ಭಾನುವಾರ, ಆಗಸ್ಟ್ 14, 2022
25 °C

ಪೊಲೀಸರೆದುರೇ ಆತ್ಮಹತ್ಯೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತನ್ನನ್ನು ಬಂಧಿಸಲು ಬಂದ ಪೊಲೀಸರ ಎದುರೇ ಕಾರ್ತಿಕ್ ಅಲಿಯಾಸ್ ಗಂಗಾಧರ್ ಎಂಬಾತ ಚೂರಿಯಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಸಂಬಂಧ ಯಲಹಂಕ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಘಟನೆ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಸಕರಾಯನಪಟ್ಟಣ ಪಿಎಸ್‌ಐ ಮೌನೀಶ್ ಎಂಬುವರು ದೂರು ನೀಡಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಆತ್ಮಹತ್ಯೆಗೆ ಯತ್ನಿಸಿದ ಆರೋಪದಡಿ ಕಾರ್ತಿಕ್ ಹಾಗೂ ಆತನ ಸಂಬಂಧಿಕರಾದ ಗಂಗರತ್ನಮ್ಮ, ನಟರಾಜ್, ರೇವಣಸಿದ್ದಪ್ಪ ಹಾಗೂ ನಾಗರಾಜು ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಯಲಹಂಕ ಉಪನಗರ ಠಾಣೆ ಪೊಲೀಸರು ಹೇಳಿದರು.

‘ಆರೋಪಿ ಸ್ನೇಹಿತನೊಬ್ಬ, ಕಡೂರಿನ ಉಪನ್ಯಾಸಕ ಸುಮಂತ್ ಕುಮಾರ್ ಜೊತೆ ಜಮೀನು ಮಾರಾಟ ವಿಚಾರಕ್ಕಾಗಿ ಮಾತುಕತೆ ನಡೆಸಲು ಬಾಣೂರಿನಲ್ಲಿ ಭೇಟಿಯಾಗಿದ್ದ. ಸ್ಥಳದಲ್ಲಿ ಕಾರ್ತಿಕ್‌ ಸಹ ಇದ್ದ. ಕ್ಷುಲ್ಲಕ ಕಾರಣಕ್ಕಾಗಿ ಜಗಳ ಶುರುವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಅವಾಗಲೇ ಕಾರ್ತಿಕ್, ತನ್ನ ಬಳಿಯ ಗನ್ ತೆಗೆದು ಸುಮಂತ್ ಮೇಲೆ ಗುಂಡು ಹಾರಿಸಿದ್ದ. ರಕ್ಷಣೆಗೆ ಬಂದ ಕಲ್ಯಾಣ್ ಕುಮಾರ್ ಎಂಬುವರ ಮೇಲೂ ಗುಂಡಿನ ದಾಳಿ ನಡೆಸಿದ್ದ. ಇಬ್ಬರೂ ಗಾಯಗೊಂಡಿದ್ದರು. ಅವರನ್ನು ಕೆ.ಆರ್‌.ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.’

‘ಆರೋಪಿ ನಗರಕ್ಕೆ ಬಂದು ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದ. ಮಾಹಿತಿ ಕಲೆಹಾಕಿದ್ದ ಪಿಎಸ್‌ಐ ಮೌನೀಶ್‌ ನೇತೃತ್ವದ ತಂಡ, ಜೂನ್ 1ರಂದು ರಾತ್ರಿ 11 ಗಂಟೆಗೆ ಆರೋಪಿ ಉಳಿದುಕೊಂಡಿದ್ದ ಮಾತೃ ಲೇಔಟ್‌ನ ಸಂಬಂಧಿಕರ ಮನೆಗೆ ಬಂದಿತ್ತು. ಅದೇ ವೇಳೆಯೇ ಆರೋಪಿ ಕಾರ್ತಿಕ್, ಚೂರಿಯಿಂದ ಹೊಟ್ಟೆಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ’ ಎಂದೂ ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು