ಶುಕ್ರವಾರ, ನವೆಂಬರ್ 22, 2019
25 °C
ಸುಮನಹಳ್ಳಿ ಮೇಲ್ಸೇತುವೆ ದುರಸ್ತಿ ಶೀಘ್ರ: ಆಯುಕ್ತ

ವಾಹನ ಸಂಚಾರ ನಿರ್ಬಂಧ: ವರದಿ ಆಧರಿಸಿ ನಿರ್ಧಾರ

Published:
Updated:
Prajavani

ಬೆಂಗಳೂರು: ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಕಾಂಕ್ರೀಟ್‌ ಕುಸಿತಗೊಂಡಿದ್ದನ್ನು ತಪಾಸಣೆ ನಡೆಸುತ್ತಿರುವ ಬ್ಯೂರೊ ವೆರಿಟಾಸ್‌ ಸಂಸ್ಥೆ ಬುಧವಾರ ಸಂಜೆ ಒಳಗೆ ವರದಿ ನೀಡುವ ನಿರೀಕ್ಷೆ ಇದೆ.

ಮೇಲ್ಸೇತುವೆ ಕಾಂಕ್ರೀಟ್‌ನ ಮಾದರಿಗಳನ್ನು ಸಂಗ್ರಹಿಸಿರುವ ಸಂಸ್ಥೆಯು ಅವುಗಳ ಪರಿಶೀಲನೆಸಲುವಾಗಿ ಪ್ರಯೋಗಾಲಯಕ್ಕೆ ಕಳುಹಿಸಿದೆ. ಡ್ರೋನ್‌ ಕ್ಯಾಮೆರಾಗಳನ್ನು ಬಳಸಿ ಮೇಲ್ಸೇತುವೆಯ ತಳ ಭಾಗದ ದೃಶ್ಯಗಳನ್ನೂ ಚಿತ್ರೀಕರಿಸಿ ಅವುಗಳನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಿದೆ.

ಸದ್ಯಕ್ಕೆ ಈ ಮೇಲ್ಸೇತುವೆಯಲ್ಲಿ ನಾಯಂಡಹಳ್ಳಿಯಿಂದ ಗೊರಗುಂಟೆಪಾಳ್ಯ ಕಡೆಗೆ ಹೋಗುವ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕಾಂಕ್ರೀಟ್‌ ಕುಸಿತದಿಂದ ಹಾನಿಗೊಳಗಾದ ಮೇಲ್ಸೇತುವೆಯ ಭಾಗವನ್ನು ದುರಸ್ತಿಪಡಿಸುವ ಕಾರ್ಯವೂ ನಡೆಯುತ್ತಿದೆ. ದುರಸ್ತಿ ವೇಳೆ ಮೇಲ್ಸೇತುವೆಯ ಇನ್ನೊಂದು ರಸ್ತೆಯಲ್ಲೂ (ಗೊರಗುಂಟೆಪಾಳ್ಯದಿಂದ ನಾಯಂಡಹಳ್ಳಿ ಕಡೆಗೆ) ವಾಹನ ಸಂಚಾರ ನಿರ್ಬಂಧಿಸುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿದೆ.

‘ಮೇಲ್ಸೇತುವೆಯ ಕಾಂಕ್ರೀಟ್‌ ಕುಸಿತಕ್ಕೆ ಕಾರಣವಾಗಿರುವ ಅಂಶಗಳನ್ನು ತಪಾಸಣೆ ನಡೆಸುತ್ತಿರುವ ಸಂಸ್ಥೆ ಬುಧವಾರ ಸಂಜೆ ಒಳಗೆ ವರದಿ ನೀಡಲಿದೆ. ಅವರ ಸಲಹೆಯನ್ನು ಆಧರಿಸಿ ದುರಸ್ತಿ ಪೂರ್ಣಗೊಳ್ಳುವವರೆಗೆ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದೋ ಬೇಡವೋ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು. 

ಹೊರ ವರ್ತುಲ ರಸ್ತೆಯಲ್ಲಿ ಗೊರಗುಂಟೆಪಾಳ್ಯ– ಬಿಇಎಲ್‌ ವೃತ್ತದ ನಡುವೆ ಇರುವ ಮೇಲ್ಸೇತುವೆಯಲ್ಲೂ ಗುಂಡಿಗಳು ಕಾಣಿಸಿಕೊಂಡಿವೆ. ಈ ಸೇತುವೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮೂರು ವರ್ಷಗಳ ಹಿಂದೆ ನಿರ್ಮಿಸಿತ್ತು.

‘ಈ ಮೇಲ್ಸೇತುವೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಂಡಿದ್ದೇವೆ’ ಎಂದು ಆಯುಕ್ತರು ತಿಳಿಸಿದರು.

48 ಗಂಟೆಯಲ್ಲಿ ಗಟ್ಟಿಯಾಗುವ ಕಾಂಕ್ರೀಟ್‌
‘ಸುಮನಹಳ್ಳಿ ಮೇಲ್ಸೇತುವೆಯನ್ನು ತ್ವರಿತಗತಿಯಲ್ಲಿ ದುರಸ್ತಿಪಡಿಸುವ ಸಲುವಾಗಿ ‘ಫ್ರೀ ಫ್ಲೊ ಸಿಮೆಂಟ್‌’ ಬಳಸಲಿದ್ದೇವೆ’ ಎಂದು ಆರ್‌.ಆರ್‌.ನಗರ ವಲಯದ ಮುಖ್ಯ ಎಂಜಿನಿಯರ್‌ ವಿಜಯ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಸಿಮೆಂಟ್‌ 48 ಗಂಟೆಗಳ ಒಳಗೆ ಗಟ್ಟಿಯಾಗುತ್ತದೆ. ಇದರಿಂದ ನಿರ್ಮಿಸುವ ಕಾಂಕ್ರೀಟ್‌ನ ಬಾಳಿಕೆಯೂ ಹೆಚ್ಚು’ ಎಂದರು.

‘ಗಡುವಿನೊಳಗೆ ಗುಂಡಿ ಮುಚ್ಚಿಯೇ ಸಿದ್ಧ’
‘ನಗರದಲ್ಲಿರುವ ರಸ್ತೆ ಗುಂಡಿಗಳಲ್ಲಿ ಶೇ 40ರಷ್ಟನ್ನು ಮುಚ್ಚಿದ್ದೇವೆ. ಇನ್ನುಳಿದ ಶೇ 60ರಷ್ಟನ್ನು ಗಡುವಿನಂತೆ ನ.10ರ ಒಳಗೆ ಮುಚ್ಚುತ್ತೇವೆ’ ಎಂದು ಮೇಯರ್ ಎಂ.ಗೌತಮ್‌ ಕುಮಾರ್‌ ಸ್ಪಷ್ಟಪಡಿಸಿದರು.

‘ಕೆಲವು ರಸ್ತೆಗಳಲ್ಲಿ ಗುಂಡಿ ಮುಚ್ಚಿದರೆ ಸಾಲದು, ಮರು ಡಾಂಬರೀಕರಣವನ್ನೇ ಮಾಡಬೇಕಿದೆ. ಮಾಗಡಿ ರಸ್ತೆಯನ್ನು ದ್ವಾರದಿಂದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆವರೆಗೆ ಡಾಂಬರೀಕರಣ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

‘ಜಲಮಂಡಳಿ ಅಗೆದಿರುವ ರಸ್ತೆಗಳಲ್ಲೂ ಮರು ಡಾಂಬರೀಕರಣ ಮಾಡಬೇಕಾಗುತ್ತದೆ. ಈ ಬಗ್ಗೆ ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಜೊತೆ ಮಾತನಾಡಿದ್ದೇನೆ. ಬೆಸ್ಕಾಂನವರು ಕೆಲವು ರಸ್ತೆಗಳ ಅಡಿ ಹೈಟೆನ್ಷನ್‌ ಕೇಬಲ್‌ ಅಳವಡಿಸುತ್ತಿದ್ದು, ಅಂತಹ ರಸ್ತೆಗಳಿಗೆ ಜಲ್ಲಿ ಮತ್ತು ಕಲ್ಲುಪುಡಿ ಹಾಕಲು ಮಾತ್ರ ಅಂದಾಜುಪಟ್ಟಿ ತಯಾರಿಸಿದ್ದಾರೆ. ಅಂತಹ ರಸ್ತೆಗಳಿಗೂ ಡಾಂಬರೀಕರಣ ನಡೆಸುವ ಬಗ್ಗೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ ಗೌಡ ಅವರ ಬಳಿ ಮಾತನಾಡಿದ್ದೇನೆ’ ಎಂದರು.

‘ದಿವಾಳಿಯಾದ ಸಂಸ್ಥೆ– ದಂಡ ವಸೂಲಿ ಅಸಾಧ್ಯ’
‘ಸುಮನಹಳ್ಳಿ ಮೇಲ್ಸೇತುವೆಯನ್ನು ನಿರ್ಮಿಸಿದ್ದ ಈಸ್ಟ್‌ಕೋಸ್ಟ್‌ ಕಾಂಟ್ರ್ಯಾಕ್ಟರ್ಸ್‌ ಸಂಸ್ಥೆ ಈಗಾಗಲೇ ದಿವಾಳಿಯಾಗಿದೆ. ಅದರಿಂದ ದಂಡ ವಸೂಲಿ ಮಾಡುವುದು ಅಸಾಧ್ಯ’ ಎಂದು  ಗೌತಮ್‌ ಕುಮಾರ್‌ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಸಂಸ್ಥೆಯನ್ನು ಬಿಡಿಎ ಹಾಗೂ ಚೆನ್ನೈ ಮಹಾನಗರ ಪಾಲಿಕೆ ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಿವೆ. ಹಾಗಾಗಿ ಈ ಸಂಸ್ಥೆ ಯಾವುದೇ ಕಾಮಗಾರಿ ನಡೆಸಲು ಬರುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಕ್ರಿಯಿಸಿ (+)