ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ ಲಾಕ್‌ಡೌನ್; ಊರಿಗೆ ಹೊರಟ ಜನ

ತುಮಕೂರು ರಸ್ತೆ, ಮೈಸೂರು ರಸ್ತೆಗಳಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ವಾಹನ ದಟ್ಟಣೆ
Last Updated 4 ಜುಲೈ 2020, 22:37 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ವೈರಾಣು ಹರಡುವಿಕೆ ತಡೆಗಾಗಿ ರಾಜ್ಯದಾದ್ಯಂತ ಭಾನುವಾರ ಲಾಕ್‌ಡೌನ್ ಜಾರಿ ಮಾಡಲಾಗುತ್ತಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ಹಲವರು ಶನಿವಾರ ತಮ್ಮೂರಿನತ್ತ ಪ್ರಯಾಣ ಬೆಳೆಸಿದರು.

ಶನಿವಾರ ರಾತ್ರಿ 8 ಗಂಟೆಯಿಂದಲೇ ಲಾಕ್‌ಡೌನ್‌ ಶುರುವಾಗುವ ಮಾಹಿತಿ ಪಡೆದ ಜನ, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ವಾಹನಗಳಲ್ಲಿ ತಮ್ಮೂರಿನತ್ತ ಮುಖ ಮಾಡಿದರು.

ಕಾರು, ಆಟೊ, ಮ್ಯಾಕ್ಸಿ ಕ್ಯಾಬ್‌ಗಳಲ್ಲಿ ಮನೆ ಸಾಮಗ್ರಿ, ಪೀಠೋಪಕರಣಗಳನ್ನು ಇಟ್ಟುಕೊಂಡು ಜನರು ಹೊರಟಿದ್ದ ದೃಶ್ಯಗಳು ಕಂಡುಬಂದವು.

ಸಾವಿರಾರು ಸಂಖ್ಯೆಯಲ್ಲಿ ಜನರು ಊರಿನತ್ತ ಹೊರಟಿದ್ದರಿಂದ ತುಮಕೂರು ರಸ್ತೆ ಹಾಗೂ ಮೈಸೂರು ರಸ್ತೆಯಲ್ಲಿ ವಾಹನಗಳ ದಟ್ಟಣೆ ಉಂಟಾಯಿತು. ವಾಹನಗಳ ಸಂಚಾರವೂ ನಿಧಾನಗತಿಯಲ್ಲಿತ್ತು.

ತುಮಕೂರು ರಸ್ತೆಯ ನೆಲಮಂಗಲ ಟೋಲ್‌ಗೇಟ್‌ನಲ್ಲಿ ವಿಪರೀತ ಸಂಚಾರ ದಟ್ಟಣೆ ಇತ್ತು. ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಯಶವಂತಪುರ, ಪೀಣ್ಯ, ಜಾಲಹಳ್ಳಿ ಹಾಗೂ ಸುತ್ತಮುತ್ತಲ ಸ್ಥಳಗಳಲ್ಲೂ ವಾಹನಗಳ ಸಂಖ್ಯೆ ಹೆಚ್ಚಿತ್ತು. ಬೈಕ್, ಕಾರು ಸೇರಿದಂತೆ ಹಲವು ವಾಹನಗಳು ನಿಧಾನವಾಗಿ ಚಲಿಸಿದ್ದರಿಂದ ದಟ್ಟಣೆಯೂ ಉಂಟಾಗಿತ್ತು. ಮೈಸೂರು ರಸ್ತೆಯಲ್ಲಿ ನಾಯಂಡನಹಳ್ಳಿ ಜಂಕ್ಷನ್ ಬಳಿಯೂ ವಾಹನಗಳ ದಟ್ಟಣೆ ಇತ್ತು.

ಪ್ರತಿ ಶನಿವಾರವೂ ಜನರು ತಮ್ಮೂರಿಗೆ ಹೋಗಿ ಭಾನುವಾರದ ರಜೆ ಕಳೆದು ಸೋಮವಾರ ಬೆಳಿಗ್ಗೆ ಪುನಃ ಬೆಂಗಳೂರಿಗೆ ಬರುತ್ತಿದ್ದರು. ಆದರೆ, ಕೊರೊನಾ ವೈರಾಣು ಹರಡುವಿಕೆ ಹೆಚ್ಚಾಗಿದ್ದರಿಂದ ಬೆಂಗಳೂರಿನಲ್ಲಿರುವ ಮನೆಯನ್ನು ಖಾಲಿ ಮಾಡಿಕೊಂಡು ತಮ್ಮೂರಿಗೆ ಹೊರಟಿರುವ ಜನರ ಸಂಖ್ಯೆಯೂ ಅಧಿಕವಾಗುತ್ತಿದೆ.

'ಬೆಂಗಳೂರು ಸಹವಾಸ ಬೇಡ'
‘ಕಾಲ್‌ ಸೆಂಟರ್ ಕೆಲಸಕ್ಕಾಗಿ ಬೆಂಗಳೂರಿಗೆ ಬಂದೆ. ಜನ ಇಲ್ಲಿ ರಸ್ತೆಯಲ್ಲೇ ಸಾಯುತ್ತಿದ್ದಾರೆ. ಬೆಂಗಳೂರು ಸಹವಾಸವೇ ಬೇಡವೆಂದು ಊರಿಗೆ ಮರಳುತ್ತಿದ್ದೇನೆ. ಕೃಷಿ ಮಾಡಿಕೊಂಡು ಹೇಗೋ ಜೀವನ ನಡೆಸುತ್ತೇನೆ’ ಎಂದು ಚಿಕ್ಕಮಗಳೂರಿನ ಯುವಕ ಹೇಳಿದರು.

ಗಾರ್ಮೆಂಟ್ಸ್‌ ಕಾರ್ಖಾನೆಯ ಕಾರ್ಮಿಕೆಯೊಬ್ಬರು, ‘ಕೆಲಸವಿಲ್ಲ. ಬಾಡಿಗೆ ಕೊಡುವುದಕ್ಕೂ ಹಣವಿಲ್ಲ. ಹಾಗಾಗಿ ಮನೆ ಖಾಲಿ ಮಾಡಿಕೊಂಡು ಊರಿಗೆ ಹೊರಟಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT