ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುವರ್ಣಮುಖಿ ನದಿ ಪುನಶ್ಚೇತನಕ್ಕೆ ಚಾಲನೆ

ಬೆಂಗಳೂರು ನಗರ, ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಜಲಾನಯನ ಪ್ರದೇಶ
Published 1 ಜೂನ್ 2024, 22:43 IST
Last Updated 1 ಜೂನ್ 2024, 22:43 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೊರಭಾಗದಲ್ಲಿ ಜಲಾನಯನ ಪ್ರದೇಶ ಹೊಂದಿರುವ ಸುವರ್ಣಮುಖಿ ನದಿಯನ್ನು ಅದರ ಜಲಮೂಲಗಳೊಂದಿಗೆ ಪುನಶ್ಚೇತನಗೊಳಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ಕಾರ್ಯಸೂಚಿ ನಿಗದಿ ಮಾಡಿ, ಯೋಜನೆಗೆ ನೋಡಲ್‌ ಅಧಿಕಾರಿಯನ್ನೂ ನೇಮಿಸಿದೆ.

ಬೆಂಗಳೂರು ನಗರ ಇತ್ತೀಚಿನ ವರ್ಷಗಳಲ್ಲಿ ನೀರಿನ ಕೊರತೆ ಎದುರಿಸುತ್ತಿದೆ. ಈ ವರ್ಷ ಸಂಕಷ್ಟ ಹೆಚ್ಚಾಗಿರುವುದರಿಂದ ಭವಿಷ್ಯದಲ್ಲಿ ಇಂತಹ ಸ್ಥಿತಿ ಬಾರದಂತೆ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರಿಗೆ ಮೊದಲು ಕುಡಿಯುವ ನೀರು ಸರಬರಾಜು ಮಾಡಿದ ಅರ್ಕಾವತಿ ನದಿಯ ಉಪನದಿಯಾದ ಸುವರ್ಣಮುಖಿ ನದಿಯ ಜಲಾನಯನವನ್ನು ಪುನಶ್ಚೇನತಗೊಳಿಸಿ, ನೀರು ಹಿಡಿದಿಟ್ಟುಕೊಳ್ಳುವ ಜೊತೆಗೆ ಅಂತರ್ಜಲ ವೃದ್ಧಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.

ರಾಜ್ಯ ಸರ್ಕಾರ, ಆರ್ಟ್‌ ಆಫ್‌ ಲೀವಿಂಗ್‌, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂಬಿ) ವತಿಯಿಂದ ‘ಸುವರ್ಣಮುಖಿ ನದಿ ಜಲಾನಯನ ಪುನಶ್ಚೇತನ ಯೋಜನೆ’ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಬನ್ನೇರುಘಟ್ಟದ ಬೆಟ್ಟಗಳಲ್ಲಿ ಮೂಲ ಹೊಂದಿರುವ ಸುವರ್ಣಮುಖಿ ನದಿ, ಕನಕಪುರದಲ್ಲಿ ಅರ್ಕಾವತಿ ನದಿಯನ್ನು ಸೇರಿಕೊಳ್ಳುವ ಮುನ್ನ ಬಡೇಸಾಬರದೊಡ್ಡಿ ಸಮೀಪದಲ್ಲಿರುವ ಜಲಾಶಯದಲ್ಲಿ ಸುಮಾರು 65 ದಶಲಕ್ಷ ಕ್ಯೂಬಿಕ್‌ ಅಡಿಯಷ್ಟು ನೀರು ಸಂಗ್ರಹ ವಾಗುತ್ತದೆ. 

‘ಸುವರ್ಣಮುಖಿ ಜಲಾನಯನ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿಹೆಚ್ಚು ಅಭಿವೃದ್ಧಿ ಕೆಲಸಗಳಾಗುತ್ತಿದ್ದು, ವಸತಿ ಪ್ರದೇಶಗಳು ಹೆಚ್ಚಾಗುತ್ತಿದೆ. ಇವೆಲ್ಲ ಅತಿಯಾಗುವ ಮುನ್ನ ಜಲಾನಯನ ಪ್ರದೇಶವನ್ನು ಉಳಿಸಿಕೊಂಡರೆ, ಅಂತರ್ಜಲ ವೃದ್ಧಿಯಾಗುವ ಜೊತೆಗೆ ಜಲಾಶಯದಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಸರಬರಾಜು ಮಾಡಬಹುದು’ ಎಂದು ಆರ್ಟ್‌ ಆಫ್‌ ಲೀವಿಂಗ್‌ನ ನದಿ ಪುನಶ್ಚೇತನ ಕಾರ್ಯಕ್ರಮದ ನಿರ್ದೇಶಕ ಡಾ. ಎಲ್‌. ಲಿಂಗರಾಜ್‌ ತಿಳಿಸಿದರು.

ಎಂಪ್ರಿಯಿಂದ ಡಿಪಿಆರ್‌: ಜಲಮೂಲಗಳ ಸಮೀಕ್ಷಾ ವರದಿ ಸಿದ್ಧಪಡಿಸಿರುವ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು (ಎಂಪ‍್ರಿ) ಸುವರ್ಣಮುಖಿ ಜಲಾನಯನ ಪುನಶ್ಚೇತನಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಬೇಕು. ಪ್ರತಿಯೊಂದು ಕಾಮಗಾರಿಗೂ ಎಷ್ಟು ವೆಚ್ಚವಾಗುತ್ತದೆ ಎಂಬ ಮಾಹಿತಿಯ ಪಟ್ಟಿಯನ್ನೂ ನೀಡಬೇಕು ಎಂದು ಸೂಚಿಸಲಾಗಿದೆ. ಎಲ್ಲ ಇಲಾಖೆಗಳ ನೋಡಲ್‌ ಅಧಿಕಾರಿಗಳೊಂದಿಗೆ ಮೇ 31ರಂದು ಕಾರ್ಯಾಗಾರ ನಡೆದಿದ್ದು, ಯೋಜನೆಯ ವಿವರಗಳನ್ನು ನೀಡಲಾಗಿದೆ. 15 ದಿನದಲ್ಲಿ ವಲಯವಾರು ಯೋಜನೆ, ಅನುಷ್ಠಾನದ ಕ್ರಿಯಾಯೋಜನೆ ಸಲ್ಲಿಸಲು ನಿರ್ದೇಶಿಸಲಾಗಿದೆ.

‘ಸಂರಕ್ಷಿಸುವ ಅಗತ್ಯವಿದೆ’

‘ಕೆರೆ ಅಭಿವೃದ್ಧಿಗೆ ಸಾಂಸ್ಥಿಕ ವ್ಯವಸ್ಥೆ ಇದೆ. ಆದರೆ ನದಿಗಳಿಗೆ ಈ ರೀತಿಯ ವ್ಯವಸ್ಥೆ ಇಲ್ಲ. ಕೆರೆಗಳು, ನದಿಗಳು ಹಾಗೂ ಪರಿಸರ ವ್ಯವಸ್ಥೆಯ ಭಾಗವಾಗಿದ್ದು, ಒಂದಕ್ಕೊಂದು ಸಂಬಂಧ ಹೊಂದಿರುತ್ತವೆ. ಈ ಹಿನ್ನೆಲೆಯಲ್ಲಿ ಎರಡೂ ಜಲಮೂಲಗಳನ್ನು ಸಂರಕ್ಷಿಸುವ, ಅಭಿವೃದ್ಧಿಪಡಿಸುವ ಅಗತ್ಯ ಇದೆ’ ಎಂದು ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌ ಹೇಳಿದರು.

ಪ್ರತಿ ತಿಂಗಳೂ ಪ್ರಗತಿ ಪರಿಶೀಲನೆ

ಸುವರ್ಣಮುಖಿ ನದಿ ಜಲಾನಯನ ಪುನಶ್ಚೇತನ ಯೋಜನೆಗೆ ಅರಣ್ಯ, ಜೀವಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಿ.ಸಿ. ರೇ ಅವರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗಿದೆ. ಎಲ್ಲ ಇಲಾಖೆಗಳು ವಲಯವಾರು ಯೋಜನೆಗಳನ್ನು ಒಂದು ತಿಂಗಳಲ್ಲಿ ತಯಾರಿಸಬೇಕು. ತಮ್ಮ ಇಲಾಖೆಯಲ್ಲಿ ಲಭ್ಯವಿರುವ ಅನುದಾನವನ್ನು ಬಳಸಿ ಕಾಮಗಾರಿಗಳನ್ನು ಅನುಷ್ಠಾನ ಮಾಡಬೇಕು. ಪ್ರತಿ ತಿಂಗಳೂ ನೋಡಲ್‌ ಅಧಿಕಾರಿ ವಲಯವಾರು ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಬೇಕು ಎಂದು ಸರ್ಕಾರದ ಹೆ‌ಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌ ಅವರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.‌

ನಗರ ಜಿಲ್ಲೆ ವ್ಯಾಪ್ತಿ: ಜೆ.ಪಿ.ನಗರ 9 ನೇ ಹಂತ, ಆನೇಕಲ್, ಹಾರೋಹಳ್ಳಿ, ಬೆಂಗಳೂರು ದಕ್ಷಿಣ ತಾಲ್ಲೂಕಗಳ ಪ‍್ರದೇಶಗಳು, ತುರಹಳ್ಳಿ ಅರಣ್ಯ.

6 ಹರಿವು: ಬನ್ನೇರುಘಟ್ಟ ಬೆಟ್ಟಗಳಲ್ಲಿ ಮೂಲ ಹೊಂದಿರುವ ಸುವರ್ಣಮುಖಿ ನದಿಗೆ, ತಲಘಟ್ಟಪುರ, ಅಂಜನಾಪುರ–ಗೊಟ್ಟಿಗೆರೆ, ನಾಗನಾಯಕನಳ್ಳಿ, ಭೂತನಹಳ್ಳಿ, ಗುಲಟ್ಟೆಕಾವಲ್‌, ಕೆ.ಜಿ. ಗೊಲ್ಲಪಾಳ್ಯಗಳಿಂದ ಹರಿವು ಹೊಂದಿದೆ.

10 ಉಪ ಅಚ್ಚುಕಟ್ಟು ಪ್ರದೇಶ: ಅಂಜನಾಪುರ, ಗುಡಿಪಾಳ್ಯ, ಗಬ್ಬಡಿ, ಕಂಚಿಗರಪಾಳ್ಯ, ಮೇದಮಾರನಹಳ್ಳಿ, ರಾಗಿಹಳ್ಳಿ ಅರಣ್ಯ, ಸೋಮನಹಳ್ಳಿ, ಸೋಮನಹಳ್ಳಿ ಅರಣ್ಯ, ತರಳು, ತಿಮ್ಮರಾಯನದೊಡ್ಡಿ

ಯಾವ ಇಲಾಖೆಗಳಿಗೆ ಜವಾಬ್ದಾರಿ?

ಅರಣ್ಯ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಜಲಾನಯನ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಬೆಂಗಳೂರು ಜಲಮಂಡಳಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT