ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಎಂಜಿನಿಯರ್‌ ದೇವರಾಜ್‌ಗೆ ಜಾಮೀನು

Last Updated 16 ಡಿಸೆಂಬರ್ 2019, 19:44 IST
ಅಕ್ಷರ ಗಾತ್ರ

ಬೆಂಗಳೂರು: ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ವಂಚನೆ ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳಿಂದ ಬಂಧಿತರಾದ ಬಿಬಿಎಂಪಿ ಸಹಾಯಕ ಎಂಜಿನಿಯರ್‌ ಎಂ.ಎನ್. ದೇವರಾಜ್‌ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಟಿಡಿಆರ್ ಪ್ರಕರಣದಲ್ಲಿ ಎಸಿಬಿ ಅಧಿಕಾರಿಗಳು ದೇವರಾಜ್‌ ಅವರಿಂದ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಕಲೆ ಹಾಕಿದ್ದರು. ಪತ್ನಿಯ ಹೆಸರಿನಲ್ಲಿ ಕಂಪನಿ ತೆರೆದು ವ್ಯವಹಾರ ನಡೆಸಿರುವುದಾಗಿ ವಿಚಾರಣೆ ವೇಳೆ ಅಧಿಕಾರಿ ತಿಳಿಸಿದ್ದರು.

ಆನಂತರ ದೇವರಾಜ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ನಡುವೆ ಜಾಮೀನಿಗಾಗಿ ದೇವರಾಜ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ದೇವರಾಜ್ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದ್ದು, ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಕಡಿಮೆಯಿದೆ. ನಗರದಲ್ಲೇ ವಾಸಿಸುತ್ತಿರುವ ಕಾರಣ ತನಿಖೆಗೆ ಸಹಕರಿಸಲಿದ್ದಾರೆ ಎಂದು ದೇವರಾಜ್ ಪರ ವಕೀಲರು ವಾದ ಮಂಡಿಸಿದ್ದರು.

ಎಸಿಬಿ ತನಿಖೆಗೆ ಸಹಕರಿಸಬೇಕು, ಅಧಿಕಾರಿಗಳು ಕೇಳಿದ ಮಾಹಿತಿ ನೀಡಬೇಕು, ಸಾಕ್ಷ್ಯ ನಾಶಪಡಿಸಲು ಯತ್ನಿಸಬಾರದು ಎಂದು ನ್ಯಾಯಾಲಯ ದೇವರಾಜ್‌ಗೆ ಸೂಚಿಸಿದೆ. ಟಿಡಿಆರ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಎರಡನೇ ಅಧಿಕಾರಿ ದೇವರಾಜ್‌. ಈ ಮೊದಲು ಬಿಡಿಎ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣಲಾಲ್‌ ಬಂಧಿತರಾಗಿದ್ದರು. ಅವರೂ ಈಗ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.

ಟಿ.ಸಿ ಪಾಳ್ಯ ಮತ್ತು ಭಟ್ಟರಹಳ್ಳಿ ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನು, ಕಟ್ಟಡಗಳಿಗೆ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ಟಿಡಿಆರ್‌ ನೀಡಿರುವ ಆರೋಪ ಈ ಅಧಿಕಾರಿಗಳ ಮೇಲಿದೆ. ಈ ವ್ಯವಹಾರದಲ್ಲಿ ಪಾಲಿಕೆ ಮತ್ತು ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.

ಇನ್ನೊಂದು ಎಫ್‌ಐಆರ್‌ ಸಾಧ್ಯತೆ

ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪದ ಮೇಲೂ ದೇವರಾಜ್‌ ಅವರ ವಿರುದ್ಧ ಎಸಿಬಿ ಎಫ್‌ಐಆರ್‌ ದಾಖಲಿಸುವ ಸಾಧ್ಯತೆ ಇದೆ.

ಅಧಿಕಾರಿ ಆದಾಯ, ವೆಚ್ಚ ಹಾಗೂ ಆಸ್ತಿಪಾಸ್ತಿ ಕುರಿತೂ ತನಿಖೆ ನಡೆಯುತ್ತಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT