ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರನ ಖಚಿತತೆಗೆ ನಿರಂತರ ಗಸ್ತು: ಜನರ ವೇಷಧಾರಿಯಲ್ಲಿ ಕಾರ್ಯಾಚರಣೆ

ವ್ಯಾಪಾರಿ,
Last Updated 7 ಜೂನ್ 2022, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಮಸೀದಿ ಪಕ್ಕದ ಮನೆಯಲ್ಲಿ ಉಗ್ರ ನೆಲೆಸಿದ್ದಾನೆ’ ಎಂಬ ಮಾಹಿತಿ ಬರುತ್ತಿದ್ದಂತೆ ಗುಪ್ತದಳ ಹಾಗೂ ಪೊಲೀಸ್ ಸಿಬ್ಬಂದಿ ಮೇ 28ರಿಂದಲೇ ಹಗಲು–ರಾತ್ರಿ ಗಸ್ತು ತಿರುಗಲಾರಂಭಿಸಿದ್ದರು. ಉಗ್ರ ತಾಲಿಬ್ ಎಂಬುದು ಖಚಿತವಾಗುತ್ತಿದ್ದಂತೆ ಬಂಧಿಸಿದ್ದಾರೆ.

ಓಕಳಿಪುರ ಮಸೀದಿ ಹಾಗೂ ಸುತ್ತಮುತ್ತ ಪೊಲೀಸರು ನಡೆಸಿದ ಗಸ್ತಿನಿಂದಾಗಿ ಉಗ್ರ ಬಲೆಗೆ ಬಿದ್ದಿದ್ದು, ಆತನ ಬಂಧನದಿಂದಾಗಿ ಸದ್ಯ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ.

ಕಾರ್ಯಾಚರಣೆ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು, ‘ಜಮ್ಮುವಿನಿಂದ ತಲೆಮರೆಸಿಕೊಂಡಿದ್ದ ಉಗ್ರ ತಾಲಿಬ್ ಬೆಂಗಳೂರಿನಲ್ಲಿರುವ ಮಾಹಿತಿ ಜಮ್ಮು–ಕಾಶ್ಮೀರ ಪೊಲೀಸರಿಂದ ಗೊತ್ತಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಕಮಿಷನರ್ ಗುಪ್ತದಳದ ಸಿಬ್ಬಂದಿ ಹಾಗೂ ಪೊಲೀಸರ ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಇಳಿಸಿದ್ದರು’ ಎಂದರು.

‘ಶ್ರೀರಾಮಪುರ ಠಾಣೆ ವ್ಯಾಪ್ತಿಯ ಓಕಳಿ‍ಪುರ ಮಸೀದಿಗೆ ಹೊಂದಿಕೊಂಡು ತಾಲಿಬ್ ಮನೆ ಇತ್ತು. ಹೀಗಾಗಿ, ಮಸೀದಿ ಸುತ್ತಮುತ್ತ ಗಸ್ತು ಹೆಚ್ಚಿಸುವಂತೆ ಠಾಣೆ ಸಿಬ್ಬಂದಿಗೆ ಸೂಚಿಸಲಾಗಿತ್ತು. ತಾಲಿಬ್ ಫೋಟೊ ತೋರಿಸಿ, ಆತನ ಮೇಲೂ ನಿಗಾ ಇರಿಸುವಂತೆ ಹೇಳಲಾಗಿತ್ತು. ವಿಶೇಷ ತಂಡವೂ ಸಾರ್ವಜನಿಕರು ಹಾಗೂ ವ್ಯಾಪಾರಿಗಳ ಸೋಗಿನಲ್ಲಿ ಮಸೀದಿ ಅಕ್ಕ–ಪಕ್ಕದಲ್ಲೇ ಸುತ್ತಾಡುತ್ತಿತ್ತು.’

‘ಜಮ್ಮು–ಕಾಶ್ಮೀರ ಪೊಲೀಸರು ನೀಡಿದ್ದ ಫೋಟೊ ಹಾಗೂ ತಾಂತ್ರಿಕ ಪುರಾವೆಗಳಿಂದ ಮಸೀದಿ ಪಕ್ಕದ ಮನೆಯಲ್ಲಿದ್ದ ನೆಲೆಸಿದ್ದ
ವ್ಯಕ್ತಿ ಉಗ್ರ ತಾಲಿಬ್ ಎಂಬುದು ಖಾತ್ರಿಯಾಗಿತ್ತು. ಬಳಿಕವೇ ಜಂಟಿ ಕಾರ್ಯಾಚರಣೆ ನಡೆಸಿ ರಾತ್ರಿ ವೇಳೆ ಬಂಧಿಸಲಾಯಿತು’ ಎಂದೂ ಅಧಿಕಾರಿ ಹೇಳಿದರು.

ನಕಲಿ ದಾಖಲೆ ನೀಡಿ ಸಿಮ್‌ ಕಾರ್ಡ್‌
‘ನಗರದ ವ್ಯಕ್ತಿಯೊಬ್ಬ ನಕಲಿ ದಾಖಲೆ ಸೃಷ್ಟಿಸಿ ಸಿಮ್‌ ಕಾರ್ಡ್‌ ಖರೀದಿಸಿ, ಉಗ್ರ ತಾಲಿಬ್‌ಗೆ ನೀಡಿದ್ದ. ಅದೇ ಸಿಮ್‌ಕಾರ್ಡ್‌ನಿಂದ ಜಮ್ಮುವಿಗೆ ಕರೆಗಳು ಹೋಗಿದ್ದವೆಂಬ ಮಾಹಿತಿ ಇದೆ. ಸಿಮ್ ಕಾರ್ಡ್‌ ಕೊಟ್ಟವರು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಥಳೀಯರಲ್ಲಿ ಭಯ: ಉಗ್ರ ತಾಲಿಬ್ ಸ್ಥಳೀಯರ ಜೊತೆ ಚೆನ್ನಾಗಿದ್ದ. ಮಸೀದಿ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ. ಅಡುಗೆ ಮಾಡುವುದು ಹಾಗೂ ಇತರೆ ಕೆಲಸಗಳಲ್ಲೂ ಮುಂಚೂಣಿಯಲ್ಲಿರುತ್ತಿದ್ದ. ಆತ ಉಗ್ರ ಎಂಬುದನ್ನು ಕೇಳಿ ಭಯವಾಗುತ್ತಿದೆ’ ಎಂದು ಸ್ಥಳೀಯರೊಬ್ಬರು ಹೇಳಿದರು.

‘ತಾರಿಕ್ ಹೆಸರಿನಿಂದ ಸ್ಥಳೀಯರಿಗೆ ಪರಿಚಿತನಾಗಿದ್ದ. ಸದ್ಯ ಮನೆ ಹಾಗೂ ಮಸೀದಿ ಬಳಿ ಪೊಲೀಸರ ಭದ್ರತೆ ಇದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT