‌ ವ್ಯಾಪ್ತಿಯಲ್ಲಿರುವ 45ಕ್ಕೂ ಹೆಚ್ಚು ನಿಲ್ದಾಣಗಳನ್ನು ಸರಿಯಾಗಿ ಬಳಸಿಕೊಳ್ಳಬಹುದು. ಆದರೆ, ಈ ಪ್ರಯೋಗಕ್ಕೆ ರೈಲ್ವೆ ಇಲಾಖೆ ಮುಂದಾಗಿಲ್ಲ. ಮುಂಬೈ, ಚೆನ್ನೈ, ಮತ್ತು ಹೈದರಾಬಾದಿನಂತೆ ಇಲ್ಲಿಯೂ ಉಪನಗರ ರೈಲು ಯೋಜನೆ ಜಾರಿಗೆ ಬರಬೇಕು. ಅದಕ್ಕಾಗಿ ಸಾಮೂಹಿಕ ಒತ್ತಡ ಅಗತ್ಯ’ ಎಂದು ಹೇಳಿದರು.

ಯಾನ ಹೇಗಿತ್ತು?
‘ಸುಮಾರು 50– 60 ಜನರಿಂದ ಆರಂಭವಾದ ಯಾನ ಒಂದೊಂದು ನಿಲ್ದಾಣ ದಾಟುತ್ತಿದ್ದಂತೆಯೇ ಮೂರಂಕಿ ದಾಟಿತು. ನೂರಾರು ಜನರು ಪಾಲ್ಗೊಂಡರು. ಪುಟ್ಟ ಪುಟ್ಟ ನಿಲ್ದಾಣಗಳ ಅಂಗಡಿಗಳಲ್ಲಿ ಹಣ್ಣು, ತರಕಾರಿ ಕೊಂಡರು. ಹಾಡು, ಹಾಸ್ಯ ಚಟಾಕಿ, ರೈಲು ಬೇಕು ಘೋಷವಾಕ್ಯ ಕೇಳಿಬಂದಿತು. ಇದೊಂದು ಸಣ್ಣಮಟ್ಟಿನ ಪಿಕ್ನಿಕ್‌ನಂತೆಯೇ ಆಗಿತ್ತು’ ಎಂದು ಅಭಿಯಾನದ ನೇತೃತ್ವ ವಹಿಸಿದ್ದ ಶ್ರೀನಿವಾಸ್‌ ಅಲವಿಲ್ಲಿ ಹೇಳಿದರು.

‘ಹೊರವರ್ತುಲ ರಸ್ತೆಯಲ್ಲಿ ಈಗಿನ ಸಂಚಾರ ದಟ್ಟಣೆ ತೀರಾ ಕೆಟ್ಟದಾಗಿದೆ. ಯಶವಂತಪುರದಿಂದ ಹೀಳಲಿಗೆವರೆಗೆ ನಾವು ಒಂದು ಗಂಟೆಯಲ್ಲಿ ಬಂದೆವು. ಕೇವಲ ₹ 10 ವೆಚ್ಚವಾಯಿತು. ಸಿಗ್ನಲ್‌, ಪಥವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ತಂದರೆ ಈ ಅವಧಿಯನ್ನು ಇನ್ನೂ ಕಡಿಮೆ ಮಾಡಬಹುದು. ನಾವೇನೂ ಹೊಸ ಯೋಜನೆ ಕೇಳುತ್ತಿಲ್ಲ. ಇರುವ ವ್ಯವಸ್ಥೆಯನ್ನು ಸುಧಾರಿಸಿ 45 ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿ’ ಎಂದು ಸಾಫ್ಟ್‌ವೇರ್‌ ಎಂಜಿನಿಯರ್‌ ಯೋಗೀಶ್‌ ಅಭಿಪ್ರಾಯಪಟ್ಟರು.

‘ಯಾನದುದ್ದಕ್ಕೂ ನಾವು ವಯಸ್ಸಿನ ಭೇದವಿಲ್ಲದೆ ಅನೇಕ ಹೊಸಬರೊಂದಿಗೆ ಬೆರೆತೆವು. ಬೆಳ್ಳಂದೂರು, ಕರ್ಮಲ್‌ರಾಮ್‌ನಂಥ ಸುಂದರ ಪ್ರದೇಶಗಳಲ್ಲಿ ಪ್ರಯಾಣ ಮನಸ್ಸಿಗೆ ಮುದ ನೀಡುತ್ತದೆ. ಒತ್ತಡರಹಿತ ಪ್ರಯಾಣ ಈ ಮಾರ್ಗದಲ್ಲಿದೆ. ಲಕ್ಷಾಂತರ ಜನರು ಈ ರೈಲುಗಳ ಮೂಲಕ ಓಡಾಡಿದರೆ ಸಂಚಾರ ದಟ್ಟಣೆ ಅರ್ಧಕ್ಕರ್ಧ ಇಳಿಯುತ್ತದೆ. ಸಮಯವೂ ಉಳಿಯುತ್ತದೆ’ ಎಂದು ಅವರು ಹೇಳಿದರು

2016ರಲ್ಲಿ ಇದೇ ಸಂಘಟನೆ ಇದೇ ಬೇಡಿಕೆ ಮುಂದಿಟ್ಟುಕೊಂಡು ಚುಕುಬುಕು ಬೇಕು ಹೆಸರಿನಲ್ಲಿ ದೊಡ್ಡ ಅಭಿಯಾನ ನಡೆಸಿತ್ತು.


**

ಕಡಿಮೆಯಾಗಲಿದೆ ವಾಹನಗಳ ಬಳಕೆ
ಉಪನಗರ ರೈಲು ಸಾರಿಗೆಯಿಂದ ವಾಹನಗಳ ಬಳಕೆ ಪ್ರಮಾಣ ಹೇಗೆ ಕಡಿಮೆಯಾಗಲಿದೆ? ಅಭಿಯಾನದಲ್ಲಿ ಪಾಲ್ಗೊಂಡವರು ಕೊಡುವ ಲೆಕ್ಕಾಚಾರ ಹೀಗಿದೆ:
ಮುಂಬೈ ನಗರದಲ್ಲಿ ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 1 ರವರೆಗೆ ಪ್ರತಿ ಮೂರು ನಿಮಿಷಕ್ಕೊಂದು ಪ್ರಯಾಣಿಕ ರೈಲು ಸಂಚರಿಸುತ್ತದೆ. 75 ಲಕ್ಷ ಜನ ಈ ಸೌಲಭ್ಯ ಬಳಸುತ್ತಾರೆ. ಹಾಗಾಗಿ ಅಲ್ಲಿ ಖಾಸಗಿ ವಾಹನ ಸಂಖ್ಯೆ 40 ಲಕ್ಷಕ್ಕಿಂತಲೂ ಕಡಿಮೆ ಇದೆ.

ಬೆಂಗಳೂರಿನಲ್ಲೂ 25 ಲಕ್ಷಕ್ಕೂ ಹೆಚ್ಚು ಮಂದಿ ರೈಲು ಬಳಸುವಂತೆ ಮಾಡಲು ಸಾಧ್ಯವಿದೆ. ಇದರಿಂದ ಪ್ರಸ್ತುತ ಬಳಕೆಯಾಗುತ್ತಿರುವ ಕಾರು ಹಾಗೂ ದ್ವಿಚಕ್ರ ವಾಹನಗಳ ಪೈಕಿ ಅರ್ಧದಷ್ಟು ರಸ್ತೆಗೆ ಇಳಿಯದಂತೆ ನೋಡಿಕೊಳ್ಳಬಹುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT