ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಬೀದಿಗಿಳಿದ ಖಾಸಗಿ ಶಾಲಾ ಶಿಕ್ಷಕರು, ಸಿಬ್ಬಂದಿ

Last Updated 23 ಫೆಬ್ರುವರಿ 2021, 7:38 IST
ಅಕ್ಷರ ಗಾತ್ರ

ಬೆಂಗಳೂರು:ಶಾಲಾ ಶುಲ್ಕ ನಿಗದಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಶಾಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಖಾಸಗಿ ಅನುದಾನಿತ ಶಾಲೆಗಳ ಆಡಳಿ‌ತ ಮಂಡಳಿ ಒಕ್ಕೂಟ (ಕ್ಯಾಮ್ಸ್ ) ಸೇರಿದಂತೆ 10ಕ್ಕೂ ಹೆಚ್ಚು ಖಾಸಗಿ ಶಾಲೆಗಳ ಸಂಘಟನೆಗಳಿಂದ ಈ ಪ್ರತಿಭಟನೆ ನಡೆಯುತ್ತಿದೆ.

ಸಂಗೊಳ್ಳಿ ರೈಲು ನಿಲ್ದಾಣದಿಂದ ಕಾಲ್ನಡಿಗೆಯಲ್ಲಿ ಹೊರಟು, ಫ್ರೀಡಂ ಪಾರ್ಕ್ ತಲುಪಿ ಸಮಾವೇಶ ನಡೆಯಲಿದೆ.‌ ಬಳಿಕ ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಬೇಡಿಕೆಯ ಮನವಿ ಸಲ್ಲಿಸಲಿದ್ದಾರೆ‌‌. ಶಾಲೆ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಶಾಲೆ ಸಿಬ್ಬಂದಿ ಸೇರಿ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.‌ ಖಾಸಗಿ ಶಾಲೆಗಳ ಎಲ್ಲ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವುದರಿಂದ ಖಾಸಗಿ ಶಾಲಾ ಮಕ್ಕಳಿಗೆ ಬೋಧನೆ ಸ್ಥಗಿತಗೊಳಿಸಲಾಗಿದೆ. ಪರ್ಯಾಯವಾಗಿ ಶನಿವಾರ ಪೂರ್ಣ ತರಗತಿ ನಡೆಸಲು ತೀರ್ಮಾನಿಸಿವೆ.

ಖಾಸಗಿ ಶಾಲೆಗಳ ಆರ್ಥಿಕ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸದೆ ಅವೈಜ್ಞಾನಿಕವಾಗಿ ಶುಲ್ಕ ಕಡಿತ ಮಾಡಿರುವುದು, ಹಳೆಯ ಶಾಲೆಗಳಿಗೆ ಹೊಸ ಶಾಲೆಯ ಷರತ್ತು ವಿಧಿಸಿ, ಮಾನ್ಯತೆ ನವೀಕರಣ ಹೆಸರಲ್ಲಿ ಭ್ರಷ್ಟಾಚಾರ, ಕಡ್ಡಾಯ ದಾಖಲಾತಿ, ಹಾಜರಾತಿ, ಕನಿಷ್ಠ ಮೌಲ್ಯ ಮಾಪನಕ್ಕೆ ಒತ್ತು ನೀಡದಿರುವುದು, ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ 371 (ಜೆ) ಬೇಡಿಕೆಗಳ ಈಡೇರಿಕೆ, ಪ್ರಾಥಮಿಕ ಶಾಲೆ ಪುನರ್ ಆರಂಭದ ಗೊಂದಲ, ಆರ್​​ಟಿಇ ಹಣ ಮರುಪಾವತಿ, ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಇಒ ಹಾಗೂ ಡಿಡಿಪಿಐ ಕಚೇರಿಗೆ ನಿಯಂತ್ರಣ ಹಾಕದೆ ಇರುವುದನ್ನು ಪ್ರತಿಭಟಿಸಲಾಗುತ್ತಿದೆ.

ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಶಾಲಾ ಸಿಬ್ಬಂದಿ ಸೇರಿರುವುದರಿಂದ ಮೆಜೆಸ್ಟಿಕ್ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿದೆ. ರೈಲು ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT