ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಂಧಗಳು ಬೂಂದಿ ಪ್ರೀತಿಯೇ ಸಕ್ಕರೆ: ಲೇಖಕಿ ಸುಧಾಮೂರ್ತಿ

Published 3 ಡಿಸೆಂಬರ್ 2023, 1:22 IST
Last Updated 3 ಡಿಸೆಂಬರ್ 2023, 1:22 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಬಂಧಗಳೆಂಬುದು ಬೂಂದಿ ಇದ್ದ ಹಾಗೆ. ಪ್ರೀತಿಯೆಂಬ ಸಕ್ಕರೆ ಇದ್ದರಷ್ಟೆ ಬೂಂದಿ ಕಾಳಿಗೆ ರುಚಿ. ಹಾಗೆಯೇ ಹೃದಯಗಳ ನಡುವೆ ಪ್ರೀತಿಯೆಂಬುದು ಸೇತುವೆ’ ಎಂದು ಲೇಖಕಿ ಸುಧಾಮೂರ್ತಿ ಅಭಿಪ್ರಾಯಪಟ್ಟರು. 

ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಶನಿವಾರ ತಮ್ಮ ಕೃತಿ ‘ಕಾಮನ್‌ ಯೆಟ್‌ ಅನ್‌ಕಾಮನ್‌’ ಕುರಿತು ಮಾತನಾಡಿದರು.

‘ಈ ಕೃತಿಯಲ್ಲಿ ಒಟ್ಟು 14 ಕತೆಗಳಿವೆ. ಬಂಡಲ್‌ ಬಿಂದು, ಲಂಚ್‌ಬಾಕ್ಸ್‌ ನಳಿನಿ, ಅಂಗಡಿ ಮಾಲೀಕ ಜಯಂತ್‌, ಹೇಮಾ, ಭಾಗೀರಥಿ - ಹೀಗೆ ವಿಶಿಷ್ಟ ಎನಿಸುವ ಪಾತ್ರಗಳಿವೆ. ಇವೆಲ್ಲವೂ ನಾನು ಬದುಕಿದ ಪರಿಸರದಿಂದ ಪ್ರೇರಣೆ ಪಡೆದು ರೂಪಿಸಿದ ಪಾತ್ರಗಳೇ. ಅದರಲ್ಲಿಯೂ ಲಂಚ್‌ಬಾಕ್ಸ್‌ ನಳಿನಿ ಎಂಬ ಪಾತ್ರ ನನ್ನ ಬಗ್ಗೆಯೇ ಆಗಿದೆ’ ಎಂದು ಪಾತ್ರಗಳನ್ನು ವಿವರಿಸಿದರು. 

‘ನಾನೇನೂ ದೊಡ್ಡ ಪಾಕಪ್ರವೀಣೆಯಲ್ಲ. ಆದರೆ, ಊಟದ ಬಗ್ಗೆ ವಿಶೇಷ ಆಸಕ್ತಿ ಇದೆ. ಮೊದಲಿನಿಂದಲೂ ಗೆಳತಿಯರ, ಬಂಧುಗಳ, ಊರಿನವರ ಮನೆಗಳಿಗೆ ಕರೆದರೆ ಊಟಕ್ಕೆ ಹೋಗುವ ಅಭ್ಯಾಸವಿದೆ. ಆಹ್ವಾನಿಸಿದ ಆಪ್ತರ ಮನೆಯಲ್ಲಿ ಊಟ ಮಾಡುತ್ತ, ಇಷ್ಟದ ಪದಾರ್ಥಗಳನ್ನು ಲಂಚ್‌ಬಾಕ್ಸ್‌ನಲ್ಲಿ ಕಟ್ಟಿಕೊಳ್ಳುತ್ತಿದ್ದೆ. ಹೀಗೆ ರಾಶಿ ಲಂಚ್‌ಬಾಕ್ಸ್‌  ಸಂಗ್ರಹಗೊಳ್ಳುತ್ತಿತ್ತು. ಇದನ್ನೇ ‘ಲಂಚ್‌ಬಾಕ್ಸ್‌ ನಳಿನ’ ಪಾತ್ರವಾಗಿ ಸೃಷ್ಟಿಸಿದ್ದೇನೆ‘ ಎಂದು ತಿಳಿಸಿದರು. 

‘ಊಟ ಬೇಕೆಂದರೆ ಜೊಮ್ಯಾಟೊ, ಸ್ವಿಗ್ಗಿಯಲ್ಲಿ ಖರೀದಿಸಬಹುದು. ಬೇಕೆಂದ ಹೋಟೆಲ್‌ನಲ್ಲಿಯೂ ಮಾಡಬಹುದು. ಆದರೆ ದ್ವೀಪಗಳಾಗಿ ಬದುಕುತ್ತಿರುವ ನಮಗೆ ಆಪ್ತರನ್ನು ಮತ್ತೆ ಭೇಟಿಯಾಗಲು ‘ಲಂಚ್‌ಬಾಕ್ಸ್‌’ ಎಂಬುದು ಒಂದು ಸಿಹಿ ನೆವವಷ್ಟೆ. ಇಂಥ ಸಣ್ಣಪುಟ್ಟ ವಿಚಾರಗಳೇ ಬದುಕಿನ ಮೌಲ್ಯವನ್ನು ಹೆಚ್ಚಿಸುತ್ತದೆ. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದುಕೊಂಡು ಬದುಕಿಗೊಂದು ಘನತೆ ಒದಗಿಸಿದವರೆಲ್ಲರೂ ಇಲ್ಲಿ ಪಾತ್ರಗಳಾಗಿದ್ದಾರೆ‘ ಎಂದು ಹೇಳಿದರು. 

‘ಬಂಗಾಳಿಗಳಲ್ಲಿ ಬಹುತೇಕರು ಚಂದದ ಹೆಸರು ಇಟ್ಟುಕೊಂಡಿರುತ್ತಾರೆ. ಅದಕ್ಕೆ ವಿರುದ್ಧ ಎನ್ನುವಂತೆ ಕೆಟ್ಟ ಅಡ್ಡಹೆಸರುಗಳನ್ನೂ ಇಟ್ಟುಕೊಂಡಿರುತ್ತಾರೆ. ಉತ್ತರ ಕರ್ನಾಟಕದಲ್ಲಿಯೂ ಹೀಗೆ ಇದೆ. ಪರಿಮಳ ಇದ್ದರೆ ಪರಿ ಎಂದೂ, ಪ್ರಹ್ಲಾದವಿದ್ದರೆ ಪಲ್ಯವೆಂದು ಕರೆಯಲಾಗುತ್ತದೆ’ ಎಂದಾಗ ನೆರೆದಿದ್ದವರೆಲ್ಲ ನಗೆಗಡಲಿನಲ್ಲಿ ತೇಲಿದರು. 

ಪ್ರತಿ 150 ಕಿ.ಮೀ ದಾಟಿದರೆ ಭಾಷೆ, ಆಹಾರ ಪದ್ಧತಿ, ವೇಷಭೂಷಣ ಎಲ್ಲವೂ ಬದಲಾಗುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿಯೊಬ್ಬರ ಬದುಕಿನಲ್ಲಿಯೂ ವಿಶಿಷ್ಟ ಪಾತ್ರಗಳಿರುತ್ತವೆ. ಅದನ್ನು ನೋಡಲು ಮೊದಲು ಕಲಿಯಬೇಕು. ಆ ಪಾತ್ರಗಳಾಡುವ ಮಾತುಗಳನ್ನು ಆಲಿಸುವುದನ್ನು ಕಲಿಯಬೇಕು. ಆಗ ಕಥೆ ತಾನಾಗಿಯೇ ಮೂಡುತ್ತದೆ’ ಎಂದು ಕಥಾರಚನೆಯ ಬಗ್ಗೆ ಸಲಹೆ ನೀಡಿದರು. ಈ ಸಮ್ಮೇಳನದಲ್ಲಿ ಮಕ್ಕಳ ಭಾಗವಹಿಸುವಿಕೆ ಎದ್ದು ಕಾಣುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT